ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎಂಬ ವಿವಾದದ ನಡುವೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಪ್ರಸಾದ ಪ್ಯಾಕೆಟ್‌ಗಳ ಮೇಲೆ ಇಲಿಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್ (ಎಸ್‌ಎಸ್‌ಜಿಟಿ) ಈ ಆರೋಪವನ್ನು ಮಾತ್ರ ನಿರಾಕಿಸಿದೆ. ಹಾಗೆಯೇ ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಎಸ್‌ಎಸ್‌ಜಿಟಿ ಹೇಳಿದೆ. ವಿಡಿಯೋದಲ್ಲಿ ನೀಲಿ ಟ್ರೇನಲ್ಲಿ ಇರಿಸಲಾದ ಲಡ್ಡುಗಳ ಹರಿದ ಪ್ಯಾಕೆಟ್‌ಗಳ ಮೇಲೆ ಇಲಿಗಳು ಇರುವುದು ಕಂಡುಬಂದಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ ಶಿವಸೇನಾ ಮುಖಂಡ ಮತ್ತು ಎಸ್‌ಎಸ್‌ಜಿಟಿ ಅಧ್ಯಕ್ಷ ಸದಾ ಸರ್ವಾಂಕರ್, “ಪ್ರತಿನಿತ್ಯ ಲಕ್ಷ ಲಕ್ಷ ಲಡ್ಡುಗಳನ್ನು ವಿತರಿಸಲಾಗುತ್ತದೆ. ಅವುಗಳನ್ನು ಸಿದ್ಧಪಡಿಸಿದ ಸ್ಥಳವು ಸ್ವಚ್ಛವಾಗಿದೆ. ಆದರೆ ವಿಡಿಯೋದಲ್ಲಿ ಕೊಳಕು ಸ್ಥಳವಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ತಿರುಪತಿ ಲಡ್ಡು ವಿವಾದ; ನಂದಿನಿ ತುಪ್ಪಕ್ಕೆ ಬೇಡಿಕೆ
“ಈ ವಿಡಿಯೋವನ್ನು ನೋಡಿದಾಗ ನಮ್ಮ ದೇವಸ್ಥಾನದಲ್ಲಿ ತೆಗೆದಿರುವುದಲ್ಲ ಎಂದನಿಸುತ್ತದೆ. ಇದು ಬೇರೆಲ್ಲೋ ತೆಗೆದಿರುವ ವಿಡಿಯೋವಾಗಿದೆ” ಎಂದು ತಿಳಿಸಿದ್ದಾರೆ.
“ನಾವು ಸಿಸಿಟಿವಿಯನ್ನು ಪರಿಶೀಲಿಸುತ್ತೇವೆ ಮತ್ತು ವಿಚಾರಣೆ ನಡೆಸಲು ಡಿಸಿಪಿ ಶ್ರೇಣಿಯ ಅಧಿಕಾರಿಯನ್ನು ನೇಮಿಸುತ್ತೇವೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ವಾಂಕರ್, “ದೇವಸ್ಥಾನವು ಪ್ರಸಾದವನ್ನು ಶುದ್ಧ ಸ್ಥಳದಲ್ಲಿ ತಯಾರಿಸುತ್ತದೆ. ತುಪ್ಪ, ಗೋಡಂಬಿ ಮತ್ತು ಇತರ ಪದಾರ್ಥಗಳನ್ನು ಮೊದಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ಲ್ಯಾಬ್‌ನಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅನುಮೋದನೆಯ ನಂತರ ಅದನ್ನು ಬಳಸಲಾಗುತ್ತದೆ. ಲ್ಯಾಬ್‌ನಲ್ಲಿ ನೀರನ್ನು ಸಹ ಪರೀಕ್ಷಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ತಿರುಪತಿ ಲಡ್ಡುಗಳ ವಿವಾದದ ನಡುವೆಯೇ ಈ ವಿಡಿಯೋ ವೈರಲ್ ಆಗಿದೆ. ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ತಿರುಪತಿ ಲಡ್ಡುಗಳಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೆಪ್ಟೆಂಬರ್ 18ರಂದು ಆರೋಪಿಸಿದ್ದರು.
BREAKING: Video shows mice over prasad at Mumbai's Shree Siddhivinayak Temple. #SiddhivinayakTemple pic.twitter.com/Hx8BJw22vh
— Vani Mehrotra (@vani_mehrotra) September 24, 2024
