ಹಿಂದೂ ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲ ಪಟ್ಟಣವನ್ನು ಮುಸ್ಲಿಮ್ ವ್ಯಾಪಾರಸ್ಥರು ತೊರೆಯುತ್ತಿದ್ದಾರೆ.
ಉತ್ತರಕಾಶಿ ಪಟ್ಟಣದ ಪುರೋಲ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಮುಸ್ಲಿಮ್ ವರ್ತಕರ ಅಂಗಡಿಗಳು ಮತ್ತು ಮನೆಗಳ ಮೇಲೆ ಬಲಪಂಥೀಯ ಸಂಘಟನೆಗಳ ಸದಸ್ಯರು ದಾಳಿ ಮಾಡಿ ಧ್ವಂಸಗೊಳಿಸಿದ್ದರು. ಬಳಿಕ ‘ಜೂನ್ 15ರ ಮಹಪಂಚಾಯತ್ʼಗೆ ಮುನ್ನ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಲು ಸಿದ್ಧರಾಗಿʼ ಎಂದು ಬರೆಯಲಾಗಿರುವ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
ಮೇ 26ರಿಂದ ಪುರೋಲದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ 18 ದಿನಗಳಿಂದ ಶೇ.35 ರಿಂದ 40ರಷ್ಟಿರುವ ಮುಸ್ಲಿಂ ವರ್ತಕರಿಗೆ ತಮ್ಮ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ.
ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಮುಸ್ಲಿಂ ವ್ಯಾಪಾರಸ್ಥರು ಈಗಾಗಲೇ ಪಟ್ಟಣವನ್ನು ತೊರೆದಿದ್ದಾರೆ. ಮತ್ತಷ್ಟು ವ್ಯಾಪಾರಿಗಳು ಇದೇ ಹಾದಿಯನ್ನು ಅನುಸರಿಸಲು ನಿರ್ಧರಿಸಿದ್ದಾರೆ.
ʻಹೊರಗಿನವರಿಂದ ಸಮಸ್ಯೆʼ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಮುಖಂಡ ಅಭಿಷೇಕ್ ಸೆಮ್ವಾಲ್, ʻದಶಕಗಳಿಂದಲೂ ಹಲವಾರು ಮುಸ್ಲಿಂ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಿನವರು ಬಂದು ಇಲ್ಲಿ ಅಂಗಡಿಗಳನ್ನು ತೆರೆಯಲು ಪ್ರಾರಂಭಿಸಿದ ಬಳಿಕ ಸಮಸ್ಯೆಗಳು ಪ್ರಾರಂಭವಾಗಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

ಆಗಿದ್ದೇನು?
ಮೇ 26 ರಂದು ಅಪ್ರಾಪ್ತ ಬಾಲಕಿಯೊಂದಿಗೆ ಇಬ್ಬರು ಪುರುಷರು ಮಾತನಾಡುವುದನ್ನು ಗಮನಿಸಿದ ಸ್ಥಳೀಯರು, ಹಿಂದೂ ಹುಡುಗಿಯ ಅಪಹರಣಕ್ಕೆ ಅನ್ಯಧರ್ಮದವರು ಯತ್ನಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.
ಆದರೆ ಘಟನೆ ನಡೆದ ಮರುದಿನವೇ (ಮೇ 27ರಂದು) ಅಪ್ರಾಪ್ತ ಬಾಲಕಿಯ ಜೊತೆಗಿದ್ದ ಇಬ್ಬರು ಆರೋಪಿಗಳಾದ ಸ್ಥಳೀಯ ವರ್ತಕ ಉಬೇದ್ ಖಾನ್ (24) ಮತ್ತು ಮೊಟಾರ್ ಸೈಕಲ್ ಮೆಕ್ಯಾನಿಕ್ ಜಿತೇಂದರ್ ಸೈನಿ (23) ಅವರನ್ನು ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಐಪಿಸಿ ಕಾಯ್ದೆ 363 (ಅಪಹರಣ) ಮತ್ತು 366 ಎ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದು ಯಾವುದೇ ‘ಲವ್ ಜಿಹಾದ್’ ಪ್ರಕರಣ ಅಲ್ಲ ಎಂದು ಪೊಲೀಸರೇ ಹೇಳಿಕೆ ನೀಡಿದ್ದಾರೆ.
ಪುರೋಲ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ದೇವಾನಂದ್ ಶರ್ಮಾ ಅವರು, ಸ್ಥಳೀಯರು, ಸಾರ್ವಜನಿಕ ಪ್ರತಿನಿಧಿಗಳು, ಸಮಾಜದ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ವ್ಯಾಪಾರಿಗಳ ಜೊತೆ ಶಾಂತಿ ಸಮಿತಿ ಸಭೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.