ಹೆಚ್ಚುವರಿ 10 ರೂಪಾಯಿ ದರವನ್ನು ನೀಡಲು ನಿರಾಕರಿಸಿದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮೇಲೆ ಬಸ್ ನಿರ್ವಾಹಕನೊಬ್ಬ ಹಲ್ಲೆ ನಡೆಸಿದ ಪ್ರಕರಣ ಭಾನುವಾರ ನಡೆದಿರುವ ಬಗ್ಗೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ.
ನಿವೃತ್ತ ಐಐಎಸ್ ಅಧಿಕಾರಿಯನ್ನು ಅವರು ಇಳಿಯಬೇಕಿದ್ದ ಬಸ್ ನಿಲ್ದಾಣದಲ್ಲಿ ಇಳಿಸದ ಕಾರಣ ಅವರು ಹೆಚ್ಚುವರಿ ದರವಾಗಿ 10 ರೂಪಾಯಿ ನೀಡಲು ನಿರಾಕರಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಆರ್.ಎಲ್.ಮೀನಾ (75) ಎಂಬ ನಿವೃತ್ತ ಅಧಿಕಾರಿ ಆಗ್ರಾ ರಸ್ತೆಯ ಕನೋಟಾ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಈ ನಿಲ್ದಾಣ ಬಂದಾಗ ನಿರ್ವಾಹಕ ಮಾಹಿತಿ ನೀಡಿಲ್ಲ.ಬಸ್ ನಾಯ್ಲಾ ಎಂಬ ಮುಂದಿನ ನಿಲ್ದಾಣವನ್ನು ತಲುಪಿತು ಎಂದು ಠಾಣಾಧಿಕಾರಿ ಉದಯ ಸಿಂಗ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ
ಈ ಸಂಬಂಧದ ವಾಗ್ವಾದದಲ್ಲಿ ಬಸ್ಸಿನ ನಿರ್ವಾಹಕ ಮೀನಾ ಅವರನ್ನು ತಳ್ಳಿದ್ದಾನೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ನಿವೃತ್ತ ಅಧಿಕಾರಿ, ನಿರ್ವಾಹಕನನ್ನು ಹೊಡೆದಿದ್ದಾರೆ. ಆ ಬಳಿಕ ನಿರ್ವಾಹಕ ಹಲ್ಲೆ ನಡೆಸಿದ ಎಂದು ಸಿಂಗ್ ವಿವರಿಸಿದ್ದಾರೆ.
ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿರ್ವಾಹಕ ಘನಶ್ಯಾಮ ಶರ್ಮಾ ಎಂಬಾತನ ವಿರುದ್ಧ ಮೀನಾ ಅವರು ಕನೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿ ನಿರ್ವಾಹಕನನ್ನು ಜೈಪುರ ಸಿಟಿ ಟ್ರಾನ್ಸ್ಪೋರ್ಟ್ ಸರ್ವೀಸಸ್ ಲಿಮಿಟೆಡ್ ದುರ್ನಡತೆ ಆರೋಪದಲ್ಲಿ ಅಮಾನತು ಮಾಡಿದೆ.
