ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಬಳಿಯ ಧರಾಲಿ ಗ್ರಾಮದಲ್ಲಿ ಹಠಾತ್ತನೆ ಸಂಭವಿಸಿದ ಭಾರೀ ಮೇಘಸ್ಫೋಟದಿಂದ ಹೋಟೆಲ್‌ಗಳು, ಹೋಮ್‌ಸ್ಟೇಗಳು ಸೇರಿದಂತೆ ಹತ್ತಾರು ಕಟ್ಟಡಗಳು ನಾಶವಾಗಿವೆ. ಪ್ರವಾಹದಲ್ಲಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಆರ್ಯ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ, ಖಿರ್ ಗಡ್ ತೊರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಪ್ರವಾಹ ಉಂಟಾಗಿದೆ.
“ಖಿರ್ ಗಡ್ ನೀರಿನ ಮಟ್ಟ ಹೆಚ್ಚುತ್ತಿದ್ದು, ಪ್ರವಾಹ ಮುಂದುವರೆದಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸುಮಾರು 10ರಿಂದ 12 ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಪೊಲೀಸರು, ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಜನರನ್ನು ರಕ್ಷಿಸಲಾಗುತ್ತಿದೆ. ಕಾಣೆಯಾದವರ ಹುಟುಕಾಟ ನಡೆಯುತ್ತಿದೆ” ಎಂದು ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
“ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಭಾರತೀಯ ಸೇನೆಗೆ ಸೂಚಿಸಲಾಗಿದೆ. ನಾವು ಜನರನ್ನು ರಕ್ಷಿಸಲು ಕೆಲಸದಲ್ಲಿ ತೊಡಗಿದ್ದೇವೆ. ಅಧಿಕಾರಿಗಳು ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ” ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.