ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆ ಕುಸಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ದುರ್ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜೈನ ಧರ್ಮದ ಮೊದಲ ತೀರ್ಥಂಕರ ಭಗವಾನ್ ಆದಿನಾಥ ಅವರ ಸ್ಮರಣೆಗಾಗಿ ‘ನಿರ್ವಾಣ ಲಡ್ಡು ಪರ್ವ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತೀರ್ಥಂಕರ ಆದಿನಾಥರಿಗೆ ಲಡ್ಡು ನೈವೇದ್ಯ ಮಾಡಲು ಬಿದಿರಿನಿಂದ 65 ಅಡಿಯುಳ್ಳ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಹಲವಾರು ಮಂದಿ ವೇದಿಕೆಯ ಬಳಿಯಿದ್ದ ಮರದ ಮೆಟ್ಟಿಲುಗಳ ಮೇಲೆ ಹತ್ತಿದ್ದರಿಂದಾಗಿ, ವೇದಿಕೆ ಕುಸಿದುಬಿದ್ದಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಅದಿಕಾರಿಗಳು ವೇದಿಕೆಯ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಗಾಯಾಳುಗಳಿಗೆ ತ್ವರಿತ ನೆರವು ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.