ಅತ್ಯಾಚಾರ ಸಂತ್ರಸ್ತೆಯು ಗರ್ಭಪಾತ ಮಾಡಿಸಿಕೊಳ್ಳುವ ಎಲ್ಲಾ ಹಕ್ಕನ್ನು ಹೊಂದಿದ್ದಾರೆ. ಹೆರುವಂತೆ ಆಕೆಗೆ ಒತ್ತಡ ಹೇರುವುದು ಆಕೆಯ ಘನತೆಗೆ ಚ್ಯುತಿ ತಂದಂತೆ ಮತ್ತು ಆಕೆಯ ಮೂಲಭೂತ ಹಕ್ಕು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿರುವ 17 ವರ್ಷದ ಬಾಲಕಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ? ಯುವತಿಯ ಮೇಲೆ ಅತ್ಯಾಚಾರ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿದ ಸ್ನೇಹಿತರು
ಗರ್ಭಪಾತಕ್ಕೆ ಸಂಬಂಧಿಸಿದ ಅಧಿನಿಯಮದ ಸೆಕ್ಷನ್ 3(2) ಅನ್ನು ಉಲ್ಲೇಖಿಸಿದ ಕೋರ್ಟ್, “ಅತ್ಯಾಚಾರಕ್ಕೆ ಒಳಗಾದ ಪ್ರಕರಣದಲ್ಲಿ ಗರ್ಭಪಾತಕ್ಕೆ ನಿರಾಕರಿಸುವುದು ಮತ್ತು ತಾಯಿಯಾಗುವಂತೆ ಆಕೆಯ ಮೇಲೆ ಒತ್ತಡ ಹೇರುವುದು ಘನತೆಯಿಂದ ಬದುಕುವ ಹಕ್ಕಿಗೆ ಚ್ಯುತಿ ತಂದಂತೆ ಆಗುತ್ತದೆ. ತನ್ನ ದೇಹದ ಮೇಲೆ ಆಕೆಗೆ ಹಕ್ಕು ಇದೆ. ಆಕೆಯೇ ತಾನು ತಾಯಿಯಾಗಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬೇಕು” ಎಂದು ಹೇಳಿದೆ.
ಇನ್ನು ಬಾಲಕಿಯು ಮೂರು ತಿಂಗಳು, 15 ದಿನಗಳ ಗರ್ಭಿಣಿ ಎಂದು ವರದಿಯಾಗಿದೆ. ಬಾಲಕಿ ಪರ ವಕೀಲರು, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಿದ್ದಾರೆ.
ಇನ್ನು ನಿಯಮ ಪ್ರಕಾರ ಅತ್ಯಾಚಾರಕ್ಕೆ ಒಳಗಾದವರಿಗೆ 24 ವಾರಗಳವರೆಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. ಹಾಗೆಯೇ ಈ ಹಿಂದಿನ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ನಡೆದ ಇಂತಹುದ್ದೆ ವಿಚಾರಣೆಯನ್ನು ಕೂಡಾ ಪ್ರಸ್ತಾಪಿಸಿದೆ. ಹಾಗೆಯೇ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ.
