ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಏಕೀಕೃತ ಪಾವತಿ ವ್ಯವಸ್ಥೆಗಳಿಗೆ (ಯುಪಿಐ) ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಕಟಣೆಗಳನ್ನು ಹೊರಡಿಸಿದ್ದಾರೆ.
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರಸ್ತುತ ಇರುವ ಯುಪಿಐ ಪಾವತಿ ವಹಿವಾಟಿನ ಮಿತಿಯನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಸಲಾಗಿದೆ.
ಹಾಗೆಯೇ ಮರುಕಳಿಸುವ ಅಥವಾ ಪುನರಾವರ್ತಿತ ಸ್ವರೂಪದ ಪಾವತಿಗಳನ್ನು(ರಿಕರಿಂಗ್ ಪಾವತಿ) ಮಾಡುವ ಇ-ಮ್ಯಾಂಡೇಟ್‌ಗಳ ಮಿತಿಗಳನ್ನು 15 ಸಾವಿರ ರೂ.ನಿಂದ 1 ಲಕ್ಷ ರೂ.ಗಳಿಗೆ ಏರಿಸಲು ಪ್ರಸ್ತಾಪಿಸಲಾಗಿದೆ. ಸದ್ಯದ ರಿಕರಿಂಗ್ ಪಾವತಿಯು ಮ್ಯೂಚುಯಲ್ ಫಂಡ್ ಚಂದಾದಾರಿಕೆಗಳು, ವಿಮಾ ಪ್ರೀಮಿಯಂ ಚಂದಾದಾರಿಕೆಗಳು ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿಗಳಿಗೆ ಅನ್ವಯಿಸಲಿದ್ದು, ನಂತರದಲ್ಲಿ ಉಳಿದ ಸೇವೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ
ರೆಪೋ ದರ ಬದಲಾಗಿಲ್ಲ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರೆಪೊ ದರಗಳನ್ನು ಶೇ. 6.5 ಕ್ಕೆ ಬದಲಾಯಿಸದೆ ಇರಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
“ರೆಪೊ ದರವನ್ನು ಶೇ. 6.50 ದಲ್ಲಿ ಬದಲಾಯಿಸದೆ ಇರಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಪರಿಣಾಮವಾಗಿ, ಸ್ಥಾಯಿ ಠೇವಣಿ ಸೌಲಭ್ಯ (ಎಸ್‌ಡಿಎಫ್) ದರವು ಶೇ. 6.25 ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರವು ಶೇ. 6.75 ದಲ್ಲಿಯೇ ಉಳಿಯುತ್ತದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.