ಅತ್ಯಾಚಾರಗಳ ರಾಜಧಾನಿ, ಕೊಲೆ-ಸುಲಿಗೆಗಳ ತಾಣವೆಂದೇ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ವಕೀಲರೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ, ಅವರ ಮೇಲೆ ವಾಹನ ಹತ್ತಿಸಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಬಸ್ತಿ ಜಿಲ್ಲೆಯ ಬೈಡೋಲಿಯಾ ಅಜೈಬ್ ಪ್ರದೇಶದ ನಿವಾಸಿ, ವಕೀಲ ಚಂದ್ರಶೇಖರ್ ಯಾದವ್ ಅವರನ್ನು ದುಷ್ಕರ್ಮಿಗಳ ಗುಂಪು ಅಪಹರಿಸಿ, ಬರ್ಬರವಾಗಿ ಹತ್ಯೆಗೈದಿದೆ.
ಯಾದವ್ ಅವರು ಕಪ್ತಂಗಂಜ್ನಿಂದ ತಮ್ಮೂರಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ. ಅವರ ಮೇಲೆ ಅಮಾನುಷವಾಗಿ ಹಲ್ಲೆಗೈದು, ವಾಹನ ಹತ್ತಿಸಿ ಕೊಲೆ ಮಾಡಿದ್ದಾರೆ. ವಾಲ್ಟರ್ಗಂಜ್ನ ರಸ್ತೆಯಲ್ಲಿ ಮೃಹದೇಹವನ್ನು ಎಸೆದು ಪರಾರಿಯಾಗಿದ್ದಾರೆ.
ವಕೀಲ ಯಾದವ್ ಅವರ ಸಹೋದರಿ ತನ್ನ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸಹೋದರಿಯ ಪರವಾಗಿ ಯಾದವ್ ಅವರೇ ವಾದಿಸುತ್ತಿದ್ದರು ಎಂದು ತಿಳಿದುಬಂದಿದೆ. ಆ ಕಾರಣಕ್ಕಾಗಿ, ಯಾದವ್ ಅವರ ಸಹೋದರಿಯ ಪತಿ ರಂಜಿತ್ ಯಾದವ್ ಅವರೇ ಚಂದ್ರಶೇಖರ್ ಯಾದವ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಂಜಿತ್ನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ 2023ರಲ್ಲಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿಯೇ ವಕೀಲರೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.