ಹದಿನಾಲ್ಕು ವರ್ಷದ ದಲಿತ ಸಮುದಾಯದ ಬಾಲಕನೊಬ್ಬನಿಗೆ ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯ ಸುಜಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ತಮ್ಮ ಕುಟುಂಬದ ಬಾಲಕಿಗೆ ತೊಂದರೆ ಮಾಡಿದ್ದಾನೆಂದು ಶಂಕಿಸಿ ಇಬ್ಬರು ಸವರ್ಣೀಯ ಸಮುದಾಯದವರು ದಲಿತ ಸಮುದಾಯದ ಬಾಲಕನಿಗೆ ಥಳಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಬಾಲಕನ ಕಣ್ಣಿನ ಹುಬ್ಬುಗಳನ್ನು ಸಹ ಬೋಳಿಸಿದ್ದಾರೆ ಎಂದು ಪೊಲೀಸರಿಗೆ ಬಾಲಕನ ತಂದೆ ದೂರು ನೀಡಿದ್ದಾರೆ.
ಸುಜಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಜೌನ್‌ಪುರ ಎಸ್‌ಪಿ ಅಜಯ್ ಪಾಲ್ ಶರ್ಮಾ ಅವರ ಮಧ್ಯಸ್ಥಿಕೆಯ ನಂತರ ಶನಿವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ.
“ತನ್ನ ಮಗ ಗುರುವಾರ ಆಮಿ ಪ್ರದೇಶದಿಂದ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಆತನನ್ನು ಹಿಡಿದು ಥಳಿಸಿದ್ದಾರೆ. ನಂತರ ಬಲವಂತವಾಗಿ ಮಣ್ಣು ಮತ್ತು ಮೂತ್ರ ಸೇವಿಸುವಂತೆ ಒತ್ತಾಯಿಸಿ ಆತನ ಕಣ್ಣುಗಳ ಹುಬ್ಬುಗಳನ್ನು ಬೋಳಿಸಿದ್ದಾರೆ” ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ ಚುನಾವಣೆಗೆ ಕರ್ನಾಟಕ ರೈಲು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಭಾವ?
ಹಲ್ಲೆ ನಡೆಸಿದವರು ಬಾಲಕನ ತಂದೆಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಬೇಡಿ ಎಂದು ಬೆದರಿಸಿದ್ದರು. ಸುಜಂಗಂಜ್ ಠಾಣಾ ಪೊಲೀಸರು ಸಹ ದೂರನ್ನು ಸ್ವೀಕರಿಸಿರಲಿಲ್ಲ. ಬಾಲಕನ ತಂದೆ ಎಸ್‌ಪಿಯನ್ನು ಭೇಟಿಯಾದ ನಂತರ ದೂರು ದಾಖಲಾಗಿದೆ.
“ನಾವು ಶುಕ್ರವಾರ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಶನಿವಾರ ಎಫ್‌ಐಆರ್ ದಾಖಲಿಸಿದ್ದೇವೆ. ಆದಾಗ್ಯೂ, ಹಲ್ಲೆಕೋರರು ಬಾಲಕನಿಗೆ ಬಲವಂತವಾಗಿ ಮೂತ್ರ ಕುಡಿಸಿರುವುದು ಇನ್ನೂ ಸಾಬೀತಾಗಿಲ್ಲ” ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗ್ರಾಮದ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿದೆ.
ಈ ನಡುವೆ, ಬಾಲಕನನ್ನು ಥಳಿಸಿದ ವ್ಯಕ್ತಿಗಳು ತಮ್ಮ ಕುಟುಂಬದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ದಲಿತ ಹುಡುಗನ ವಿರುದ್ಧವೂ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿಯೂ ಎಫ್‌ಐಆರ್ ದಾಖಲಿಸಿದ್ದಾರೆ.