ಜೂನ್ 4 ರಂದು, ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೊಲೆ ಆರೋಪಿ ಕಮಲೇಶ್ ಬಿಂದ್ ಹತನಾಗಿರುವ ಘಟನೆ ಆ ರಾಜ್ಯದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಅಪರಾಧಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಅನುಸರಿಸುತ್ತಿರುವ ಕಠಿಣ ಎನ್ಕೌಂಟರ್ ನೀತಿ ವಿರುದ್ಧ ವಿರೋಧ ಪಕ್ಷಗಳು ಮಾತ್ರವಲ್ಲದೆ, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಒಳಗಿನಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕೊಲೆ ಆರೋಪಿ ಕಮಲೇಶ್ ಬಿಂದ್ ಎಂಬಾತನನ್ನು ಎನ್ಕೌಂಟರ್ನಲ್ಲಿ ಹತ್ಯೆಗೈದಿರುವುದನ್ನು ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ‘ನಿಶಾದ್ ಪಕ್ಷ’ದ ಮುಖ್ಯಸ್ಥ, ರಾಜ್ಯ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ಖಂಡಿಸಿದ್ದಾರೆ. ಪೊಲೀಸರ ಕ್ರಮದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಘಟನೆಯ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
“ಅಪರಾಧ ಎಷ್ಟೇ ಗಂಭೀರವಾಗಿದ್ದರೂ ಆರೋಪಿಗೆ ನ್ಯಾಯಾಲಯದಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಅವಕಾಶ ನೀಡಬೇಕು. ನ್ಯಾಯ ಒದಗಿಸುವುದು ನ್ಯಾಯಾಂಗದ ಕೆಲಸವೇ ಹೊರತು ಪೊಲೀಸರದ್ದಲ್ಲ” ಎಂದು ನಿಶಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರ್ಕಾರದ ಕಠಿಣ ‘ಠೋಕ್ ದೇಂಗೇ’ (ಹೊಡೆದುರುಳಿಸುತ್ತೇವೆ) ಎಂಬ ಪ್ರಚಾರದ ನೀತಿಗೆ ಮಿತಿಗಳಿವೆ. ಸಾರ್ವಜನಿಕರಲ್ಲಿ ಅನುಮಾನಗಳು ಹೆಚ್ಚಾದರೆ ಈ ತಕ್ಷಣದ ನ್ಯಾಯದ ಸಿದ್ಧಾಂತವು ತಿರುಗುಬಾಣವಾಗಬಹುದು. ಉತ್ತರ ಪ್ರದೇಶದಲ್ಲಿ ಎನ್ಡಿಎ ಮೈತ್ರಿಕೂಟದ ಲೋಕಸಭಾ ಸ್ಥಾನಗಳ ಸಂಖ್ಯೆ ಕುಸಿದಿರುವುದೇ ಇದಕ್ಕೆ ಸಾಕ್ಷಿ” ಎಂದು ಅವರು ನೆನಪಿಸಿದ್ದಾರೆ.
ಹತನಾದ ಕಮಲೇಶ್ ಬಿಂದ್ನನ್ನು ಸಾರ್ವಜನಿಕವಾಗಿ ವಶಕ್ಕೆ ಪಡೆದು ನಂತರ ನಕಲಿ ಎನ್ಕೌಂಟರ್ ಮಾಡಲಾಗಿದೆ ಎಂದು ಬಿಂದ್ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ನಿಶಾದ್ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸಚಿವ ನಿಶಾದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದಾಗಿ ಭೇಟಿಯಾಗಿ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.
ಆದಾಗ್ಯೂ, ತಮ್ಮ ಕೃತ್ಯವನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. “ಕೊಲೆ ಆರೋಪಿಯಾಗಿದ್ದ ಕಮಲೇಶ್ ಬಿಂದ್ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತನ ಎದೆಗೆ ಗುಂಡು ತಗುಲಿ ಮೃತಪಟ್ಟಿದ್ದಾನೆ. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
ಆದರೆ, ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಪೊಲೀಸರ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಬಿಂದ್ನನ್ನು ಮೊದಲೇ ವಶಕ್ಕೆ ಪಡೆದು, ಯೋಜಿತವಾಗಿ ಕಸ್ಟಡಿಯಲ್ಲಿ ಕೊಲ್ಲಲಾಗಿದೆ ಎಂದು ದೂರಿದ್ದಾರೆ.
ಈ ಲೇಖನ ಓದಿದ್ದೀರಾ?: ದೇವೇಗೌಡರ ರಾಜ್ಯಸಭೆ ಹಾದಿಗೆ ಅಡ್ಡಿಯಾಗಿರುವವರು ಯಾರು?
ಎನ್ಕೌಂಟರ್ ನೀತಿಯನ್ನು ಟೀಕಿಸಿರುವ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್, “ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಾಜಕೀಯ ಅನುಕೂಲಕ್ಕೆ ತಕ್ಕಂತೆ, ವ್ಯಕ್ತಿಯ ಜಾತಿ ಮತ್ತು ಧರ್ಮವನ್ನು ನೋಡಿ ನಕಲಿ ಎನ್ಕೌಂಟರ್ಗಳನ್ನು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರವು ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸಮುದಾಯವನ್ನು ಹೆದರಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ. ಭಯದ ಮೂಲಕ ಆಡಳಿತ ನಡೆಸಲು ಹಿಂಸಾಚಾರವನ್ನು ಸಾಮಾನ್ಯೀಕರಣ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿರೋಧ ಪಕ್ಷಗಳು ಮತ್ತು ಮೈತ್ರಿಕೂಟದ ಆಕ್ಷೇಪಣೆಗಳ ನಡುವೆಯೂ ಬಿಜೆಪಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. “ಸರ್ಕಾರಕ್ಕೆ ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯೇ ಮೊದಲ ಆದ್ಯತೆಯಾಗಿದ್ದು, ಯಾವುದೇ ಜಾತಿ ಅಥವಾ ರಾಜಕೀಯ ಪ್ರೇರಿತವಾಗಿ ಎನ್ಕೌಂಟರ್ ಮಾಡಲಾಗುತ್ತಿಲ್ಲ. ಸಶಸ್ತ್ರ ಅಪರಾಧಿಗಳು ಕಾನೂನಿಗೆ ಸವಾಲೊಡ್ಡಿದಾಗ ಮಾತ್ರ ಪೊಲೀಸರು ಕಾನೂನು ಚೌಕಟ್ಟಿನಲ್ಲೇ ಕ್ರಮ ಕೈಗೊಂಡಿದ್ದಾರೆ” ಎಂದು ಹೇಳಿಕೊಂಡಿದೆ.




