ಭಾರತದಲ್ಲಿ ಟ್ವಿಟ್ಟರ್ ಅನ್ನು ಬಂದ್ ಮಾಡುವ ಬೆದರಿಕೆ ಒಡ್ಡಲಾಗಿತ್ತು ಎಂಬ ಟ್ವಿಟ್ಟರ್‌ನ ಸಹ-ಸಂಸ್ಥಾಪಕ ಜಾಕ್ ಡೋರ್ಸಿ ಹೇಳಿಕೆಯು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಜಾಕ್ ಡೋರ್ಸಿ ಹೇಳಿಕೆಯು ಇದೀಗ, ಕೇಂದ್ರದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಡೋರ್ಸಿ ಹೇಳಿಕೆ ಶುದ್ಧ ಸುಳ್ಳು ಎಂದು ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ʻಡೋರ್ಸಿ ಹೇಳಿಕೆಯಲ್ಲಿ ಆಶ್ಚರ್ಯವೇನಿಲ್ಲ. 2014ರ ಬಳಿಕ ದೇಶದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಸ್ವಾತಂತ್ರ್ಯಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆʼ ಎಂದಿದ್ದಾರೆ.
ಜನಸಾಮಾನ್ಯರ ಧ್ವನಿಯನ್ನಡಗಿಸಲು ಕೇಂದ್ರ ಸರ್ಕಾರ ಮಾತ್ರವಲ್ಲ, ಕೆಲ ರಾಜ್ಯ ಸರ್ಕಾರಗಳು ಸಹ ಪರ್ಯಾಯ ಧ್ವನಿಗಳನ್ನು ಹತ್ತಿಕ್ಕಲು ನಿರಂಕುಶ ಪ್ರಭುತ್ವದ ರೀತಿಯಲ್ಲಿ ವರ್ತಿಸುತ್ತಿವೆʼ ಎಂದು ತಿವಾರಿ ಹೇಳಿದ್ಧಾರೆ.
ಚುನಾವಣೆ ಸಮೀಪಿಸಿದಾಗ ಎಚ್ಚರವಾಗುವ ವಿದೇಶಿ ಶಕ್ತಿಗಳು; ಅನುರಾಗ್ ಠಾಕೂರ್
ಜಾಕ್ ಡೋರ್ಸಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ʻವರ್ಷಗಳ ನಂತರ ನಿದ್ರೆಯಿಂದ ಎಚ್ಚೆತ್ತ ಡೋರ್ಸಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಸಲುವಾಗಿ, ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಬೇರೊಬ್ಬ ವ್ಯಕ್ತಿ ಟ್ವಟ್ಟರ್ ಅನ್ನು ಖರೀದಿಸಿದಾಗ, ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು ಎಂಬುದು ‘ಟ್ವಿಟ್ಟರ್ ಫೈಲ್ಸ್’ನಲ್ಲಿ ಬಹಿರಂಗವಾಯಿತು. ಇದುವರೆಗೂ ಈ ಕುರಿತು ಉತ್ತರಿಸಲು ಡೋರ್ಸಿಗೆ ಸಾಧ್ಯವಾಗಿಲ್ಲ. ಭಾರತದಲ್ಲಿ ಚುನಾವಣೆ ಸಮೀಪಿಸಿದಾಗ ಹಲವಾರು ವಿದೇಶಿ ಶಕ್ತಿಗಳು ಎಚ್ಚರಗೊಳ್ಳುತ್ತವೆʼ ಎಂದು ಠಾಕೂರ್ ಹೇಳಿದ್ದಾರೆ.
ʻಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ ಎಲ್ಲಿದೆ?ʼ
ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಕೇಂದ್ರವು ಆಡಳಿತ ಯಂತ್ರವನ್ನು ಬಳಸಿಕೊಂಡು ಟ್ವಟ್ಟರ್ ಸಿಇಒ ಮೇಲೆ ಒತ್ತಡ ಹೇರಿತ್ತು. ಇದರಿಂದಲೇ ಅವರು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಿದ್ದಾರೆ. ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯ ಎಂಬುದು ಎಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಆಧಾರರಹಿತ ಆರೋಪ; ರವಿಶಂಕರ್ ಪ್ರಸಾದ್
ಜಾಕ್ ಡೋರ್ಸಿ ಎತ್ತಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ಧಾರೆ. ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಭಾರತದಲ್ಲಿ ಗೌರವಿಸಲಾಗುತ್ತದೆ. ಆದರೆ ಈ ಸಂಸ್ಥೆಗಳು ಈ ದೇಶದ ಸಂವಿಧಾನ ಮತ್ತು ನೆಲದ ಕಾನೂನನ್ನು ಗೌರವಿಸಬೇಕು ಮತ್ತು ಅನುಸರಿಸಬೇಕುʼ ಎಂದು ಪ್ರಸಾದ್ ಹೇಳಿದ್ದಾರೆ.
ಜಾಕ್ ಡೋರ್ಸಿ ಹೇಳಿದ್ದೇನು?
ʻಬ್ರೇಕಿಂಗ್ ದಿ ಪಾಯಿಂಟ್ಸ್ʼ ಯೂಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಜಾಕ್ ಡೋರ್ಸಿ, ರೈತರ ಪ್ರತಿಭಟನೆಯ ವೇಳೆ ಚಳವಳಿಯನ್ನು ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸಿ ಟ್ವೀಟ್ ಮಾಡುವ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಸಾಮಾನ್ಯರ ಟ್ವಿಟ್ಟರ್ ಖಾತೆಗಳನ್ನು ರದ್ದುಗೊಳಿಸುವಂತೆ ತಮಗೆ ಮನವಿ ಮಾಡಲಾಗಿತ್ತು.
ʻಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸದೇ ಇದ್ದಲ್ಲಿ ಭಾರತದಲ್ಲಿ ಟ್ವಿಟ್ಟರ್ ಬಂದ್ ಮಾಡುತ್ತೇವೆ, ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ, ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ, ಕಾನೂನು ಹೋರಾಟಕ್ಕೆ ಸಿದ್ಧರಾಗಿರಿ ಎಂದು ಬೆದರಿಕೆ ಹಾಕಲಾಗಿತ್ತು. ನಮ್ಮ ಕೆಲ ಉದ್ಯೋಗಿಗಳ ಮನೆ ಮೇಲೆ ದಾಳಿಯೂ ಆಗಿತ್ತುʼ ಎಂದು ಜಾಕ್ ಡೋರ್ಸಿ ಗಂಭೀರ ಆರೋಪ ಮಾಡಿದ್ದರು.
ಆದರೆ ಡೋರ್ಸಿ ಹೇಳಿಕೆಯನ್ನು ಅಲ್ಲಗಳೆದಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ʻಜಾಕ್ ಹೇಳಿಕೆ ಶುದ್ಧ ಸುಳ್ಳುʼ. 2020-2022ರ ಅವಧಿಯಲ್ಲಿ ಟ್ವಿಟ್ಟರ್, ಹಲವು ಬಾರಿ ದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿತ್ತು. ರೈತರ ಪ್ರತಿಭಟನೆ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡಿದ್ದವು. ಇಂತಹ ಸುಳ್ಳು ಸುದ್ದಿಗಳನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿತ್ತುʼ ಎಂದು ರಾಜೀವ್ ಹೇಳಿದ್ದಾರೆ.