ಇಪ್ಪತ್ತು ರೂಪಾಯಿಗೆ ಆರು ಪಾನಿಪುರಿ ನೀಡುವ ಬದಲು ಬರೀ ನಾಲ್ಕು ಪಾನಿಪುರಿ ನೀಡಿದ್ದಕ್ಕೆ ನೊಂದ ಮಹಿಳೆಯೊಬ್ಬರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ವಡೋದರಾದಲ್ಲಿ ನಡೆದಿದೆ. ಮಹಿಳೆ ರಸ್ತೆ ಮಧ್ಯೆ ಅಳುತ್ತಾ ಕುಳಿತಿದ್ದರಿಂದ ವಾಹನ ಸವಾರರು ಬೇರೆ ಲೇನ್‌ನಲ್ಲಿ ಸಾಗಬೇಕಾದ ಸ್ಥಿತಿ ಉಂಟಾಗಿತ್ತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಹಿಳೆ ರಸ್ತೆ ಮಧ್ಯೆ ಕುಳಿತು ಅಳುತ್ತಿರುವುದು, “20 ರೂಪಾಯಿಗೆ ಬರೀ ನಾಲ್ಕು ಪಾನಿ ಪುರಿ ನೀಡಲಾಗಿದೆ, ಆರು ಪಾನಿಪುರಿ ನೀಡಬೇಕಾಗಿತ್ತು. ಈ ಅಂಗಡಿಯನ್ನೇ ಮುಚ್ಚಿಸಬೇಕು” ಎಂದು ಮಹಿಳೆ ಆಗ್ರಹಿಸಿರುವುದು ವಿಡಿಯೋದಲ್ಲಿ ಕಾಣಬಹುದು. ವಡೋದರಾ ಪೊಲೀಸರು ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಪಾನಿಪುರಿ ವ್ಯಾಪಾರಿಗಳಿಗೂ ಜಿಎಸ್‌ಟಿ; ಕೇಂದ್ರದ ವಿರುದ್ಧ ಆಕ್ರೋಶ
“ಮಹಿಳೆ ರಸ್ತೆಯಲ್ಲಿ ಕುಳಿತು ಅಳಲು ಪ್ರಾರಂಭಿಸಿದರು. ವಡೋದರಾ ಪೊಲೀಸರು ಸಮಸ್ಯೆಯನ್ನು ಪರಿಹರಿಸಿದರು. ಸುರ್‌ಸಾಗರ್ ಬಳಿ ಈ ಘಟನೆ ನಡೆದಿದೆ” ಎಂದು ವಿಡಿಯೋ ಪೋಸ್ಟ್ ಮಾಡಿದ ಸಾಗರ್ ಪಟೋಲಿಯಾ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೋರ್ವರು “ವಡೋದರಾ ಪೊಲೀಸರು ಮಧ್ಯಪ್ರವೇಶಿಸಿ ಈ ಪಾನಿಪುರಿ ಬಿಕ್ಕಟ್ಟನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
20ની 6 ની જગ્યાએ 4 પાણીપૂરી આપી..
— Sagar Patoliya (@kathiyawadiii) September 19, 2025
મહિલા રસ્તા ઉપર બેસી ગઇ અને રડવા લાગી, વડોદરા પોલીસે સમાધાન કરાવ્યું.. સુરસાગર પાસેની ઘટના.. #vadodara pic.twitter.com/Bh0wlzGY3Y
ಈ ಪಾನಿಪುರಿ ಪ್ರತಿಭಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು “ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಗಿದ್ದು” ಎಂದು ವ್ಯಂಗ್ಯವಾಡಿದ್ದಾರೆ. “ಪಾವತಿಸಿದ ಹಣಕ್ಕೆ ಸರಿಯಾಗಿ ಪಾನಿಪುರಿ ಸಿಕ್ಕಿದೆಯೇ ಎಂದು ಕೇಳುವ ಹಕ್ಕು ಇದೆ” ಎಂದು ಕೆಲವು ನೆಟ್ಟಿಗರು ಹೇಳಿದರೆ, “ಪ್ರತಿಭಟಿಸುವಷ್ಟು, ಮಾರ್ಗಗಳನ್ನು ನಿರ್ಬಂಧಿಸುವಷ್ಟು ದೊಡ್ಡ ಕಾರಣ ಇದಲ್ಲ. ಇದು ಮೂರ್ಖತನ” ಎಂದು ಇನ್ನು ಕೆಲವು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.
“ಪಾನಿಪುರಿ ಭೈಯ್ಯ ಅವರಿಗೆ 20 ರೂಪಾಯಿಗೆ ಆರು ಪಾನಿಪುರಿ ನೀಡುವ ಬದಲಾಗಿ ಕೇವಲ ನಾಲ್ಕು ಪಾನಿಪುರಿಗಳನ್ನು ನೀಡಿದರು. ಅದರ ವಿರುದ್ದ ಪ್ರತಿಭಟಿಸಲು ಮಹಿಳೆ ರಸ್ತೆಯ ಮಧ್ಯದಲ್ಲಿ ಕುಳಿತರು. ರಾಹುಲ್ ಗಾಂಧಿಯವರು ಮತ ಕಳ್ಳತನದ ಬಗ್ಗೆ ಗಂಭೀರವಾದ ಆರೋಪ ಮಾಡುತ್ತಿದ್ದಾರೆ. ಆದರೆ ಜನರಿಗೆ ಪಾನಿಪುರಿ ಪ್ರತಿಭಟನೆಯೇ ಅತಿ ಗಂಭೀರವಾಗಿದೆ” ಎಂದು ಇನ್ನೋರ್ವರು ಕಾಮೆಂಟ್ ಮಾಡಿದ್ದಾರೆ.
“ಪಾನಿಪುರಿ ವಿಷಯದಲ್ಲಿ ನಡೆದ ಅನ್ಯಾಯವು ನಗುವ ವಿಷಯವಲ್ಲ. ಇದನ್ನು ನೋಡಿ ನಗುವವರಿಗೆ ನಾಚಿಕೆಯಾಗಬೇಕು. ಪಾನಿ ಪುರಿ ಎಂದರೆ ಉತ್ಸಾಹ, ಭಾವನೆ, ಬಯಕೆ. ಒಂದು ತಟ್ಟೆಯಲ್ಲಿ ಆರಕ್ಕಿಂತ ಕಡಿಮೆ ಪಾನಿಪುರಿ ಇದ್ದರೆ ಅದನ್ನು ಒಪ್ಪಲಾಗದು” ಎಂದೂ ನೆಟ್ಟಗರು ಹೇಳಿದ್ದಾರೆ.
