ಪಾಕಿಸ್ತಾನ ಸೇನೆ ಸತತ ಐದು ದಿನಗಳಿಂದ ವಾಸ್ತವ ನಿಯಂತ್ರಣ ರೇಖೆಯ ವಿವಿಧ ಕಡೆಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸೋಮವಾರ ರಾತ್ರಿ ಕೂಡ ದಾಳಿ ನಡೆಸಿದೆ. ಭಾರತ ಸೇನೆ ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ. ಕುಪ್ವಾರಾ, ಬಾರಾಮುಲ್ಲಾ ಜಿಲ್ಲೆಗಳಲ್ಲಿ ಮತ್ತು ಅಖ್ನೂರ್ ವಲಯದಲ್ಲಿ ಸಂಘರ್ಷ ನಡೆದಿದೆ.
ವಾಸ್ತವ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆಗೆ ಭಾರತ ಸೂಕ್ತ ಹಾಗೂ ಪರಿಣಾಮಕಾರಿ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಏಪ್ರಿಲ್ 28-29ರ ರಾತ್ರಿ, ಪಾಕಿಸ್ತಾನ ಸೇನೆಯು ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಹಾಗೂ ಅಖ್ನೂರ್ ವಲಯದಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆಯು ಪ್ರಚೋದನೆಗೆ ಪರಿಣಾಮಕಾರಿ ರೀತಿಯಲ್ಲಿ ಪ್ರತಿಕ್ರಿಯಿಸಿತು ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ
ಕಳೆದ ಗುರುವಾರ ರಾತ್ರಿಯಿಂದೀಚೆಗೆ ಪಾಕಿಸ್ತಾನ ಸೇನೆ ಭಾರತದ ಪ್ರದೇಶದತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.
ಗುರುವಾರ ರಾತ್ರಿಯಿಂದ ಪಾಕಿಸ್ತಾನಿ ಸೈನಿಕರು ಎಲ್ಒಸಿಯ ಉದ್ದಕ್ಕೂ ಭಾರತದ ವಿವಿಧ ಸ್ಥಾನಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ಏ.22 ರಂದು ನೇಪಾಳಿ ಪ್ರಜೆ ಸೇರಿದಂತೆ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ ಗಡಿಯಾಚೆಗಿನ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಕಳೆದ ಬುಧವಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಘೋಷಿಸಿತು.
