ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಕ್ಯಾಂಪನ್‌ನಲ್ಲಿ 19 ವರ್ಷದ ವಿದ್ಯಾರ್ಥಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದೆ. ವಿದ್ಯಾರ್ಥಿ ಮೇಲೆ ‘ಲವ್ ಜಿಹಾದ್’ ಆರೋಪ ಮಾಡಿರುವ ಗುಂಪು ಕೊಲೆ ಬೆದರಿಕೆಯನ್ನೂ ಹಾಕಿದೆ ಎಂದು ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿ ಭಾನುವಾರ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುವಾಗ, ಅವರನ್ನು ಅಡ್ಡಗಟ್ಟಿದ ಅಪರಿಚಿತರ ಗುಂಪು, ಅವರ ಹೆಸರು, ಆಧಾರ್ ಕಾರ್ಡ್‌ಗಳನ್ನು ಕೇಳಿದೆ. ಸಂತ್ರಸ್ತ ತನ್ನ ಆಧಾರ್ ಕಾರ್ಡ್ ತೋರಿಸಿದಾಗ, ‘ನೀನು ಮುಸಲ್ಮಾನನೇ? ಲವ್ ಜಿಹಾದ್ ಮಾಡಲು ಇಲ್ಲಿಗೆ ಬಂದಿದ್ದೀಯಾ?’ ಎಂದು ಪ್ರಶ್ನಿಸಿದ್ದಾರೆ.
ಕೆಲ ನಿಮಿಷಗಳಲ್ಲಿ ಆ ಗುಂಪಿನ ಇನ್ನೂ ಕೆಲವರು ವಿದ್ಯಾರ್ಥಿಗಳನ್ನು ಸುತ್ತುವರಿದಿದ್ದಾರೆ. ‘ಇನ್ನೊಮ್ಮೆ ಆವರಣದಲ್ಲಿ ಕಂಡರೆ ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ವಿಶ್ವವಿದ್ಯಾಲಯದ ಭದ್ರತಾ ವಿಭಾಗಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಚತುರ್ಶೃಂಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
“ಅವರು ನನ್ನ ಕೆನ್ನೆಗೆ ಹೊಡೆದರು. ನಿಂದಿಸಿದರು. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನನ್ನ ಜೊತೆಗಿದ್ದ ನನ್ನ ಸ್ನೇಹಿತನಿಗೂ ಥಳಿಸಿದ್ದಾರೆ” ಎಂದು ಸಂತ್ರಸ್ತ ವಿದ್ಯಾರ್ಥಿ ತಿಳಿಸಿದ್ದಾರೆ.
“ಅವರು ತನ್ನ ಫೋನ್ ಕಸಿದುಕೊಂಡು, ತನ್ನ ತಂದೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾನು ವಿಶ್ವವಿದ್ಯಾಲಯವನ್ನು ತೊರೆಯದಿದ್ದರೆ, ನನ್ನ ಮೃತ ದೇಹವನ್ನು ನಮ್ಮ ಗ್ರಾಮಕ್ಕೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ವಿದ್ಯಾರ್ಥಿ ಹೇಳಿದ್ದಾರೆ.
“ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ 19 ವರ್ಷದ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಗಲಭೆ, ಕ್ರಿಮಿನಲ್ ಬೆದರಿಕೆ ಮತ್ತು ದೈಹಿಕ ಹಲ್ಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಶಂಕಿತರ ಹೆಸರುಗಳು ವಿದ್ಯಾರ್ಥಿಗೆ ಗೊತ್ತಿಲ್ಲ. ನಾವು ತನಿಖೆ ಆರಂಭಿಸಿದ್ದೇವೆ” ಎಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ಕುಲಕರ್ಣಿ ತಿಳಿಸಿದ್ದಾರೆ.