ಉತ್ತರಾಖಂಡ ಇಂದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಿದ್ದು, ಎಲ್ಲಾ ನಾಗರಿಕರಿಗೆ ಏಕರೂಪ ವಿವಾಹ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಮತ್ತು ದತ್ತು ಕಾನೂನುಗಳಿಗೆ ಚೌಕಟ್ಟನ್ನು ರೂಪಿಸಲಿದೆ. ಗೋವಾದ ನಂತರ ನಾಗರಿಕರಿಗೆ ಏಕರೂಪ ಕಾನೂನು ಚೌಕಟ್ಟನ್ನು ಹೊಂದಿರುವ ಎರಡನೇ ರಾಜ್ಯ ಇದಾಗಲಿದೆ.
ಉತ್ತರಾಖಂಡ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಲ್ಪಟ್ಟ ಸುಮಾರು ಒಂದು ವರ್ಷದ ನಂತರ ಈ ಸಂಹಿತೆ ಜಾರಿಗೆ ಬಂದಿದೆ. ಇದು 2022ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು.
ಇದನ್ನು ಓದಿದ್ದೀರಾ? ಟಿಎಂಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಸಿಎಎ, ಏಕರೂಪ ನಾಗರಿಕ ಸಂಹಿತೆ ನಿಷೇಧ
ಬಹುತ್ವ ವಿರೋಧಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಕ್ಕೆ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ. ಏಕರೂಪ ನಾಗರಿಕ ಸಂಹಿತೆಯಿಂದಾಗಿ ಭಾರತದ ವಂಚಿತ ಜನವರ್ಗಗಳು ಅಸಮಾನತೆ ಮತ್ತು ಅರಾಜಕತೆಗಳಿಗೆ ಬಲಿಪಶುಗಳಾಗುವ ಅಪಾಯವಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಆದರೆ ಇದೀಗ ಈ ಸಂಹಿತೆಯನ್ನು ಉತ್ತರಾಖಂಡದಲ್ಲಿ ಜಾರಿಗೊಳಿಸಲಾಗಿದೆ.
ಇನ್ನು ಈ ಸಂಹಿತೆಯಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲೀವ್-ಇನ್ ಸಂಬಂಧದಲ್ಲಿದ್ದರೆ ಲೀವ್-ಇನ್ ಸಂಬಂಧಕ್ಕೆ ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪೋಷಕರ ಒಪ್ಪಿಗೆಯನ್ನು ಕೂಡಾ ಪಡೆಯಬೇಕಾಗುತ್ತದೆ. ಈ ನಿಯಮವು ಉತ್ತರಾಖಂಡ ಯಾವುದೇ ನಿವಾಸಿಗಳಿಗೆ, ಹೊರಗಿನ ರಾಜ್ಯದವರಿಗೆ ಅನ್ವಯವಾಗುತ್ತದೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ
ಲೀವ್-ಇನ್ ಸಂಬಂಧವನ್ನು ಘೋಷಿಸಿದಿದ್ದರೆ, ರಿಜಿಸ್ಟ್ರೇಷನ್ ಮಾಡುವಲ್ಲಿ ವಿಫಲವಾದರೆ ಅಥವಾ ಸುಳ್ಳು ಮಾಹಿತಿಯನ್ನು ಒದಗಿಸಿದರೆ, ಮೂರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ನೋಂದಣಿಯಲ್ಲಿ ಒಂದು ತಿಂಗಳ ವಿಳಂಬವಾದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 10,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಏಕರೂಪ ನಾಗರಿಕ ಸಂಹಿತೆ ಹೇಳುತ್ತದೆ.
ಹಾಗೆಯೇ ವಿವಾಹವನ್ನು ಕೂಡಾ ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ. ವಿವಾಹದ ಕನಿಷ್ಠ ವಯಸ್ಸು ಪುರುಷರಿಗೆ 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷವಾಗಿದೆ. ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳನ್ನು ದಂಪತಿಯ ಕಾನೂನುಬದ್ಧ ಮಗು ಎಂದು ಯುಸಿಸಿ ಗುರುತಿಸುತ್ತದೆ. ಆನುವಂಶಿಕವಾಗಿ ಸಮಾನ ಹಕ್ಕುಗಳನ್ನು ಅವರಿಗೆ ಅನ್ವಯವಾಗುತ್ತದೆ.
ಇದನ್ನು ಓದಿದ್ದೀರಾ? ಕೇಂದ್ರದ ಏಕರೂಪ ನಾಗರಿಕ ಸಂಹಿತೆಗೆ ನಮ್ಮ ವಿರೋಧವಿದೆ: ಸಿಎಂ ಸಿದ್ದರಾಮಯ್ಯ
ಬಹುಪತ್ನಿತ್ವ, ಬಾಲ್ಯವಿವಾಹ, ತ್ರಿವಳಿ ತಲಾಖ್ ನಿಷೇಧ ಮತ್ತು ವಿಚ್ಛೇದನಕ್ಕೆ ಏಕರೂಪದ ಪ್ರಕ್ರಿಯೆಯನ್ನು ವಿಧಿಸಲಾಗುತ್ತದೆ. ಈ ಸಂಹಿತೆಯು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ. ಇನ್ನು ಏಕರೂಪ ನಾಗರಿಕ ಸಂಹಿತೆಯು ಮಹಿಳೆ ತನ್ನ ಗಂಡನನ್ನು ಕಳೆದುಕೊಂಡಾಗ ಅಥವಾ ವಿಚ್ಛೇದನ ಪಡೆದಾಗ ನಿಕಾಹ್ ಹಲಾಲಾ ಮತ್ತು ಇದ್ದತ್ ಸೇರಿದಂತೆ ಮುಸ್ಲಿಮರ ಕೆಲವು ವಿಭಾಗಗಳು ಅನುಸರಿಸುವ ಪದ್ಧತಿಗಳನ್ನು ನಿಷೇಧಿಸುತ್ತದೆ.
ಈ ನಡುವೆ ಪ್ರಧಾನಿ ನರೇಂದ್ರಮೋದಿ ಅವರು ಏಕರೂಪ ನಾಗರಿಕ ಸಂಹಿತೆಗಾಗಿ ಒತ್ತಾಯಿಸುತ್ತಿದ್ದಾರೆ ಮತ್ತು ಈ ವಿಷಯದ ಬಗ್ಗೆ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆಂದು ಪ್ರತಿಪಕ್ಷಗಳನ್ನು ದೂಷಿಸುತ್ತಿದ್ದಾರೆ. ಜಮಾತ್-ಎ-ಇಸ್ಲಾಮಿ ಹಿಂದ್ ಯುಸಿಸಿ ಎಲ್ಲ ಭಾರತೀಯರ ಮೇಲೆ ಪರಿಣಾಮ ಬೀರಬಹುದೆಂದು ಹೇಳಿದೆ.
