ಅತ್ಯಾಚಾರಕ್ಕೊಳಗಾದ 17 ವರ್ಷದ ಬಾಲಕಿಯನ್ನು ತಾಯಿಯೇ ತನ್ನ ಇಬ್ಬರು ಪುತ್ರರೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಪೊಲೀಸರು ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರರನ್ನು ಬಂಧಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ತಮ್ಮ ಮಗಳು ಸಂತ್ರಸ್ತೆಯಾಗಿರುವುದು ತಮ್ಮ ಕುಟುಂಬಕ್ಕೆ ಕಳಂಕವಾಗಲಿದೆ, ಕುಟುಂಬಕ್ಕೆ ಅಪಖ್ಯಾತಿ ತರಬಹುದು ಎಂಬ ಭಯದಿಂದ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
20 ವರ್ಷದ ರಿಂಕು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಫೆಬ್ರವರಿಯಲ್ಲಿ ಆತನ ವಿರುದ್ಧ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ತಿಂಗಳ ಆರಂಭದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ.
ಸೆಪ್ಟೆಂಬರ್ 18ರಂದು ಬಾಲಕಿ ತನ್ನ ಸಹೋದರ ಮತ್ತು ತಾಯಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಜಾಮೀನಿನ ಮೇಲೆ ಹೊರ ಬಂದ ಅತ್ಯಾಚಾರ ಆರೋಪಿ ರಿಂಕು ತನ್ನ ಮತ್ತೊಬ್ಬ ಸಹಚರನೊಂದಿಗೆ ಸೇಡು ತೀರಿಸಲು ಈ ಕೊಲೆಯನ್ನು ಮಾಡಿದ್ದಾನೆ ಎಂದು ತಾಯಿ ಮತ್ತು ಕುಟುಂಬ ಆರೋಪಿಸಿತ್ತು.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ
ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಿಂಕು ಮತ್ತು ಆತನ ಸಹಚರನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ತನಿಖೆಯ ವೇಳೆ ಕುಟುಂಬಕ್ಕೆ ಅಪಖ್ಯಾತಿ ಬರಬಹುದೆಂಬ ಭಯದಿಂದ ಬಾಲಕಿಯ ತಾಯಿ ಮತ್ತು ಆಕೆಯ ಇಬ್ಬರು ಸಹೋದರರು ಆಕೆಯನ್ನು ಕೊಲ್ಲುವ ಸಂಚು ರೂಪಿಸಿದ್ದರು ಎಂಬುದು ಪೊಲೀಸರಿಗೆ ತಿಳಿದುಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕುಮಾರ್ ತಿಳಿಸಿದ್ದರು.
ಸಂತ್ರಸ್ತೆಯ ಸಹೋದರ ವಿನೀತ್ ತನ್ನ ತಾಯಿಯ ಚಿಕ್ಕಪ್ಪ ಮಹಾವೀರ್ ಜೊತೆಗೂಡಿ ತನ್ನ ಇನ್ನೊಬ್ಬ ಸಹೋದರ ನೀರಜ್ ಮತ್ತು ತಾಯಿ ಬ್ರಿಜ್ವತಿಯೊಂದಿಗೆ ಬೈಕ್‌ನಲ್ಲಿ ಬಂದ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ತಾಯಿ ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ನೀರಜ್, ವಿನೀತ್ ಮತ್ತು ಬ್ರಿಜ್ವತಿಯನ್ನು ಪೊಲೀಸರು ಬಂಧಿಸಿದ್ದು, ಮಹಾವೀರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ. ಅಪರಾಧಕ್ಕೆ ಬಳಸಿದ ಬೈಕ್, ದೇಸಿ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
