“ಪತ್ನಿಗೆ ಒಪ್ಪಿಗೆ ಇಲ್ಲದಿದ್ದರೂ, ಆಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವುದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ” ಎಂದು ಮಧ್ಯಪ್ರದೇಶದ ಹೈಕೋರ್ಟ್ ತೀರ್ಪು ನೀಡಿದೆ.
ಪತಿಯು ತನ್ನ ಪತ್ನಿಯೊಂದಿಗೆ ಗುದ ಸಂಭೋಗ ಮಾಡುವುದು ಅತ್ಯಾಚಾರವಲ್ಲ. ಆಕೆಗೆ ಒಪ್ಪಿಗೆಯಿಲ್ಲದಿದ್ದರೂ ಕೂಡ ಅದನ್ನು ಅತ್ಯಾಚಾರ ಎನ್ನಲಾಗುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
“ಐಪಿಸಿಯ ಸೆಕ್ಷನ್ 375ರ ಅಡಿಯಲ್ಲಿ ‘ಅತ್ಯಾಚಾರ’ ಕುರಿತ ತಿದ್ದುಪಡಿ ವ್ಯಾಖ್ಯಾನದ ಪ್ರಕಾರ, ಮಹಿಳೆಯ ಗುದ ಸಂಭೋಗವು ಅತ್ಯಾಚಾರ ಎಂದು ಹೇಳಲಾಗಿದೆ. ಅದಾಗ್ಯೂ, ಪತಿಯು 15 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ತನ್ನ ಪತ್ನಿಯೊಂದಿಗೆ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ. ಈ ಸಂದರ್ಭಗಳಲ್ಲಿ, ಅಸಹಜ ಕೃತ್ಯಕ್ಕೆ ಹೆಂಡತಿಯ ಒಪ್ಪಿಗೆಯ ಅನುಪಸ್ಥಿತಿ ಕೂಡ ಪ್ರಾಮುಖ್ಯತೆ ಕಳೆದುಕೊಳ್ಳುತ್ತದೆ. ವೈವಾಹಿಕ ಅತ್ಯಾಚಾರವನ್ನು ಇಲ್ಲಿಯವರೆಗೆ ಗುರುತಿಸಲಾಗಿಲ್ಲ” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. ಅಲ್ಲದೆ, ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ದಾಖಲಿಸಿದ್ದ ಎಫ್ಐಆರ್ಅನ್ನು ರದ್ದುಗೊಳಿಸಿದ್ದಾರೆ.
“ಕ್ಷುಲ್ಲಕ ಆರೋಪಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆಯೇ ಎಂಬುದರ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ” ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಇದೇ ರೀತಿಯ ಪ್ರಕರಣದಲ್ಲಿ, 2023ರ ಸೆಪ್ಟೆಂಬರ್ 24 ರಂದು, ಮಧ್ಯಪ್ರದೇಶದ ಹೈಕೋರ್ಟ್ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ ವಿರುದ್ಧ ಅಸಹಜ ಲೈಂಗಿಕತೆ ಆರೋಪದ ಮೇಲೆ ಅವರ ಪತ್ನಿ ದಾಖಲಿಸಿದ ಎಫ್ಐಆರ್ಅನ್ನು ರದ್ದುಗೊಳಿಸಿತ್ತು.