ಸುಮಾರು 77 ವರ್ಷದ ವೃದ್ಧೆ ಮೇಲೆ ಹಲ್ಲೆಗೈದು, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿ ಗ್ರಾಮಸ್ಥರು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.
ಅಮರಾವತಿ ಜಿಲ್ಲೆಯ ರೆತ್ಯಾಖೇಡ ಗ್ರಾಮದಲ್ಲಿ ಘಟನೆ ನಡೆದಿದೆ. ಮಾಟಮಂತ್ರಿ ಮಾಡುತ್ತಿದ್ದಾರೆಂಬ ಅನುಮಾನದ ಮೇಲೆ ವೃದ್ಧೆಯನ್ನು ಗ್ರಾಮಸ್ಥರು ಥಳಿಸಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸಿದ್ದಾರೆ. ಬೆಂಕಿಯಲ್ಲಿ ಕಾದಿದ್ದ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವೃದ್ಧೆ ತನ್ನ ಮನೆಯಲ್ಲಿ ಒಬ್ಬರೇ ಇದ್ದಾಗ ನೆರೆಹೊರೆಯವರು ಮನೆಗೆ ನುಗ್ಗಿ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆಕೆಯನ್ನು ಮನೆಯಿಂದ ಹೊರಗೆ ಎಳೆದೊಯ್ದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವೃದ್ಧೆಯ ಮಗ ಮತ್ತು ಸೊಸೆ ಮನೆಗೆ ಮರಳಿದಾಗ ಸಂತ್ರಸ್ತ ಮಹಿಳೆ ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ತಿಳಿಸಿದ್ದಾರೆ. ಸಂತ್ರಸ್ತೆಯ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.