ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ಆಶ್ರಮ ನಡೆಸುತ್ತಿರುವ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಂಸ್ಥೆಯ ಮಾಜಿ ಉದ್ಯೋಗಿ ಹಾಗೂ ಆಕೆಯ ಪತ್ನಿ ಆರೋಪಿಸಿದ್ದಾರೆ.
ಇಶಾ ಫೌಂಡೇಶನ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ನೆಲದ ಕಾನೂನಿಗೆ ಬದ್ಧವಾಗದೆ ನಿರಂಕುಶವಾಗಿ ನಡೆಯುತ್ತಿವೆ ಎಂದು ಅಮೆರಿಕದಿಂದ ವಾಪಸಾದ ದಂಪತಿ ಸತ್ಯ ನರೇಂದ್ರ ರಾಗಣಿ ಮತ್ತು ಯಾಮಿನಿ ರಾಗಣಿ ಆರೋಪಿಸಿದ್ದಾರೆ. ಇಶಾ ಫೌಂಡೇಶನ್ ನಡೆಸುತ್ತಿರುವ ಇಶಾ ಹೋಮ್ ಸ್ಕೂಲ್‌ನಲ್ಲಿ (ಐಎಸ್‌ಎಚ್) ಸಹ ವಿದ್ಯಾರ್ಥಿಯೊಬ್ಬ ಮೂರು ವರ್ಷಗಳಿಂದ ತಮ್ಮ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅದಲ್ಲದೆ ಅದೇ ಶಾಲೆಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸತ್ಯ ನರೇಂದ್ರ ಆರೋಪಿಸಿದ್ದಾರೆ. ಸತ್ಯ ನರೇಂದ್ರ ತೆಲಂಗಾಣ ಮತ್ತು ಆಂಧ್ರಪ್ರದೇಶದ ಇಶಾ ಫೌಂಡೇಶನ್‌ನ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಂಸ್ಥೆಯಲ್ಲಿ ಸುಮಾರು 15 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ದಂಪತಿ ಇತ್ತೀಚೆಗೆ ಇಶಾ ಫೌಂಡೇಶನ್‌ನಿಂದ ಹೊರ ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗೋಪಾಲ್ ಜೋಶಿ ಪ್ರಕರಣ ಮತ್ತು ಮಾರಿಕೊಂಡ ಮಾಧ್ಯಮಗಳು
“ಮಕ್ಕಳು ಮೃತಪಟ್ಟರೂ, ಈ ವಿಷಯಗಳನ್ನು ಮರೆಮಾಡಲಾಗಿದೆ. ಶಾಲೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದರೂ, ಈ ವಿಷಯವನ್ನು ಹೊರಗೆ ಬರದಂತೆ ಮರೆಮಾಡಲಾಗಿದೆ. ಸಂಸ್ಥಾಪಕರಾದ ಸದ್ಗುರುಗಳು ತಮ್ಮ ಇಶಾ ಹೋಮ್ ಶಾಲೆಯ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನವಾಗಿದ್ದಾರೆ. ಜೂನ್ 21, 2024 ರಂದು 12 ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ಹುಡುಗನ ಸಾವನ್ನು ಸಹ ಗೌಪ್ಯವಾಗಿಡಲಾಗಿದೆ, ”ಎಂದು ಯಾಮಿನಿ ತಿಳಿಸಿದ್ದಾರೆ.
ಮಾನವ ಕಲ್ಯಾಣದ ನೆಪದಲ್ಲಿ ಈಶಾ ಫೌಂಡೇಶನ್ ನಿಯಮ ಪಾಲನೆ ಮಾಡದೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ದಂಪತಿ ಆಗ್ರಹಿಸಿದ್ದಾರೆ.
“ನಾವು ಒಂದು ದಶಕಕ್ಕೂ ಹೆಚ್ಚು ಕಾಲ ಸದ್ಗುರುಗಳ ಪ್ರಮುಖ ಅನುಯಾಯಿಗಳಾಗಿದ್ದೇವೆ. ನಾವು ನಮ್ಮ ಮಗನನ್ನು ಇಶಾ ಹೋಮ್ ಸ್ಕೂಲ್ ಸೇರಿಸಿದ್ದೆವು. ಏಕೆಂದರೆ ಅವನು ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಬೆಳೆಯಬೇಕೆಂದು ನಾವು ಬಯಸಿದ್ದೆವು. ಆದಾಗ್ಯೂ, ಮೂರು ವರ್ಷಗಳ ಅವಧಿಯಲ್ಲಿ ಆತ ಅನುಭವಿಸಿದ ನೋವುಗಳು ವಿವರಿಸಲಾಗದಂತೆ ಉಳಿದಿವೆ. ಆತ ಸಾಕಷ್ಟು ಆಘಾತಕ್ಕೆ ಒಳಗಾದ. ನಾವು ಕಿರುಕುಳದ ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತಂದಾಗ, ಅವರು ಆರಂಭದಲ್ಲಿ ನಮ್ಮ ಮಗನನ್ನೇ ದೂಷಿಸಿದರು. ಎರಡು ವರ್ಷಗಳಿಂದ ನಾವು ದೂರಿನ ಕ್ರಮ ಮತ್ತು ನ್ಯಾಯವನ್ನು ಕೋರಿ ಸಂಸ್ಥೆಯೊಂದಿಗೆ ಸಂವಹನ ನಡೆಸುತ್ತಿದ್ದೆವು. ಆದರೆ ಇವೆಲ್ಲವೂ ವ್ಯರ್ಥವಾಯಿತು. ನಮ್ಮ ಕಳವಳಗಳನ್ನು ಸಾರ್ವಜನಿಕವಾಗಿ ಹೇಳಲು ನಾವು ಈಗ ನಿರ್ಧರಿಸಿದ್ದೇವೆ. ಯಾವುದೇ ಪೊಲೀಸ್ ಠಾಣೆಯು ಇಶಾ ಫೌಂಡೇಶನ್ ವಿರುದ್ಧ ಪ್ರಕರಣ ದಾಖಲಿಸುತ್ತದೆಯೇ ಎಂಬುದು ನಮಗೆ ಗೊತ್ತಿಲ್ಲ. ಸದ್ಗುರು ಮತ್ತು ಇಶಾ ಫೌಂಡೇಶನ್ ಹೆಚ್ಚು ಪ್ರಭಾವವನ್ನು ಹೊಂದಿವೆ, ”ಎಂದು ಸತ್ಯ ನರೇಂದ್ರ ಅವರು ತಿಳಿಸಿದ್ದಾರೆ.
ನರೇಂದ್ರ ರಾಗಣಿ ಮತ್ತು ಯಾಮಿನಿ ರಾಗಣಿ ಅವರ ಪುತ್ರ 2014 ರಿಂದ 2022 ರವರೆಗೆ ಎಂಟು ವರ್ಷಗಳ ಕಾಲ ಕೊಯಮತ್ತೂರಿನ ಐಹೆಚ್‌ಎಸ್‌ನಲ್ಲಿ ಅಧ್ಯಯನ ಮಾಡಿದ್ದಾನೆ ಎಂದು ದಂಪತಿ ತಿಳಿಸಿದ್ದಾರೆ.
