ದೇಶಾದ್ಯಂತ ಮತ್ತೆ ಯುಪಿಐ ಪಾವತಿಗಳ ಸರ್ವರ್ ಡೌನ್ ಆಗಿದ್ದು, ಗ್ರಾಹಕರು, ವ್ಯಾಪಾರಿಗಳು ಪರದಾಡುವಂತಾಗಿದೆ. ಸರಿಯಾಗಿ ಹಣ ಪಾವತಿ ಮತ್ತು ಸ್ವೀಕೃತಿಯಾಗದೆ ಸಮಸ್ಯೆ ಎದುರಾಗಿದೆ.
ಕಳೆದೊಂದು ತಿಂಗಳಲ್ಲಿ ಇದು 3ನೇ ಬಾರಿ ಯುಪಿಐ ಪಾವತಿ ಸರ್ವರ್ ಡೌನ್ ಆಗಿದೆ. ಯುಪಿಐ ಮೂಲಕ ಹಣ ಪಾವತಿ ಮಾಡುವ ಅಪ್ಲಿಕೇಶನ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಎಲ್ಲ ರೀತಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಸರ್ವರ್‌ಗಳು ಸ್ಥಗಿತಗೊಂಡಿವೆ.
ಶನಿವಾರ ಬೆಳಗ್ಗೆ 11:30ರಿಂದಲೇ ಯುಪಿಐ ಪಾವತಿಯ ಸರ್ವರ್ ಡೌನ್ ಆಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣವೆಂದು ನ್ಯಾಷನಲ್ ಪೇಮೆಂಟ್ ಕಾರ್ಪೋರೆಷನ್ ಆಫ್ ಇಂಡಿಯಾ (NPCI) ಹೇಳಿದೆ. ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದಾಗಿ ಹೇಳಿದೆ.
ಸದ್ಯ, ಇತ್ತೀಚಿನ ವರ್ಷಗಳಲ್ಲಿ ಯುಪಿಐ ಪಾವತಿಗಳು ವ್ಯಾಪಾರ, ವ್ಯವಹಾರ ಮಾರುಕಟ್ಟೆಯಲ್ಲಿ ಆಕ್ರಮಿಸಿಕೊಂಡಿವೆ. ಎಲ್ಲ ರೀತಿಯ ಪಾವತಿಗಳು ಬಹುತೇಕ ಯುಪಿಐ ಅಪ್ಲಿಕೇಷನ್‌ಗಳ ಮೂಲಕವೆ ನಡೆಯುತ್ತಿದೆ. ಗ್ರಾಹಕರು, ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಈ ಅಪ್ಲಿಕೇಷನ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಯುಪಿಐ ಪಾವತಿಯ ಸರ್ವರ್ ಸ್ಥಗಿತಗೊಳ್ಳುವುದು ದೇಶಾದ್ಯಂತ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಜನರು ಪರದಾಡುವಂತೆ ಮಾಡುತ್ತದೆ.