ಓರ್ವ ಪುರುಷನನನ್ನು ಹಲವಾರು ಮಹಿಳೆಯರು ಕಲ್ಲು, ಕೋಲು, ದೊಣ್ಣೆಗಳಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯ ಮೇಲೆ ಮಹಿಳೆಯರು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋ ಜೊತೆಗೆ ಪೋಸ್ಟ್ ಮಾಡಲಾಗುತ್ತಿದೆ. ಆದರೆ, ವಿಡಿಯೋದ ಅಸಲಿಯತ್ತು ಬೇರೆ ಇದ್ದು, ಆತ ಅತ್ಯಾಚಾರ ಆರೋಪಿಯಲ್ಲ ಎಂಬುದು ತಿಳಿದುಬಂದಿದೆ. ಮಾತ್ರವಲ್ಲದೆ, ಆ ವಿಡಿಯೋ ಸುಮಾರು 5 ವರ್ಷ ಹಳೆಯದ್ದು ಎಂದು ವರದಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ; ಮೊದಲಿಗೆ, ಓರ್ವ ಪುರುಷ ಮಹಿಳೆಯನ್ನು ತಳ್ಳುವುದು ಕಂಡುಬರುತ್ತದೆ. ಬಳಿಕ, ಹಲವಾರು ಮಹಿಳೆಯರು ಆತನ ಮೇಲೆ ಕಲ್ಲು ಮತ್ತು ಕೋಲುಗಳಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ.

ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವವರು ಥಳಿತಕ್ಕೊಳಗಾದ ವ್ಯಕ್ತಿ ಅತ್ಯಾಚಾರ ಆರೋಪಿಯಾಗಿದ್ದಾನೆ. ಆತ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿದೆ.
रोज़ रोज़ महिलाओं को छेड़ता था ।
— H̤🅰️ⱤVÉÈ (@Entidoto) June 7, 2025
आज़ क़ाबू आया है ।
लगता है भाजपाई नेता की तबियत से धुलाई हो रही है ।🤣
pic.twitter.com/W29WTD0iy3
ಆದರೆ, ವೈರಲ್ ಆದ ವಿಡಿಯೋ ಬಗ್ಗೆ ‘ಇಂಡಿಯಾ ಟುಡೆ’ ಸುದ್ದಿ ಸಂಸ್ಥೆಯು ‘ಫ್ಯಾಕ್ಟ್‌ಚೆಕ್ ನಡೆಸಿದೆ. ವೈರಲ್ ಆಗಿರುವ ವಿಡಿಯೋ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ವಾಲಾ ಗ್ರಾಮದಲ್ಲಿ ನಡದಿರುವ ಘಟನೆಯದ್ದಾಗಿದೆ. ಈ ಘಟನೆಯು ಸುಮಾರು 5 ವರ್ಷ ಹಳೆಯದು. ಅಲ್ಲದೆ, ವಿಡಿಯೋದಲ್ಲಿ ಥಳಿತಕ್ಕೊಳಗಾಗಿರುವ ವ್ಯಕ್ತಿ ಅತ್ಯಾಚಾರ ಆರೋಪಿಯಲ್ಲ. ಈ ಘಟನೆಯು ಭೂವಿವಾದಕ್ಕೆ ಸಂಬಂಧಿಸಿದಂತೆ ನಡೆದಿದೆ ಎಂಬುದು ಕಂಡುಹಿಡಿದಿದೆ.

ಮೊದಲಿಗೆ ಈ ವಿಡಿಯೋ, 2021ರ ಫೆಬ್ರವರಿ 19ರಂದು ‘ಹಿಮಾಚಲ ಅಭಿ ಅಭಿ’ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ. ಅದರ ವರದಿಯ ಪ್ರಕಾರ, 2021ರ ಫೆಬ್ರವರಿ 17ರಂದು ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ವಿವಾದಿಂದ ಜಗಳ ಸೃಷ್ಟಿಯಾಗಿದೆ. ಆದರೆ, ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯ ಭೂಮಿ ಮಾಲೀಕ (ವಿಡಿಯೋದಲ್ಲಿರುವ ವ್ಯಕ್ತಿ) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಗಾದೆ ತೆಗೆದಿದ್ದಾರೆ. ಆಗ ಎದುರಾಳಿಗಳು ಮಹಿಳಾ ಮಂಡಲದ ಸದಸ್ಯೆಯನ್ನು ಮುಂದೆ ಬಿಟ್ಟು, ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ವಿಡಿಯೋ 2023ರಲ್ಲಿಯೂ ಥಳಿತಕ್ಕೊಳಗಾದ ವ್ಯಕ್ತಿಯ ವಿರುದ್ಧ ಅತ್ಯಾಚಾರದ ಆರೋಪದೊಂದಿಗೆ ವೈರಲ್ ಆಗಿತ್ತು. 2023ರಲ್ಲಿ ವಿಡಿಯೋ ಕುರಿತು ಪ್ರತಿಕ್ರಿಯಿಸಿದ್ದ ಮಂಡಿ ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತೆ ನಿವೇದಿತಾ ನೇಗಿ ಅವರು, “ಈ ವೀಡಿಯೊ ಯಾವುದೇ ಅತ್ಯಾಚಾರ ಘಟನೆಗೆ ಸಂಬಂಧಿಸಿಲ್ಲ” ಎಂದು ಹೇಳಿದ್ದರು. ಮಾತ್ರವಲ್ಲದೆ, ಸರ್ವಾಲಾ ಗ್ರಾಮವು ಒಳಪಡುವ ಧನ್ಯಾರ ಗ್ರಾಮ ಪಂಚಾಯತಿಯ ಸರಪಂಚ್ ಕುಸ್ಮಾ ಕುಮಾರಿ ಅವರು ಕೂಡ. ‘ವಿಡಿಯೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಭೂ ವಿವಾದಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಸ್ಪಷ್ಟಪಡಿಸಿದ್ದರು.