ಸಾಮರಸ್ಯದಿಂದ ಬದುಕಲು ಒಗ್ಗಟ್ಟು ಮುಖ್ಯ. ಭಿನ್ನಾಭಿಪ್ರಾಯಗಳನ್ನು ಗೌರವಿಸಬೇಕು. ರಾಷ್ಟ್ರದ ವಿಷಯವಾಗಿ ನಮ್ಮ ಜವಾಬ್ದಾರಿಗಳು ನೆನಪಿನಲ್ಲಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ರಾಷ್ಟ್ರಧ್ವಜದಲ್ಲಿರುವ ಧರ್ಮಚಕ್ರ ಕೇವಲ ಸಂಕೇತ ಮಾತ್ರವಲ್ಲ. ಅಂಬೇಡ್ಕರ್ ಅವರು ವ್ಯಾಖ್ಯಾನಿಸಿದಂತೆ ಅದು ಪರಸ್ಪರ ಗೌರವ ಮತ್ತು ಸಹಕಾರದ ಮೌಲ್ಯಗಳನ್ನು ಸೂಚಿಸುತ್ತದೆ. ನಮ್ಮ ಜವಾಬ್ಧಾರಿಗಳನ್ನು ನೆನಪಿಸುತ್ತದೆ” ಎಂದು ಹೇಳಿದ್ದಾರೆ.
“ನಾವು ವೈವಿಧ್ಯತೆಯನ್ನು ಜೀವನದ ಭಾಗವಾಗಿ ನೋಡುತ್ತಿದ್ದೇವೆ. ಆದರೆ, ವೈವಿಧ್ಯತೆ ಕಾರಣಕ್ಕಾಗಿಯೇ ಭಾರತದ ಹೊರಗೆ ಘರ್ಷಣೆಗಳು ನಡೆಯುತ್ತಿವೆ” ಎಂದಿದ್ದಾರೆ.
“ತಮ್ಮದೇ ಆದ ವಿಶೇಷತೆಗಳು ಇದ್ದರೂ ಇನ್ನೊಬ್ಬರಿಗೆ ಒಳ್ಳೆಯವರಾಗಿ ಇರಬೇಕು. ನಿಮ್ಮ ಕುಟುಂಬದಲ್ಲಿ ಸಂತೋಷ ಇಲ್ಲದಿದ್ದರೆ ನೀವು ಸಂತೋಷವಾಗಿ ಇರಲು ಸಾಧ್ಯವಿಲ್ಲ. ಅಂತೆಯೇ ನೀವು ವಾಸಿಸುವ ಪ್ರದೇಶದಲ್ಲಿ ಸಮಸ್ಯೆಗಳಿದ್ದರೆ, ನಿಮ್ಮ ಕುಟುಂಬವೂ ಸಂತೋಷವಾಗಿರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಈ ಹಿಂದೆ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್, “ದೇಶದಲ್ಲಿ ಯುಗಯುಗಾಂತರಗಳಿಂದ ವಿವಿಧ ಧರ್ಮ, ಜಾತಿ, ಮತ, ಸಿದ್ಧಾಂತಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಅದಕ್ಕಾಗಿಯೇ ನಾವು ವಿಭಜನೆಯ ಭಾಷೆಯನ್ನು ಬಿಟ್ಟು, ಅಲ್ಪಸಂಖ್ಯಾತ-ಬಹುಸಂಖ್ಯಾತ ತಾರತಮ್ಯ ಮರೆತು ಹೋರಾಡಬೇಕು. ನಮ್ಮ ಅಂತರ್ಗತ ಸಂಸ್ಕೃತಿಯ ಅಡಿಯಲ್ಲಿ ನಾವು ಒಂದಾಗಬೇಕು” ಎಂದು ಹೇಳಿದರು.
ಮಾತ್ರವಲ್ಲದೆ, ಕಳೆದ ತಿಂಗಳು ಅಮರಾವತಿಯಲ್ಲಿ ಮಾತನಾಡಿದ್ದ ಭಾಗವತ್, “ಧರ್ಮದ ಸರಿಯಾದ ಅರ್ಥ ಗೊತ್ತಿಲ್ಲದ ಕಾರಣದಿಂದಾಗಿಯೇ ಇಂದು ವಿಶ್ವದಲ್ಲಿ ಧರ್ಮದ ಹೆಸರಲ್ಲಿ ಕಿರುಕುಳ ಮತ್ತು ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಧರ್ಮ ಅತ್ಯಂತ ಮಹತ್ವವಾದುದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಹೇಳಿಕೊಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಧರ್ಮದ ಕುರಿತು ಪರಿಪೂರ್ಣವಲ್ಲದ ಜ್ಞಾನವು ನಮ್ಮನ್ನು ಅಧರ್ಮದ ಕಡೆಗೆ ಕೊಂಡೊಯ್ಯುತ್ತದೆ. ಧರ್ಮ ಎಂದೆಂದಿಗೂ ಇದ್ದೇ ಇರುತ್ತದೆ ಮತ್ತು ಎಲ್ಲವೂ ಅದರಂತೆಯೇ ನಡೆಯುತ್ತದೆ. ಧರ್ಮದ ನಡವಳಿಕೆಯೇ ಧರ್ಮವನ್ನು ಕಾಪಾಡುತ್ತದೆ” ಎಂದಿದ್ದರು.
ಭಾಗವತ್ ಅವರು ಇಂತಹ ಹೇಳಿಕೆಗಳು ಆರ್‌ಎಸ್‌ಎಸ್‌ನ ಹಿಂದುತ್ವ ಕೋಮುವಾದಿ ಅಜೆಂಡಾಗಳಿಗೆ ವಿರುದ್ಧವಾಗಿವೆ ಎಂಬುದು ಗಮನಾರ್ಹ. ಮುಸ್ಲಿಂ ವಿರೋಧಿ ಧೋರಣೆ, ಕೋಮುದ್ವೇಷವನ್ನು ತನ್ನ ಡಿಎನ್ಎಯಲ್ಲಿಯೇ ಒಳಗೊಂಡಿರುವ ಆರ್‌ಎಸ್‌ಎಸ್ ಸೌಹಾರ್ದ ಭಾರತದ ಮಾತನಾಡುವುದು ಹಾಸ್ಯವೆಸುತ್ತದೆ.