ಸರ್ಕಾರಿ ಭೂಮಿಯಲ್ಲಿ ದಲಿತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಸವರ್ಣೀಯರು ತಡೆದ ಘಟನೆ ಮಧ್ಯಪ್ರದೇಶದ ಶಿಯೋಪುರದ ಲೀಲ್ಡಾ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಘಟನೆ ಬೆನ್ನಲ್ಲೇ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ, ರಸ್ತೆ ತಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ದಲಿತ ವ್ಯಕ್ತಿ ಸಾವನ್ನಪ್ಪಿದ್ದರು. ಕೆಲವು ಮೇಲ್ಜಾತಿಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಭೂಮಿಯಲ್ಲಿ ದಲಿತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ಮತ್ತು ಸಮುದಾಯದ ಸದಸ್ಯರು ಮುಂದಾದಾಗ ಸವರ್ಣೀಯರು ತಡೆದಿದ್ದಾರೆ” ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ರಾಮಮಂದಿರಕ್ಕೆ ದಲಿತರು ಕೊಟ್ಟ ದೇಣಿಗೆಯನ್ನು ‘ಅಶುದ್ಧ’ವೆಂದು ವಾಪಸ್ ಕೊಟ್ಟ ಸವರ್ಣೀಯರು
ಎರಡೂ ಕಡೆಯವರು ಕಲ್ಲು ತೂರಾಟ ನಡೆಸಿದ್ದಾರೆ. ಇದಾದ ಬಳಿಕ ಮೃತ ವ್ಯಕ್ತಿಯು ಸೇರಿದ ಜಾತವ ಸಮುದಾಯದ ಸದಸ್ಯರು ಶವವನ್ನು ಇರಿಸಿ ರಸ್ತೆ ತಡೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ ಎಂದು ಶಿಯೋಪುರ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಜೈನ್ ಹೇಳಿದರು.
ಜಾತವ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ರೈಲ್ವೆ ಇಲಾಖೆ ಸ್ವಾಧೀನಪಡಿಸಿಕೊಂಡಿದೆ. ಅದಾದ ಬಳಿಕ ಇನ್ನೊಂದು ಜಾತಿಗೆ ಸೇರಿದ ಸ್ಮಶಾನದಲ್ಲಿ ಜಾತವ ಸಮುದಾಯವರು ಅಂತ್ಯಕ್ರಿಯೆ ನಡೆಸುತ್ತಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಇದಾದ ಬಳಿಕ ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ದಲಿತರು ಮುಂದಾಗಿದ್ದು, ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸ್ಮಶಾನವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡ ಕಾರಣ ಈ ಸರ್ಕಾರಿ ಭೂಮಿಯಲ್ಲೇ ಅಂತ್ಯಕ್ರಿಯೆ ನಡೆಸಲು ಅಧಿಕಾರಿಗಳು ಅವಕಾಶ ನೀಡಿದರು.
