ಮತಗಟ್ಟೆಗೆ ನುಗ್ಗಿ ಇವಿಎಂ ಯಂತ್ರವನ್ನು ಒಡೆದು ಹಾಕಿದ ಆಂಧ್ರ ಪ್ರದೇಶದ ವೈಎಸ್‌ಆರ್‌ಸಿ ಪಕ್ಷದ ಶಾಸಕ ಪಿ ರಾಮಕೃಷ್ಣ ರೆಡ್ಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.
ಈ ಘಟನೆಯು ಮೇ 13 ರಂದು ಮಚರಾಲಾ ವಿಧಾನಸಭಾ ಕ್ಷೆತ್ರದ ಮತಗಟ್ಟೆ ಸಂಖ್ಯೆ 202 ಮತ್ತು 7 ರಲ್ಲಿ ಸಂಭವಿಸಿದ್ದು, ಶಾಸಕ ಮಾಡಿದ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚುನಾವಣಾ ಆಯೋಗವು ವಿಡಿಯೋಗಳನ್ನು ರಾಜ್ಯ ಪೊಲೀಸರಿಗೆ ನೀಡಿ ತನಿಖೆ ನಡೆಸುವಂತೆ ಸೂಚಿಸಿದೆ.
“ಹಾಲಿ ಶಾಸಕ ಪಿ ರಾಮಕೃಷ್ಣ ರೆಡ್ಡಿ ಮಚರಾಲಾ ವಿಧಾನಸಭಾ ಕ್ಷೆತ್ರದ ಮತಗಟ್ಟೆ ಸಂಖ್ಯೆ 202 ಮತ್ತು 7 ರಲ್ಲಿ ಇವಿಎಂ ಯಂತ್ರವನ್ನು ಹಾಳು ಮಾಡಿರುವುದು ವೆಬ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಲಾಂಡು ಜಿಲ್ಲೆಯ ಚುನಾವಣಾ ಅಧಿಕಾರಿಗಳು ವಿಡಿಯೋ ದೃಶ್ಯಗಳನ್ನು ಪೊಲೀಸರಿಗೆ ನೀಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ” ಎಂದು ಆಂಧ್ರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಅಧಿಕಾರಿಗಳ ಮಾಹಿತಿಯ ಪ್ರಕಾರ ಮತಯಂತ್ರ ಹಾಳು ಮಾಡಿದ ಪ್ರಕರಣದಲ್ಲಿ ಶಾಸಕನ ಹೆಸರನ್ನು ಸೇರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
“ಚುನಾವಣಾ ಆಯೋಗವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು,ಸಿಇಒ ಮುಖೇಶ್ ಕುಮಾರ್ ಮೀನಾ ಅವರು ದುಷ್ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ” ಎಂದು ಆಯೋಗದ ಮೂಲಗಳು ತಿಳಿಸಿವೆ.
“ವೈ ಎಸ್ ಜಗನ್ ಮೋಹನ್ ರೆಡ್ಡಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದಾರೆ. ವೈಎಸ್‌ಆರ್‌ಸಿ ಪಕ್ಷದ ಶಾಸಕ ಪಿ ರಾಮಕೃಷ್ಣ ರೆಡ್ಡಿ ಇವಿಎಂ ಯಂತ್ರವನ್ನು ನಾಶ ಮಾಡಿದ್ದು, ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸುತ್ತೇನೆ. ವೈಎಸ್‌ಪಿ ಪಕ್ಷದ ಅರಾಜಕತೆ ಜೂ.4 ರಂದು ಅಂತ್ಯವಾಗಲಿದೆ” ಎಂದು ಟಿಡಿಪಿ ನಾಯಕ ನರಾ ಲೋಕೇಶ್ ತಿಳಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಮೇ.13 ರಂದು ವಿಧಾನಸಭೆ ಹಾಗೂ ಲೋಕಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ.
