ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದ ಸ್ವಯಂಸೇವಕ ಮೊಹಮ್ಮದ್ ಜುನೈದ್ ಅವರ ಮನೆಯ ಮೇಲೆ ಉತ್ತರ ಪ್ರದೇಶದ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರ ಈ ದೌರ್ಜನ್ಯವು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಶೈಕ್ಷಣಿಕವಾಗಿ ನಡೆದಿರುವ ಹಲವು ಪ್ರಮಾದಗಳ ಹೊಣೆಯನ್ನು ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಳೆದ 30ಕ್ಕೂ ಹೆಚ್ಚು ದಿನಗಳಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನಾ ಸ್ಥಳದಲ್ಲಿ ಜುನೈದ್ ಹಾಗೂ ಅವರ ಸಹೋದ್ಯೋಗಿಗಳು ಉಚಿತವಾಗಿ ಆಹಾರ, ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು. ಆದರೆ ಪೊಲೀಸರ ಜುನೈದ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ‘ಯುವಕರನ್ನು ತುಳಿಯಬೇಡಿ, ರೆಕ್ಕೆ ನೀಡಿ’: ನೀಟ್ ಅಭ್ಯರ್ಥಿಗಳ ಹೋರಾಟಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬೆಂಬಲ
ಸಿಜೆಪಿಯು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪೊಲೀಸರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ. “ನಮ್ಮ ಸ್ವಯಂಸೇವಕ ಮೊಹಮ್ಮದ್ ಜುನೈದ್ ಪ್ರತಿಭಟನಾ ನಿರತ ಯುವಕರಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದಾರೆ. ಆದರೆ, ಕ್ರಿಮಿನಲ್‌ಗಳನ್ನು ಬಂಧಿಸುವ ಬದಲು, ಸಮಾಜಸೇವೆ ಮಾಡುತ್ತಿರುವ ಜುನೈದ್ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ, ಅವರ ಕುಟುಂಬಸ್ಥರನ್ನು ಕಸ್ಟಡಿಗೆ ಪಡೆದು ಕಿರುಕುಳ ನೀಡುತ್ತಿದ್ದಾರೆ” ಎಂದು ಸಿಜೆಪಿ ಆರೋಪಿಸಿದೆ.
ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹಸಿವಿನಿಂದಿದ್ದ ಪ್ರತಿಭಟನಾಕಾರರಿಗೆ ಆಹಾರ ನೀಡುವುದು ಯಾವ ಕಾನೂನಿನ ಪ್ರಕಾರ ಅಪರಾಧ?” ಎಂದು ಹಲವರು ಪ್ರಶ್ನಿಸಿದ್ದಾರೆ.
ಎಕ್ಸ್ (X) ಮತ್ತು ಯೂಟ್ಯೂಬ್‌ನಲ್ಲಿ #JantarMantar, #MohammadJunaid ಮುಂತಾದ ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ಸಾವಿರಾರು ಜನರು ಕಮೆಂಟ್ ಮಾಡಿದ್ದು, ಕೇವಲ ಆಹಾರ ವಿತರಿಸಿದ್ದಕ್ಕಾಗಿ ನಿರಪರಾಧಿ ಕುಟುಂಬದ ಮೇಲೆ ಈ ರೀತಿ ಒತ್ತಡ ಹೇರುವುದು ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಖಂಡಿಸಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಸೇವಾ ಮನೋಭಾವದ ಯುವಕರನ್ನು ಗುರಿಯಾಗಿಸಲಾಗುತ್ತಿದೆ ಎಂದು ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ.





