ತಮಿಳುನಾಡು ಹೊಸೂರು ಮೂಲದ ಹದಿನಾಲ್ಕು ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಬಾಲಕಿಯ ಪೋಷಕರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ವೈರಲ್ ಆದ ದೃಶ್ಯದಲ್ಲಿ ಯುವಕನೊಬ್ಬ ಬಾಲಕಿಯನ್ನು ಅಕ್ಷರಶಃ ಎತ್ತಿಕೊಂಡು ಹೋಗುತ್ತಿದ್ದರೆ, ಮತ್ತೊಬ್ಬ ಪುರುಷ ಹಾಗೂ ಮಹಿಳೆ ಆತನ ಹಿಂದೆಯೇ ಹೋದರು. ಯಾರೂ ಬಾಲಕಿಯ ರಕ್ಷಣೆಗೆ ಮುಂದಾಗದೇ ಹದಿನಾಲ್ಕು ವರ್ಷದ ಬಾಲಕಿಯ ಅಳು ಹಾಗೂ ಚೀರಾಟ ಅರಣ್ಯರೋಧನವಾಯಿತು. ಕರ್ನಾಟಕದ ಹೊಸೂರಿನ ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ತಮಿಳುನಾಡು ಗಡಿಭಾಗ ಹೊಸೂರಿನ ಸಮೀಪದ ತೊಟ್ಟಮಂಜು ಪರ್ವತ ಪ್ರದೇಶದಲ್ಲಿರುವ ತಿಮ್ಮತ್ತೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಶಾಲೆಯಲ್ಲಿ ಏಳನೇ ತರಗತಿವರೆಗೆ ಓದಿದ 14 ವರ್ಷದ ಬಾಲಕಿ ಮನೆಯಲ್ಲೇ ಉಳಿದಿದ್ದಳು. ಆದರೆ ಮಾರ್ಚ್ 3ರಂದು ಕರ್ನಾಟಕದ ಕಲಿಕುಟ್ಟೈ ಗ್ರಾಮದ ಮಾದೇಶ ಎಂಬ 29 ವರ್ಷ ವಯಸ್ಸಿನ ಕೂಲಿಕಾರ್ಮಿಕನಿಗೆ ಈಕೆಯನ್ನು ವಿವಾಹ ಮಾಡಿಕೊಡಲಾಗಿತ್ತು. ಆಕೆಯ ಪ್ರತಿರೋಧವನ್ನು ಯಾರೂ ಲೆಕ್ಕಿಸಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಪಿಎಸ್‌ಸಿ ಕೆಡಿಸಿದ್ದಾಯಿತು, ಸರಿಪಡಿಸುವವರಾರು?
ಬೆಂಗಳೂರಿನಲ್ಲಿ ಈ ವಿವಾಹ ನಡೆದಿತ್ತು. ಹುಟ್ಟೂರು ತಿಮ್ಮತ್ತೂರಿಗೆ ಮರಳಿದ ಬಳಿಕ ಬಾಲಕಿ ಈ ಮದುವೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ಗಂಡನಮನೆಗೆ ಹೋಗಲು ನಿರಾಕರಿಸಿದ್ದಳು. ಪೋಷಕರು ಮತ್ತು ಸಂಬಂಧಿಕರಲ್ಲೂ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಳು.
ಆದರೆ ಯಾರೂ ಆಕೆಯ ಪ್ರತಿಭಟನೆಯನ್ನು ಪರಿಗಣಿಸಲಿಲ್ಲ. ಮಾದೇಶ್ ಹಾಗೂ ಆತನ ಅಣ್ಣ ಮಲ್ಲೇಶ್ ಬಲವಂತವಾಗಿ ಕಲಿಕುಟ್ಟೈ ಗ್ರಾಮದಲ್ಲಿರುವ ಬಾಲಕಿಯ ಸಂಬಂಧಿಕರ ಮನೆಯಿಂದ ಆಕೆಯನ್ನು ಎತ್ತಿಕೊಂಡು ಹೋಗಿದ್ದರು. ಇದನ್ನು ನೋಡಿದ ಸ್ಥಳೀಯರು ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿದೆ. ಬಾಲಕಿಯ ಅಜ್ಜಿ ಈ ಬಗ್ಗೆ ಅಧಿಕೃತ ದೂರು ನೀಡಿದ್ದು, ದೆಂಕನಿಕೊಟ್ಟೈ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಪೊಲೀಸರು ಮಾದೇಶ, ಆತನ ಅಣ್ಣ ಮಲ್ಲೇಶ, ಬಾಲಕಿಯ ತಾಯಿ ನಾಗಮ್ಮ ಅವರನ್ನು ಬಂಧಿಸಿದ್ದಾರೆ. ಗುರುವಾರ ನಸುಕಿನಲ್ಲಿ ಬಾಲಕಿಯ ತಂದೆ ಹಾಗೂ ಮಲ್ಲೇಶನ ಪತ್ನಿಯನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಮತ್ತು ಅಪಹರಣ ಪ್ರಕರಣವನ್ನು ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ಬಾಲಕಿ ಇದೀಗ ಅಜ್ಜಿ-ಅಜ್ಜನ ಜತೆ ವಾಸವಿದ್ದಾಳೆ.
