ಸುಮಾರು 14 ಮಂದಿ ಪ್ರಯಾಣಿಸುತ್ತಿದ್ದ ಕಾರೊಂದು ಕಾರುವೆ ಬಿದ್ದಿದ್ದು, 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೊಂಡಾದ ಮೋತಿಗಂಜ್ ಪೊಲೀಸ್ ಠಾಣೆ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರು ಮತ್ತು ಗಾಯಾಳುಗಳು ಸಿಹಗಾಂವ್‌ನಿಂದಖರ್ಗುಪುರದ ಪೃಥ್ವಿ ನಾಥ್ ದೇವಸ್ಥಾನಕ್ಕೆ ಬುಲೆರೋದಲ್ಲಿ ತೆರಳುತ್ತಿದ್ದರು. ಈ ವೇಳೆ, ವಾಹನವು ಕಾಲುವೆಗೆ ಬಿದ್ದಿದ್ದು, ಕಾರಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೊಂಡಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹೇಳಿದ್ದಾರೆ.
ವಾಹನ ಮುಳುಗುತ್ತಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಇತಿಯಾಥೋಕ್ ಪೊಲೀಸ್ ಠಾಣೆ ಸಿಬ್ಬಂದಿಗಳು ಧಾವಿಸಿದ್ದು, ಸ್ಥಳೀಯರ ಸಹಾಯದಿಂದ ಮೃತದ ಮೃಹದೇಹಗಳನ್ನು ಹೊರತೆಗೆದಿದ್ದಾರೆ.
ನಾಲ್ವರು ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೇಸರ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.