ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತಿರುಪತಿ-ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೀಡಲಾಗುತ್ತಿದ್ದ ಲಡ್ಡು ತಯಾರಿಯಲ್ಲಿ ತಪ್ಪುದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷೆ, ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರ ಸಮ್ಮುಖದಲ್ಲಿ ಬುಧವಾರ ಮಂಗಳಗಿರಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ನಾಯ್ಡು ಮಾತನಾಡಿದರು. “ಜಗನ್ ಆಡಳಿತದ ಅವಧಿಯಲ್ಲಿ ತಿರುಮಲ ಲಡ್ಡು ಗುಣಮಟ್ಟ ಕಳಪೆಯಾಗಿತ್ತು. ಅದರನ್ನು ಅಪವಿತ್ರಗೊಳಿಸಲಾಗಿತ್ತು” ಎಂದು ನಾಯ್ಡು ಆರೋಪಿಸಿದ್ದಾರೆ.
“ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಮಲದಲ್ಲಿ ಪ್ರಸಾದವಾಗಿ ಭಕ್ತರಿಗೆ ಗುಣಮಟ್ಟದ ಆಹಾರ ನೀಡಿಲ್ಲ. ವೆಂಕಟೇಶ್ವರನಿಗೆ ಅರ್ಪಿಸುವ ಪ್ರಸಾದ ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಲಾಸಲಾಗಿದೆ. ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆ” ಎಂದು ನಾಯ್ಡು ದೂರಿದ್ದಾರೆ.
“ನಾವು ಶುದ್ಧ ತುಪ್ಪವನ್ನು ಬಳಸುತ್ತಿದ್ದೇವೆ. ದೇವಾಲಯದ ವ್ಯವಸ್ಥೆಯನ್ನು ಸುಧಾರಿಸುತ್ತಿದ್ದೇವೆ. ಪ್ರಸಾದ ಮತ್ತು ಆಹಾರದ ಗುಣಮಟ್ಟ ಸುಧಾರಿಸಿದೆ. ಮತ್ತಷ್ಟು ಸುಧಾರಣೆಗಳನ್ನು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತಿರುಮಲದಲ್ಲಿರುವ ವೆಂಕಟೇಶ್ವರನ ಪವಿತ್ರ ದೇಗುಲಕ್ಕೆ ಪ್ರಪಂಚದಾದ್ಯಂತದ ಲಕ್ಷಾಂತರ ಯಾತ್ರಾರ್ಥಿಗಳು ಪ್ರತಿದಿನ ಭೇಟಿ ನೀಡುತ್ತಾರೆ. ತಿರುಮಲ ಲಡ್ಡು ಪ್ರಸಾದವನ್ನು ಅನೇಕರು ದೇವರು ಕೊಟ್ಟ ಅಮೃತ ಎಂದು ಪರಿಗಣಿಸುತ್ತಾರೆ” ಎಂದು ನಾಯ್ಡು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ | ಅಭಿವೃದ್ಧಿಯ ಮಾತಿಲ್ಲ, ಮಣಿಪುರಕ್ಕೆ ಹೋಗಲಿಲ್ಲ, ಗೋವು-ಗಣೇಶನನ್ನು ಬಿಡುತ್ತಿಲ್ಲ!
ನಾಯ್ಡು ಅವರ ಆರೋಪವನ್ನು ತಿರುಪತಿ ದೇವಸ್ಥಾನ ಮಂಡಳಿಯ ಮಾಜಿ ಮುಖ್ಯಸ್ಥ, ವೈಎಸ್‌ಆರ್ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಅಲ್ಲಗಳೆದಿದ್ದಾರೆ. “ಚಂದ್ರಬಾಬು ನಾಯ್ಡು ಅವರು ತಿರುಮಲದ ಪಾವಿತ್ರ್ಯತೆಗೆ ಕಳಂಕ ತರುತ್ತಿದ್ದಾರೆ. ಕೋಟ್ಯಂತರ ಹಿಂದುಗಳ ನಂಬಿಕೆಗೆ ಅಪಚಾರ ಮಾಡುತ್ತಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆಗಳು ಅತ್ಯಂತ ದುರುದ್ದೇಶಪೂರಿತವಾಗಿವೆ” ಎಂದು ಹೇಳಿದ್ದಾರೆ.
“ರಾಜಕೀಯ ಲಾಭಕ್ಕಾಗಿ ಚಂದ್ರಬಾಬು ನಾಯ್ಡು ಯಾವುದೇ ಹಂತಕ್ಕಾದರೂ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಕ್ತರ ನಂಬಿಕೆಯನ್ನು ಬಲಪಡಿಸುವುದಕ್ಕಾಗಿ, ನಾನು ನನ್ನ ಕುಟುಂಬದೊಂದಿಗೆ ತಿರುಮಲ ಪ್ರಸಾದದ ಬಗ್ಗೆ ಸರ್ವೇಶ್ವರನ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಚಂದ್ರಬಾಬು ತಮ್ಮ ಕುಟುಂಬದೊಂದಿಗೆ ಅದೇ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ” ಎಂದು ಸುಬ್ಬಾ ರೆಡ್ಡಿ ಪ್ರಶ್ನಿಸಿದ್ದಾರೆ.