ಉತ್ತರ ಪ್ರದೇಶದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆಯಾಗಿದ್ದು, ನಾಲ್ವರು ಗರ್ಭಿಣಿಯರಿಗೆ ಫೋನ್ ಬೆಳಕಿನಲ್ಲಿಯೇ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಈ ಘಟನೆ ಬಲ್ಲಿಯಾ ಜಿಲ್ಲೆಯ ಬೆರೂರ್ಬರಿಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿನ ವಿದ್ಯುತ್ ಸಮಸ್ಯೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
ಬೆರೂರ್ಬರಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರಾತ್ರಿ ಹೆರಿಗೆಗಾಗಿ ನಾಲ್ವರು ಮಹಿಳೆಯರು ದಾಖಲಾಗಿದ್ದರು. ಹೆರಿಗೆ ವೇಳೆ ವಿದ್ಯುತ್ ವ್ಯತ್ಯಯವಾಗಿದ್ದ ಕಾರಣ, ಅವರಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಹೆರಿಗೆ ಮಾಡಿಸಲಾಗಿದೆ ಎಂದು ವರದಿಯಾಗಿದೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಾಧಿಕಾರಿ ಡಾ. ಸಂಜೀವ್ ಬರ್ಮನ್, “ವಿದ್ಯುತ್ ವ್ಯತ್ಯಯ ಆರೋಪದ ಬಗ್ಗೆ ತನಿಖೆ ನಡೆಸಲು ಉಪ ಮುಖ್ಯ ವೈದ್ಯಾಧಿಕಾರಿ ನೇತೃತ್ವದಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಬೆರೂರ್ಬರಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಟ್ರಾನ್ಸ್‌ಫಾರ್ಮರ್ ಮೂರು ದಿನಗಳ ಹಿಂದೆ ಸುಟ್ಟುಹೋಗಿತ್ತು. ಹೀಗಾಗಿ, ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಗ್ಯ ಕೇಂದ್ರದಲ್ಲಿ ಜನರೇಟರ್ ಮತ್ತು ಡೀಸೆಲ್ ಲಭ್ಯವಿದ್ದರೂ ಸಹ ಇಂತಹ ಘಟನೆ ಸಂಭವಿಸಿದೆ. ತನಿಖೆಗೆ ಆದೇಶಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ತನಿಖಾ ವರದಿ ಬಂದ ನಂತರ, ತಪ್ಪಿತಸ್ಥರನ್ನು ಗುರುತಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಬರ್ಮನ್ ಭರವಸೆ ನೀಡಿದ್ದಾರೆ.