ಆ್ಯಂಬುಲೆನ್ಸ್‌ಗೆ ಹಣ ಹೊಂದಿಸಲಾಗದೆ ತನ್ನ 17 ವರ್ಷದ ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಂದೆ ಟ್ರಾಲಿ ರಿಕ್ಷಾದಲ್ಲಿ ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ಒಡಿಶಾದ ಬಲಾಸೋರ್‌ನ ಬಲಿಯಾಪಾಲ್‌ನಲ್ಲಿ ನಡೆದಿದೆ. ಸುಮಾರು 7 ಕಿ.ಮೀ ದೂರದವರೆಗೆ ಮೃತದೇಹವನ್ನು ಟ್ರಾಲಿ ರಿಕ್ಷಾದಲ್ಲಿ ತಂದೆ ಕೊಂಡೊಯ್ದಿದ್ದಾರೆ.
ದೆಯುಲಾ ಗ್ರಾಮದ ಬಾಲಕಿ ಆಶಾ ಬಿಂಧಾನಿ ಗುರುವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಸ್ಥಳೀಯರು ತಿಳಿಸಿದ ಬಳಿಕ ಸ್ಥಳಕ್ಕೆ ತಂದೆ ಧಾವಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ವ್ಯಕ್ತಿಯ ಮೃತದೇಹ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತ; ಕುಟುಂಬದ ಇಬ್ಬರು ಸೇರಿ ಮೂವರ ಸಾವು
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಲಿಯಾಪಾಲ್ ಸಿಎಚ್‌ಸಿಗೆ ಕೊಂಡೊಯ್ಯುವಂತೆ ದಿನಗೂಲಿ ಕಾರ್ಮಿಕರಾದ ಬಾಲಕಿಯ ತಂದೆ ಮಧು ಅವರಿಗೆ ಸೂಚಿಸಿದ್ದಾರೆ. ಪೊಲೀಸರ ಸೂಚನೆಯಂತೆ ಆ್ಯಂಬುಲೆನ್ಸ್ ಸೇವೆಗಾಗಿ ಚಾಲಕನನ್ನು ತಂದೆ ಸಂಪರ್ಕಿಸಿದಾಗ ಚಾಲಕ 1,200 ರೂಪಾಯಿ ಕೇಳಿದ್ದಾರೆ ಎನ್ನಲಾಗಿದೆ.
ಇಷ್ಟೊಂದು ಹಣ ನೀಡಲು ಮತ್ತು ಹೊಂದಿಸಲು ಆಗದ ಕಾರಣ ತಂದೆ ಸರ್ಕಾರಿ 108 ತುರ್ತು ಆ್ಯಂಬುಲೆನ್ಸ್ ಸೇವೆಯ ಸಹಾಯ ಕೋರಿದ್ದಾರೆ. ಆದರೆ ಮೃತದೇಹ ಸಾಗಿಸುವ ಸೇವೆ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಮಧು ಸ್ಥಳೀಯರನ್ನು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಆದರೆ ಯಾರೂ ಸಹಾಯ ಮಾಡಿಲ್ಲ. ಈ ವೇಳೆ ಸ್ಥಳೀಯರೊಬ್ಬರು ಮಧ್ಯಪ್ರವೇಶಿಸಿ ಮೃತದೇಹವನ್ನು ಸಾಗಿಸಲು ತಮ್ಮ ಟ್ರಾಲಿ ರಿಕ್ಷಾ ನೀಡಿದ್ದಾರೆ ಎಂದು ವರದಿಯಾಗಿದೆ.
#ଟ୍ରଲିରେ_ବାପା_ବୋହିଲେ_ଝିଅ_ମୃତଦେହ
— Kanak News (@kanak_news) July 18, 2025
ଝିଅର ମୃତଦେହକୁ ଡାକ୍ତରଖାନା ଟ୍ରଲିରେ ବୋହିଲେ ବାପା । ବାଲେଶ୍ବର ବାଲିଆପାଳରୁ ଆସିଲା ହୃଦୟ ବିଦାରକ ଦୃଶ୍ୟ ।#Balasore #KanakNews pic.twitter.com/4PHaa3ZJzr
“ನನ್ನ ಮಗಳ ಶವವನ್ನು ಟ್ರಾಲಿ ರಿಕ್ಷಾದಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮತ್ತೆ ಅದೇ ರಿಕ್ಷಾದಲ್ಲಿ ಮೃತದೇಹವನ್ನು ಡ್ಯೂಲಾ ಗ್ರಾಮಕ್ಕೆ ತಂದು ಅಂತಿಮ ವಿಧಿವಿಧಾನ ನಡೆಸಿದ್ದೇನೆ” ಎಂದು ಮಧು ಹೇಳಿದ್ದಾರೆ.
ಸದ್ಯ ಟ್ರಾಲಿ ರಿಕ್ಷಾದಲ್ಲಿ ಮೃತದೇಹವನ್ನು ಕೊಂಡೊಯ್ಯುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಮಾಡಿಕೊಂಡವರು ಬಡ ತಂದೆಗೆ ಯಾವುದೇ ಸಹಾಯ ಮಾಡದಿರುವುದು, ಮತ್ತೆ ಸ್ಥಳೀಯರು ಯಾವುದೇ ಸಹಾಯ ಮಾಡದಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
