ಹಿಂಸಾತ್ಮಕ ಜಾಗತಿಕ ವಿದ್ಯಮಾನಗಳು, ಮುಗ್ಧ ಮಕ್ಕಳ ಹತ್ಯೆ, ಹೆಚ್ಚುತ್ತಿರುವ ಕ್ರೌರ್ಯ, ಕಂಡು ಕೇಳರಿಯದಷ್ಟು ಹೆಚ್ಚಿರುವ ಶಸ್ತ್ರಾಸ್ತಗಳ ಖರೀದಿ, ಅಡೆತಡೆಯಿಲ್ಲದೆ ನಡೆದಿರುವ ವಿನಾಶಕಾರಿ ಹತಾರುಗಳ ಉತ್ಪಾದನೆ, ಕಮರಿ ಹೋಗುತ್ತಿರುವ ಬಡವರ, ವಿದ್ಯಾರ್ಥಿಗಳ ಬದುಕು, ಮತಾಧಾರಿತ ರಾಜಕಾರಣ, ಮಹಾನ್ ಸುಳ್ಳರ ಆಡಳಿತ, ಬಿಕರಿಯಾದ ಮಾಧ್ಯಮಗಳು, ವ್ಯಾಪಕವಾಗಿರುವ ಅಸಮಾನತೆ, ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಪರಿಸರ ನಾಶ, ಸಂವೇದನಾ ರಹಿತ ಸಮಾಜದ ಸೃಷ್ಟಿಯಾಗುತ್ತಿರುವ ಈ ದಿನಗಳಲ್ಲಿ ವಿಕ್ಟರ್ ಮತ್ತೆ ನೆನಪಾದರು.
“ನಾವು ಎಂದೆಂದಿಗೂ ಮುಕ್ತ ಮನಸ್ಸಿನಿಂದ ಬದುಕಬೇಕು, ಸಂಕುಚಿತರಾಗಿ ಸೆಟೆದುಕೊಂಡು ಜೀವಿಸದೆ ವಿಶಾಲ ಹೃದಯಿಗಳಾಗಬೇಕು. ಎಂತಹ ಹತಾಶ ಪರಿಸ್ಥಿತಿಯಲ್ಲೂ, ಆಘಾತಕಾರಿ ಅನ್ಯಾಯ ಅನುಭವಿಸಿಯೂ, ಒಂದು ಸಮುದಾಯವಾಗಿ ಸೋತಾಗಲು (ಥರ್ಡ್ ರೀಚ್ ಆಳ್ವಿಕೆಯ ಅಥವಾ ಪರಿಸರ ನಾಶದ ಕಾಲದಲ್ಲೂ) ನಾವು ಪಾಪದ ಬೇಗೆಯಲ್ಲಿ ಬೇಯದೆ ಸಾಮೂಹಿಕ ಜವಾಬ್ದಾರಿಯನ್ನು ಹೊರಬೇಕು. ಪರೋಪಕಾರ ಮನುಷ್ಯನ ಮೂಲ ಗುಣ. “ನಾನು” ಎಂಬ ಅಹಂ ಮೀರಿ “ನಾವು” ಎಂದಾಗುವುದರಲ್ಲಿ ಅಗಾಧ ಶಕ್ತಿಯಿದೆ. ಸಾವಿನ ಖಚಿತತೆಯಲ್ಲಿ, ನಮ್ಮೆಲ್ಲಾ ಸಾಧನೆಗಳು ಅಳಿಸಿ ಹೋಗುವ ಭೀತಿಯಲ್ಲಿ, ಬದುಕು ಅರ್ಥಹೀನ ಎಂಬ ಹತಾಶೆಯಲ್ಲಿ ಪರೋಪಕಾರ, ಆಶಾವಾದದಿಂದ ಬದುಕುವ ಮಾರ್ಗವೇ ನಮಗೆ ಬದುಕಿನ ಅರ್ಥ ಕಂಡುಕೊಳ್ಳುವ ದಾರಿಯು ಹೌದು. ಆತ್ಮದ ಕುರಿತಾದ ಜಿಜ್ಞಾಸೆ, ಧರ್ಮದಲ್ಲಿನ ನಂಬಿಕೆ ನಮಗೆ ಬದುಕಿನ ಅರ್ಥ ಕಂಡುಕೊಳ್ಳಲು ಸಹಾಯಕವಾಗಬಹುದು. ಆದರೆ ಅವು ಬದುಕಿನ ಉದ್ದೇಶ ಮತ್ತು ಅರ್ಥ ಅರಿಯಲು ಬೇಕಾದ ಪೂರ್ವಾಪೇಕ್ಷಿತಗಳಲ್ಲ. ಬದುಕಿನ ಅರ್ಥವೇ ಬದುಕಿಗೊಂದು ಅರ್ಥ ಕಂಡುಕೊಳ್ಳುವುದು.”
ಈ ಅರಿವು ನನ್ನಲ್ಲಿ ಮೂಡಿಸಿದ್ದು ಪ್ರಸಿದ್ಧ ಆಸ್ಟ್ರಿಯನ್ ನರರೋಗ ತಜ್ಞ ಮತ್ತು ಮನೋವೈದ್ಯ ವಿಕ್ಟರ್ ಫ್ರಾಂಕೊ. ವಿಕ್ಟರ್ ಫ್ರಾಂಕೊ ಎಂದೊಡನೆ ನನ್ನಲ್ಲಿ ಬಹುಮುಖ್ಯವಾಗಿ ಒಂದು ಪ್ರಶ್ನೆ ಮೂಡುತ್ತವೆ. ಆಶ್ವಿಟ್ಜ್, ಬುಚೆನ್ವಾಲ್ಡ್, ತುರ್ಖೆಯ್ಮ್ ಯಾತನಾ ಶಿಬಿರಗಳಲ್ಲಿ ಎಷ್ಟೆಲ್ಲಾ ಅಮಾನವೀಯತೆ, ಹಸಿವು, ಹಿಂಸೆ ಅನುಭವಿಸಿ, ಅಪಾರ ಸಾವು, ನೋವಿಗೆ ಸಾಕ್ಷಿಯಾಗಿ, ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡು, ಎಂದು ಕೇಳರಿಯದ ಮಾನವನ ವಿಕೃತಿಯನ್ನು ನೋಡಿಯು ಕೂಡ ಹಾಸ್ಯಪ್ರಜ್ಞೆ ಉಳ್ಳವನಾಗಿ, ಜೀವನೋತ್ಸಾಹ, ಜೀವಪರತೆ ಕಿಂಚಿತ್ತೂ ಕಳೆದುಕೊಳ್ಳದೆ ವಿಕ್ಟರ್ ಫ್ರಾಂಕ್ಲ್ ಬದುಕಿದ್ದಾದರೂ ಹೇಗೆ ಎಂಬ ಪ್ರಶ್ನೆಯದು.
ನಾಟ್ಸಿ ಯಾತನಾಶಿಬಿರದಿಂದ ಹೊರಬಂದ ವಿಕ್ಟರ್ ಅವರಿಗೆ ಎದುರಾಗಿದ್ದು ಯುದ್ಧದಿಂದ ನಾಶವಾಗಿದ್ದ ಪ್ರೀತಿಯ ವಿಯೆನ್ನಾ ನಗರ, ಮಡದಿ, ತಾಯಿ, ಸಹೋದರರನ್ನು ಕಳೆದುಕೊಂಡು ಕಮರಿಹೋದ ಬಾಳು. ಇನ್ಫ್ಯಾಕ್ಟ್ ವಿಕ್ಟರ್ ಅವರಿಗೆ ಯಾತನಾಶಿಬಿರದಲ್ಲಿ ಹಿಂಸೆ ಅನುಭವಿಸಿದ್ದಕ್ಕಿಂತ ಬಹುದೊಡ್ಡ ಸವಾಲು ಯಾತನಾಶಿಬಿರದಿಂದ ಹೊರಗೆ ಬದುಕುವುದೇ ಆಗಿತ್ತು. ಯಾತನಾಶಿಬಿರದಿಂದ ಹೊರಬಂದ ಬಹಳಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದ ಕಾಲದಲ್ಲಿ ಮಾನಸಿಕವಾಗಿ ಘಾಸಿಗೊಳ್ಳದೆ, ದ್ವೇಷ, ಅಸಹನೆ, ಕಹಿ ಭಾವನೆಗಳಿಗೆ ಬಲಿಯಾಗದೆ, ಛಿದ್ರಗೊಂಡ ” ಅರ್ಥಹೀನ” ಬಾಳನ್ನು “It’s not about what we expect from life, but what life expects from us” ಎನ್ನುತ್ತಾ ವೈದ್ಯ ಕಾಯಕದಲ್ಲಿ ವಿಕ್ಟರ್ ತೊಡಗಿದ್ದಾದರೂ ಹೇಗೆ ಎಂಬ ವಿಸ್ಮಯ ನನ್ನಲ್ಲಿ ಮನೆಮಾಡುತ್ತದೆ.
ಇದನ್ನು ಓದಿದ್ದೀರಾ?: ಗ್ರಾಫಿಕ್ ಕಾದಂಬರಿಕಾರ್ತಿ ಮಾರ್ಜಾನ್ ನಿಧನ; ಶಾಂತವಾಯಿತು ಇರಾನಿನ ದಿಟ್ಟ ದನಿ
1950ರ ಆಸುಪಾಸಿನಲ್ಲಿ ವಿಕ್ಟರ್ ಅವರಿಗೆ ಉಪನ್ಯಾಸ ನೀಡಲು ಅಮೆರಿಕಾದ ಮನೋವೈದ್ಯರ ಸಂಘದಿಂದ ಆಹ್ವಾನ ಬಂತು. ಉಪನ್ಯಾಸ ಕಾರ್ಯಕ್ರಮದ ನಂತರ ಆಯೋಜಕರು ವಿಕ್ಟರ್ ಅವರೊಡನೆ ಮಾತನಾಡುತ್ತಾ ಕುತೂಹಲಕಾರಿ ಅಭಿಪ್ರಾಯ ಹಂಚಿಕೊಂಡರು. “ಡಾ. ವಿಕ್ಟರ್, ಇಲ್ಲಿ ನೆರೆದಿದ್ದ ವೈದ್ಯರು ನಿಮ್ಮ ಉಪನ್ಯಾಸವನ್ನು ತೆರೆದ ಮನದಿಂದ ಒಪ್ಪಿಕೊಳ್ಳಲಿಲ್ಲ, ಅವರಲ್ಲಿ ಒಂದು ತರಹದ ತಾಟಸ್ಥ್ಯ ಸ್ವಭಾವವಿತ್ತು. ವೈದ್ಯರೇಕೆ ಹೀಗೆ ನಡೆದುಕೊಂಡರು ಎಂಬ ಅಚ್ಚರಿ ನಿಮಗಿಲ್ಲವೇ?” ಎಂದು ಕೇಳಿದರು. “ಇಲ್ಲಿ ನೆರೆದಿದ್ದ ಮನೋವೈದ್ಯರ ವಿಚಾರಗಳಿಗೂ ನಾನು ಅನುಸರಿಸುವ ವಿಧಾನಗಳಿಗೂ ಭಾರಿ ವ್ಯತ್ಯಾಸವಿದೆ ಅನಿಸುತ್ತೆ. ಹಾಗಾಗಿ ಅವರ ಉದಾಸೀನ ಸಹಜ” ಎಂದರು ವಿಕ್ಟರ್. “ಇರಬಹುದು, ಆದರೆ ನಿಜವಾದ ಕಾರಣ ಬೇರೆಯದೇ ಇದೆ” ಎಂದರು ಆಯೋಜಕ. “ಹೌದಾ, ಏನದು?” ವಿಕ್ಟರ್ ಕಣ್ಣು ಅರಳಿಸಿ ಕೇಳಿದರು. “ನೋಡಿ ಡಾಕ್ಟ್ರೇ, ನೀವು ಯಾತನಾ ಶಿಬಿರದಲ್ಲಿ ಎಷ್ಟೆಲ್ಲಾ ನೋವು ಅನುಭವಿಸಿದ್ರಿ, ನಿಮ್ಮ ಪ್ರೀತಿ ಪಾತ್ರರನ್ನೆಲ್ಲಾ ಕಳೆದುಕೊಂಡಿರಿ. ಯಾತನೆ ಅನುಭವಿಸಿ ಕೂಡ ಅದನ್ನು ಮೀರಿದಿರಿ. ಇಲ್ಲಿನ ಮನೋವೈದ್ಯರಿಗೆ ಇದಾವುದರ ಅನುಭವವೂ ಇಲ್ಲ. ಆ ಕಾರಣಕ್ಕೆ ಅವರಿಗೆ ನಿಮ್ಮ ಮೇಲೆ ಅಸೂಹೆ ಇದೆ!” ಎಂದರು ಆಯೋಜಕ.

ಆಶ್ಚರ್ಯಚಕಿತಗೊಂಡ ವಿಕ್ಟರ್ ಒಂದುಕ್ಷಣ ಯೋಚಿಸಿ “ಎಲ್ಲರಿಗೂ ಅವರದ್ದೇ ಯಾತನಾಶಿಬಿರಗಳಿರುತ್ತವೆ -Everyone has their own Auschwitz” ಎಂದರಂತೆ! ಜನರ ನೋವುಗಳನ್ನು ನಾವು ಅಳೆಯಲು ಅಥವಾ ತಾಳೆ ಮಾಡಲಾಗುವುದಿಲ್ಲ. ಎಲ್ಲರಿಗೂ ಅವರವರ ಜೀವನದ ಕೆಟ್ಟ ಗಳಿಗೆಗಳು ಬಹು ದೊಡ್ಡ ಸವಾಲುಗಳೇ. ಬದುಕಿನ ಅವಿಭಾಜ್ಯ ಭಾಗವಾಗಿ ಯಾತನೆ ಇದ್ದೇ ಇರುತ್ತದೆ. ನಾನಾ ರೂಪದಲ್ಲಿ ನಾನಾ ಭಾರಗಳಲ್ಲಿ. ಯಾತನೆ ಎಂಬುದು ಒಮ್ಮೊಮ್ಮೆ ನಮ್ಮ ಹತೋಟಿ ಮೀರುತ್ತದೆ. ಹಠಾತ್ತಾಗಿ ಕಣ್ಮರೆಯಾಗುವ ಹತ್ತಿರದವರು, ಹೇಳದೆ ಕೇಳದೆ ಬರುವ ರೋಗಗಳು, ಭರಿಸಲಾಗದ ನಷ್ಟ, ಸದಾ ಕುಟುಕುವ ಪಾಪ ಪ್ರಜ್ಞೆ, ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಹೊರಬೇಕಾದ ಹೊಣೆಗಾರಿಕೆ ಎಲ್ಲವೂ ಯಾತನೆಯೇ. ಯಾತನೆಗೆ ಕಾರಣಗಳು ಹಲವು, ಅದರ ಅನುಭವಕ್ಕೆ ನಾನಾ ಚಹರೆಗಳು ಆದರೆ ಪರಿಣಾಮ ಮಾತ್ರ ಸದೃಶವಾದ್ದು.”
ವಿಕ್ಟರ್ ಯಾತನಾಶಿಬಿರದಿಂದ ಹೊರಬಂದು ಬರೆದ ಪುಸ್ತಕಗಳು ಅವರ ಯಾತನಾಶಿಬಿರದ ಅನುಭವಾಧಾರಿತ ಬರಹಗಳು ಎಂದು ಹಲವರು ಅಂದುಕೊಂಡಿದ್ದಾರೆ. ನಾಟ್ಸಿ ಆಡಳಿತ ಶುರುವಾಗಿ ಯಾತನಾಶಿಬಿರಗಳನ್ನು ಆರಂಭಿಸುವ ಮೊದಲೇ ವಿಕ್ಟರ್ ಲೆಗೊಥೆರಪಿ, ಮನುಷ್ಯನ ಪುನಶ್ಚೈತನ್ಯಶಕ್ತಿ ಕುರಿತು ಸಂಶೋಧನೆ ನಡೆಸಿ ಅಮೂಲ್ಯ ಒಳಹುಗಳನ್ನು ಟಿಪ್ಪಣಿ ಮಾಡಿಕೊಂಡಿದ್ದರು. ಆ ಟಿಪ್ಪಣಿಗಳು ಪುಸ್ತಕಗಳ ರೂಪದಲ್ಲಿ ಹೊರತರಬೇಕೆಂಬ ಅವರ ಮಹದಾಸೆಗೆ ಯಾತನಾಶಿಬಿರವೆಂಬ ನರಕ ತಾತ್ಕಾಲಿಕ ತಡೆವೊಡ್ಡಿತ್ತಷ್ಟೆ. ಯಾತನಾಶಿಬಿರದ ಅವರ ಅನುಭವ ಅವರ ಬರಹಗಳನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಬದುಕಿನ ಅರ್ಥ ಹುಡುಕುತ್ತಾ ಅಲೆಯುತ್ತಿದ್ದವರಿಗೆ ವಿಕ್ಟರ್ ದಾರಿ ದೀಪವಾದರು. ವಿಕ್ಟರ್ ನುಡಿದಂತೆ, ಬರೆದಂತೆ ಬದುಕಿದವರು. ಅವರ ಬದುಕೇ ಬೋಧನೆಯಾಗಿತ್ತು. ನಾಟ್ಸಿಗಳ ಬರ್ಬರ ಕೃತ್ಯಗಳಿಗೆ ಸಾಕ್ಷಿಯಾದ ಮೇಲೂ ಅವರು ಮನುಕುಲದಲ್ಲಿ ನಂಬಿಕೆ ಕಳೆದುಕೊಂಡಿರಲಿಲ್ಲ. ಮನುಷ್ಯನಿಗೆ ಒಳಿತು ಮತ್ತು ಕೆಡುಕು ಮಾಡುವ ಅಪರಿಮಿತ ಕ್ಷಮತೆಯಿದೆ, ಆಯ್ಕೆ ಸ್ವಾತಂತ್ರ್ಯವೂ ಇದೆ ಎಂದು ವಿಕ್ಟರ್ ನಂಬಿದ್ದರು- No one is entirely good or evil; as human beings, we embody both capacities and possess the freedom to choose between them.
ಬಹುಜನರು ನಡೆದ ಸವೆದ ಹಾದಿಯಲ್ಲಿ ಸಂಚರಿಸದೆ ನಮ್ಮ ಮನಸ್ಸಾಕ್ಷಿಯಂತೆ ನಡೆಯುವುದು ಸುಲಭದ ಮಾರ್ಗವಲ್ಲ. ಎರಡನೇ ಮಹಾಯುದ್ಧದ ಕಾಲದಲ್ಲಿ ಹಲವರು ಪ್ರಭುತ್ವದ ಆಜ್ಞೆಗಳನ್ನು ಪ್ರಶ್ನಿಸದೆ ಕುರುಡಾಗಿ ಅನುಸರಿಸಿದರೆ ಕೆಲವರು ಮಾತ್ರ ಆತ್ಮಸಾಕ್ಷಿ ತೋರಿದ ದಾರಿಯಲ್ಲಿ ನಡೆದರು. ಆಗುತ್ತಿದ್ದ ಅನ್ಯಾಯ, ಅಮಾನವೀಯ ಆಕ್ರಮಣವನ್ನು ಉಗ್ರವಾಗಿ ಖಂಡಿಸಿದರು. ಅದಕ್ಕಾಗಿ ಅವರ ಪ್ರಾಣವನ್ನೇ ತೆತ್ತರು. ಆ ದಿನಗಳಿಂದ ಇಂದಿನವರೆಗೆ ಜನರು ವಿಕಸನ ಹೊಂದಿದ್ದಾರೆಯೇ? ಜಗತ್ತಿನಲ್ಲಿ ಇಂದಿಗೂ ಜನರು ಏನೆಲ್ಲಾ ಕ್ರೌರ್ಯ, ಅನ್ಯಾಯವನ್ನು ಸ್ವೀಕರಿಸಿ ಅಥವಾ ಅವಕ್ಕೆ ಕುರುಡಾಗಿ ಮುಂದುವರೆದಿದ್ದಾರೆ? ಎಷ್ಟು ಮಂದಿ ತಮ್ಮ ಮನದಾಳದ ಮಾತಿಗೆ ಮಾತ್ರ ಕಿವಿಗೊಡುತ್ತಾ, ಎಲ್ಲರಂತೆ ಸ್ವಂತಿಕೆಗೆ ಒಳಗಾಗದೆ ಪ್ರತಿರೋಧ ತೋರಿದ್ದಾರೆ? ಈ ಕಟುವಾದ ಮತ್ತು ತೀಕ್ಷವೂ ಆದ ಪ್ರಶ್ನೆಗಳು ಮನುಕುಲದ ಮೂಲ ಪ್ರಕೃತಿಯನ್ನು ಸದಾ ಪ್ರತಿಫಲಿಸುತ್ತವೆ ಎಂದು ನಂಬಿದ್ದರು ವಿಕ್ಟರ್.
ಇದನ್ನು ಓದಿದ್ದೀರಾ?: AI ಜೊತೆ ಸಂಸದನ ಸಂವಾದ; ಗೆದ್ದದ್ದು ಯಾರು?
1988ರಲ್ಲಿ ನಾಟ್ಸಿ ಜರ್ಮನಿಯ ಪಡೆಗಳು ಆಸ್ಟ್ರಿಯವನ್ನು ಆಕ್ರಮಿಸಿ ಐವತ್ತು ವರುಷ ಕಳೆದ ಸಂದರ್ಭದಲ್ಲಿ ವಿಕ್ಟರ್ ಅವರನ್ನು ಭಾಷಣಕ್ಕೆ ಕರೆಯಲಾಗಿತ್ತು. ನಾಟ್ಸಿಗಳ ತರತಮದ, ಜನಾಂಗಾಧಾರಿತ ಹುಚ್ಚುತನವನ್ನು ವಿಶ್ಲೇಷಿಸುತ್ತ ವಿಕ್ಟರ್ ಆಡಿದ ಮಾತುಗಳು ನೆನಪಿನಲ್ಲಿ ಉಳಿಯುವಂತದ್ದು. “ನನ್ನ ಜೀವನದಲ್ಲಿ ಬರಿಯ ಎರಡು ಜನಾಂಗವನ್ನು ನಾ ಕಂಡಿದ್ದೇನೆ- ಸಭ್ಯ ಮತ್ತು ಅಸಭ್ಯ ಜನಾಂಗ. ಎಲ್ಲ ದೇಶ, ರಾಜಕೀಯ ಪಕ್ಷ, ಗುಂಪುಗಳಲ್ಲಿ ಈ ಎರಡು ಬಗೆಯ ಜನರನ್ನು ಕಾಣಬಹುದು. ಹಾಗಾಗಿ ಎಲ್ಲೆಡೆ ಮತ್ತೊಂದು ಜನಾಂಗೀಯ ನರಮೇಧ, ಯಾತನಾ ಶಿಬಿರಗಳ ಹಿಂಸೆ ನಡೆಯುವ ಸಾಧ್ಯತೆ ಹೇರಳವಾಗಿ ಇದ್ದೇ ಇರುತ್ತದೆ” ಎಂಬ ಮಾತದು. ಮನುಷ್ಯನ ಮೂಲ ಗುಣದ ಕುರಿತು ನೀವು ತೆಗೆದುಕೊಂಡ ಈ ನಿಲುವು ನಿರಾಶಾದಾಯಕ ಅಲ್ಲವೇ ಎಂಬ ಪ್ರಶ್ನೆಗೆ “ನನ್ನ ಹೇಳಿಕೆ ಆಶಾದಾಯಕ ಅಥವಾ ನಿರಾಶಾದಾಯಕವು ಅಲ್ಲ. ಇದು ನಾವೆಲ್ಲರೂ ಕಾರ್ಯಪ್ರವೃತ್ತರಾಗುವುದಕ್ಕೆ ನಾ ನೀಡುತ್ತಿರುವ ಕರೆಯಷ್ಟೇ” ಎಂದು ಉತ್ತರಿಸಿದರು ವಿಕ್ಟರ್. ಸಭ್ಯತೆ ಮತ್ತು ಅಸಭ್ಯತೆ ಎಂಬುದು ವೈಯಕ್ತಿಕ ಆಯ್ಕೆ ಅದನ್ನ ಯಾರ ಮೇಲೂ ಹೇರಲಾಗದು. ಮತ, ರಾಷ್ಟ್ರ, ವರ್ಣ, ಲಿಂಗ, ಜನಾಂಗೀಯತೆ ಆಧಾರದ ಮೇಲೆ ಸಮಾಜ ಒಡೆದು ಲಾಭ ಮಾಡಿಕೊಳ್ಳುವ ಅಸಭ್ಯರ ನಡುವೆ ಸಭ್ಯನಾಗಿಯೇ ಉಳಿಯುವೆನೆಂಬ ಆಯ್ಕೆ ಮಾಡುವ ಬೆರಳೆಣಿಕೆ ಮಂದಿ ಒಗ್ಗೂಡಿ ಬದ್ಧತೆಯಿಂದ ಕಾರ್ಯಪ್ರವೃತ್ತರಾದರೆ ಶಾಂತಿ, ಸೌಹಾರ್ದತೆ, ಮಾನವೀಯತೆಗೆ ಅವಕಾಶ ಸಿಕ್ಕಿತೇನೋ ಎಂಬ ಅಭಿಪ್ರಾಯ ವಿಕ್ಟರ್ ಅವರದ್ದಾಗಿತ್ತು.

ಘಟಿಸುತ್ತಿರುವ ಹಿಂಸಾತ್ಮಕ ಜಾಗತಿಕ ವಿದ್ಯಮಾನಗಳು, ಮುಗ್ಧ ಮಕ್ಕಳ ಹತ್ಯೆ, ಹೆಚ್ಚುತ್ತಿರುವ ಕ್ರೌರ್ಯ, ಕಂಡು ಕೇಳರಿಯದಷ್ಟು ಹೆಚ್ಚಿರುವ ಶಸ್ತ್ರಾಸ್ತಗಳ ಖರೀದಿ, ಅಡೆತಡೆಯಿಲ್ಲದೆ ನಡೆದಿರುವ ವಿನಾಶಕಾರಿ ಹತಾರುಗಳ ಉತ್ಪಾದನೆ, ಕಮರಿ ಹೋಗುತ್ತಿರುವ ಬಡವರ, ವಿದ್ಯಾರ್ಥಿಗಳ ಬದುಕು, ಮತಾಧಾರಿತ ರಾಜಕಾರಣ, ಮಹಾನ್ ಸುಳ್ಳರ ಆಡಳಿತ, ಬಿಕರಿಯಾದ ಮಾಧ್ಯಮಗಳು, ವ್ಯಾಪಕವಾಗಿರುವ ಅಸಮಾನತೆ, ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಪರಿಸರ ನಾಶ, ಸಂವೇದನಾ ರಹಿತ ಸಮಾಜದ ಸೃಷ್ಟಿಯಾಗುತ್ತಿರುವ ಈ ದಿನಗಳಲ್ಲಿ ವಿಕ್ಟರ್ ಮತ್ತೆ ನೆನಪಾದರು, ಅವರ ಚದುರಿದ ಚಿಂತನೆಗಳನ್ನು ಹಂಚಿಕೊಳ್ಳಬೇಕೆನಿಸಿತು.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ




