ಸುಪ್ರೀಂ ಕೋರ್ಟ್ – ಹಲವಾರು ತೀರ್ಪುಗಳಲ್ಲಿ, ಬಂಧನದಲ್ಲಿರುವ ವ್ಯಕ್ತಿಯ ಬರೆಯುವ ಹಕ್ಕನ್ನು ಎತ್ತಿಹಿಡಿದಿದೆ. ಜೈಲಿನಲ್ಲಿರುವ ವ್ಯಕ್ತಿಯ ಬದುಕುವ ಹಕ್ಕಿನಲ್ಲಿ ಓದುವ, ಬರೆಯುವ ಮತ್ತು ವಿವಿಧ ರೀತಿಯ ಸ್ವಯಂ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಳ್ಳುವ ಹಕ್ಕುಗಳಿವೆ ಎಂಬುದನ್ನು ಒತ್ತಿ ಹೇಳಿದೆ.
ಕೆಲವೊಮ್ಮೆ ಜೈಲು ವ್ಯವಸ್ಥೆಗಳು ಅನಿಯಂತ್ರಿತ ನಿಯಮಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ರಾಜ್ಯ ಸರ್ಕರಗಳು ತಮ್ಮದೇ ಆದ ಜೈಲು ನಿಯಮಗಳನ್ನು ರೂಪಿಸಿದರೂ, ಜೈಲುಗಳನ್ನು ನಿಯಂತ್ರಿಸುವವರು ಜೈಲು ಅಧಿಕಾರಿಗಳು. ಅವರು ತಮಗಿಚ್ಚಿಸಿದಂತೆ ನಿಮಯಗಳನ್ನು ರೂಪಿಸಿ, ಕೈದಿಗಳ ಮೇಲೆ ಹೇರುವ ಪ್ರಹಸನಗಳು ನಡೆಯುತ್ತವೆ. ಅಂತಹದ್ದೊಂದು ಉದಾಹರಣೆಯಾಗಿ, ಕೇರಳದ ವಿಯ್ಯೂರ್ ಕೇಂದ್ರ ಕಾರಾಗೃಹವು ಸುದ್ದಿಯಲ್ಲಿದೆ. ತನಗಿಷ್ಟಬಂದಂತೆ ನಿಯಮ, ನಿರ್ಬಂಧ ಹೇರಿದೆ.
ಸುಮಾರು 10 ವರ್ಷಗಳಿಗೂ ಹೆಚ್ಚು ಸಮಯದಿಂದ ವಿಯ್ಯೂರ್ ಕಾರಾಗೃಹದಲ್ಲಿರುವ ಸಾಮಾಜಿಕ ಕಾರ್ಯಕರ್ತ, ಬರಹಗಾರ ರೂಪೇಶ್ ಕುಮಾರ್ ಅವರು ಜೈಲಿನಲ್ಲಿಯೇ ಕಾದಂಬರಿಯೊಂದನ್ನು ಬರೆದಿದ್ದಾರೆ. ಆದರೆ, ಆ ಕಾದಂಬರಿಯನ್ನು ಪ್ರಕಟಿಸಲು ಜೈಲು ಅಧಿಕಾರಿಗಳು ಅನುಮತಿಸದ ಕಾರಣ, ಅವರ ಕಾದಂಬರಿ ಹಾಗೆಯೇ ಉಳಿದುಹೊಗಿದೆ.
ರೂಪೇಶ್ ಅವರ ವಿರುದ್ಧ ‘ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ’ಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಒಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರೂಪೇಶ್, ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. 10 ವರ್ಷಗಳಿಂದ ವಿಯ್ಯೂರ್ ಕಾರಾಗೃಹದಲ್ಲಿದ್ದಾರೆ. ದೇಶಾದ್ಯಂತ ವಿವಿಧ ಜೈಲುಗಳಲ್ಲಿನ ಅನೇಕ ಕೈದಿಗಳಂತೆ ಅವರೂ ಕೂಡ ಪುಸ್ತಕವನ್ನು ಬರೆದಿದ್ದಾರೆ. ಅವರ ಮೊದಲ ಪುಸ್ತಕ 2013ರಲ್ಲಿ ಪ್ರಕಟವಾಗಿತ್ತು. ಇದೀಗ, ಎರಡನೇ ಕಾದಂಬರಿ ಬರೆದಿದ್ದಾರೆ.
ರೂಪೇಶ್ ಅವರು ತಮ್ಮ ಎರಡನೇ ಕಾದಂಬರಿ ‘ಬಂಧಿತರುಡೆ ಓರ್ಮಕುರಿಪ್ಪುಕಲ್’ಅನ್ನು ಜೈಲಿನಲ್ಲಿಯೇ ಮಲಯಾಳಂ ಭಾಷೆಯಲ್ಲಿ ಬರೆದಿದ್ದಾರೆ. ಅಲ್ಲದೆ, ಈ ಕಾದಂಬರಿಯನ್ನು ಇಂಗ್ಲಿಷ್‌ನಲ್ಲಿ ‘ದಿ ಮೆಮೋಯಿರ್ಸ್ ಆಫ್ ಎ ಕ್ಯಾಪ್ಟಿವ್’ ಎಂದು ಅನುವಾದಿಸಲಾಗಿದೆ. ಆದರೆ, ಈ ಪುಸ್ತಕವನ್ನು ಪ್ರಕಟಿಸಲು ವಿಯ್ಯೂರ್ ಕಾರಾಗೃಹದ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ ತೀರ್ಪುಗಳು ‘ಜೈಲು ಸಾಹಿತ್ಯ’ವನ್ನು (ಜೈಲಿನಲ್ಲಿ ಕೈದಿಗಳು ಬರೆಯುವ ಪುಸ್ತಕಗಳು) ಪ್ರಕಟಿಸಲು ಬೆಂಬಲಿಸಿವೆ. ದೇಶದ ಹಲವು ಜೈಲುಗಳಲ್ಲಿ ಕೈದಿಗಳು ಬರೆದಂತಹ ಕೃತಿಗಳನ್ನು ಪ್ರಕಟಿಸಲಾಗಿದೆ. ಆದರೆ, ವಿಯ್ಯೂರ್ ಕೇಂದ್ರ ಕಾರಾಗೃಹದ ಅಧಿಕಾರಿಗಳು ರೂಪೇಶ್ ಅವರ ಬರಹಗಳ ಪ್ರಕಟಣೆಯನ್ನು ನಿರ್ಬಂಧಿಸಿದ್ದಾರೆ.
ರೂಪೇಶ್ ಅವರು ತಮ್ಮ ಪುಸ್ತಕವನ್ನು ಪೂರ್ಣಗೊಳಿಸಿದ ಬಳಿಕ ಪ್ರಕಾಶನ ಸಂಸ್ಥೆಯನ್ನು ಗುರುತಿಸಿದ್ದು, ತಾವು ಬರೆದ ಹಸ್ತಪ್ರತಿಯನ್ನು ಪ್ರಕಟಣೆಗಾಗಿ ಹಸ್ತಾಂತರಿಸಲು ಅನುಮತಿ ಕೋರಿ ಜೈಲು ಅಧಿಕಾರಿಗಳಿಗೆ ಲಿಖಿತ ಪತ್ರ ಸಲ್ಲಿಸಿದ್ದರು. ಆದರೆ, ಅವರ ವಿನಂತಿಗೆ ಅಧಿಕಾರಿಗಳು ಉತ್ತರಿಸಿಲ್ಲ.
ಬಳಿಕ, ರೂಪೇಶ್ ಅವರಿಗೆ ಅಧಿಕಾರಿಗಳು, ‘ತಮ್ಮ ಪುಸ್ತಕವನ್ನು ಪ್ರಕಟಣೆಗೆ ಅನುಮತಿಸುವುದಿಲ್ಲ’ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಆ ಪುಸ್ತಕವು ಜೈಲು ಅನುಭವದ ಸೂಕ್ಷ್ಮ ವಿವರಗಳು ಮತ್ತು ಯುಎಪಿಎ ಕುರಿತು ವ್ಯಾಖ್ಯಾನಗಳನ್ನು ಒಳಗೊಂಡಿದೆ. ಯುಎಪಿಎ ಕಾನೂನಿನ ಬಗ್ಗೆ ವಿಮರ್ಶಾತ್ಮಕ ನಿಲುವನ್ನು ಹೊಂದಿದೆ. ಅವರ ಜೈಲಿನ ಅನುಭವವನ್ನು ವಿವರಿಸುತ್ತದೆ ಎಂಬ ಕಾರಣವನ್ನು ನೀಡಿ, ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಕೇರಳದಲ್ಲಿ ಕೈದಿಗಳು ತಮ್ಮ ಜೈಲು ಜೀವನವನ್ನು ವಿವರವಾಗಿ ವಿಶ್ಲೇಷಿಸಿ ಬರೆದಿರುವ ಮೊದಲ ಕೃತಿಯೇನೂ ಇದಲ್ಲ ಎಂಬುದು ಗಮನಾರ್ಹ.
ರೂಪೇಶ್ ಅವರ ಪತ್ನಿ ಮತ್ತು ವಕೀಲೆ ಶೈನಾ ಪಿ.ಎ ಅವರು ಕೇರಳ ಮತ್ತು ದೇಶಾದ್ಯಂತ ಕೈದಿಗಳು ತಮ್ಮ ಜೈಲು ಜೀವನ ಮತ್ತು ಇತರ ಸಂಗತಿಗಳ ಬಗ್ಗೆ ಕೃತಿಗಳನ್ನು ಪ್ರಕಟಿಸಿರುವ ಇತಿಹಾಸವನ್ನು ವಿವರಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಅನುಮತಿ ನಿರಾಕರಿಸಿದ್ದು, ‘ಅಧಿಕಾರಿಗಳಿಂದ ಇಂತಹ ಉದ್ಧಟತನವನ್ನು ನಿರೀಕ್ಷಿಸಿರಲಿಲ್ಲ’ ಎಂದು ಶೈನಾ ಹೇಳಿದ್ದಾರೆ.
ಒಬ್ಬ ವ್ಯಕ್ತಿಯ ಬರವಣಿಗೆಯು ತಾನು ವಾಸಿಸುವ ಸಾಮಾಜಿಕ ವಾತಾವರಣವನ್ನು ಪ್ರತಿಬಿಂಬಿಸುವುದು ಸಾಮಾನ್ಯ. ಈ ಬಗ್ಗೆ ವಿವರಿಸಿದರೂ ಜೈಲು ಅಧಿಕಾರಿಗಳು ಪಟ್ಟುಬಿಡುತ್ತಿಲ್ಲ. ಅನುಮತಿ ನೀಡುತ್ತಿಲ್ಲ. ಹೀಗಾಗಿ, ದಂಪತಿಗಳು ‘ಜೈಲಿನಲ್ಲಿರುವ ಕೈದಿಗಳ ಬರೆಯುವ ಹಕ್ಕಿಗಾಗಿ ಅಭಿಯಾನ’ ಆರಂಭಿಸಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ, ಶೈನಾ ಅವರು ಕೇರಳದ ಕಾರ್ಯಕರ್ತರು ಮತ್ತು ಬರಹಗಾರರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿದ್ದಾರೆ. ‘ಶೀಘ್ರವೇ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದಾಗಿ ವಿಜಯನ್ ಭರವಸೆ ನೀಡಿದ್ದಾರೆ’ ಎಂದು ಶೈನಾ ಹೇಳಿದ್ದಾರೆ. “ಮುಖ್ಯಮಂತ್ರಿಗಳು ನೀಡಿದ ಭರವಸೆಯು ನಮಗೆ ಸ್ಪೂರ್ತಿ ನೀಡಿದೆ. ನಾವು ಸರ್ಕಾರದ ಕ್ರಮಕ್ಕಾಗಿ ಕಾಯುತ್ತಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಜೈಲಿನಲ್ಲಿರುವ ಕೈದಿಗಳು ತಮ್ಮ ‘ಮಾನವ ಹಕ್ಕುಗಳ ಉಲ್ಲಂಘನೆ’ಯ ಬಗ್ಗೆ ದೂರು ನೀಡಿರುವುದು ಇದೊಂದೇ ಪ್ರಕರಣವಲ್ಲ. ಈ ತಿಂಗಳ ಆರಂಭದಲ್ಲಿ, ರಾಜ್ಯದ ಕಾನೂನು ವಿದ್ಯಾರ್ಥಿ ಅಲನ್ ಶುಐಬ್ ಅವರು ಕೇರಳದಲ್ಲಿ ಜೈಲಿನಲ್ಲಿರುವವರ ಹಕ್ಕುಗಳನ್ನು ಯಾವ ರೀತಿಯಲ್ಲಿ ಕಸಿದುಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ.
“ಕೇರಳದಲ್ಲಿ ಉತ್ತಮ ಜೈಲು ವ್ಯವಸ್ಥೆಗಳು ಇದ್ದರೂ, ರಾಜ್ಯದಲ್ಲಿ ಕೈದಿಗಳು ತಮ್ಮ ಪ್ರತಿಯೊಂದು ಮೂಲಭೂತ ಅಗತ್ಯಗಳಿಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಕೈದಿಗಳು ತಮ್ಮ ಕುಟುಂಬಗಳಿಗೆ ಫೋನ್ ಕರೆ ಮಾಡುವುದರಿಂದ ಹಿಡಿದು, ಅಧ್ಯಯನಕ್ಕಾಗಿ ಪುಸ್ತಕಗಳನ್ನು ಪಡೆಯುವವರೆಗೆ ಎಲ್ಲವನ್ನೂ ಕೇರಳದ ಜೈಲು ಅಧಿಕಾರಿಗಳು ನಿರ್ಬಂಧಿಸಿದ್ದಾರೆ” ಎಂದು ಅವರು ಬರೆದಿದ್ದಾರೆ.
ಜೈಲಿನಲ್ಲಿ, ರೂಪೇಶ್ ಅಧ್ಯಯನ ಮತ್ತು ಬರವಣಿಗೆ ಎರಡರಲ್ಲೂ ತೊಡಗಿಸಿಕೊಂಡು ತನ್ನ ಸಮಯವನ್ನು ಬಳಸಿಕೊಂಡಿದ್ದಾರೆ. ಜೈಲಿನಲ್ಲಿ ಇದ್ದುಕೊಂಡೇ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ತತ್ವಶಾಸ್ತ್ರದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುತ್ತಿದ್ದಾರೆ. ಅವರು ಕಂಪ್ಯೂಟರ್ ಹಾರ್ಡ್‌ವೇರ್, ಮೊಬೈಲ್ ರಿಪೇರಿ ಹಾಗೂ ಬೇಕಿಂಗ್ ಕೋರ್ಸ್‌ಗಳನ್ನು ಸಹ ಪೂರ್ಣಗೊಳಿಸಿದ್ದಾರೆ. ಜೊತೆಗೆ, ಹಲವಾರು ಕಥೆಗಳು, ಪ್ರಬಂಧಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ ಎಂದು ಶೈನಾ ಹೇಳಿದ್ದಾರೆ.
“ಜೈಲು ಬರವಣಿಗೆ ಅತ್ಯಂತ ಮಹತ್ವವಾದದ್ದು. ಬರವಣಿಗೆಯು ಜೈಲಿನಲ್ಲಿರುವ ವ್ಯಕ್ತಿಯ ಅಗತ್ಯ ಮಾತ್ರವಲ್ಲ, ಜೈಲು ಪರಿಸ್ಥಿತಿಗಳು ಮತ್ತು ಅವುಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಅತ್ಯಗತ್ಯ ಸಾಹಿತ್ಯವೂ ಆಗಿದೆ. ಇದು ಭಾರತದಲ್ಲಿ ಜೈಲು ಸುಧಾರಣಾ ಚಳವಳಿಗೆ ಕೊಡುಗೆ ನೀಡಬಹುದು” ಎಂದು ಶೈನಾ ಹೇಳುತ್ತಾರೆ. ಗಮನಾರ್ಹವೆಂದರೆ, ಈ ಹಿಂದೆ ಶೈನಾ ಕೂಡ ಜೈಲು ವಾಸ ಅನುಭವಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ
ಸುಪ್ರೀಂ ಕೋರ್ಟ್ – ಹಲವಾರು ತೀರ್ಪುಗಳಲ್ಲಿ, ಬಂಧನದಲ್ಲಿರುವ ವ್ಯಕ್ತಿಯ ಬರೆಯುವ ಹಕ್ಕನ್ನು ಎತ್ತಿಹಿಡಿದಿದೆ. 1966ರಲ್ಲಿ, ಮಹಾರಾಷ್ಟ್ರ ರಾಜ್ಯ vs ಪ್ರಭಾಕರ್ ಪಾಂಡುರಂಗ್ ಪ್ರಕರಣದಲ್ಲಿ, ಸಂವಿಧಾನದ 21ನೇ ವಿಧಿಯಲ್ಲಿ ಉಲ್ಲೇಖಿಸಲಾದ ‘ಜೀವನದ ಹಕ್ಕು’ ಕೈದಿಗಳಿಗೂ ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಪಾಂಡುರಂಗ್ ಅವರು ಜೈಲಿನಲ್ಲಿದ್ದಾಗ ಬರೆದ ಪುಸ್ತಕವನ್ನು ತನ್ನ ಪತ್ನಿಗೆ ಹಸ್ತಾಂತರಿಸದಂತೆ ಜೈಲು ಅಧಿಕಾರಿಗಳು ತಡೆದಿದ್ದರು. ಪುಸ್ತಕ ಪ್ರಕಟಣೆಯನ್ನು ನಿರ್ಬಂಧಿಸುವ ಜೈಲು ಅಧಿಕಾರಿಗಳ ಧೋರಣೆಯನ್ನು ನ್ಯಾಯಾಲಯವು ಕಾನೂನುಬಾಹಿರವೆಂದು ಪರಿಗಣಿಸಿತ್ತು.
ಆ ನಂತರವೂ, ಹಲವಾರು ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಜೈಲಿನಲ್ಲಿರುವ ವ್ಯಕ್ತಿಯ ಬದುಕುವ ಹಕ್ಕಿನಲ್ಲಿ ಓದುವ, ಬರೆಯುವ ಮತ್ತು ವಿವಿಧ ರೀತಿಯ ಸ್ವಯಂ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಳ್ಳುವ ಹಕ್ಕುಗಳಿವೆ. ಅವುಗಳನ್ನು ಕಸಿದುಕೊಳ್ಳಲಾಗದು ಎಂಬುದನ್ನು ಪುನರುಚ್ಚರಿಸಿದೆ.
ಜೈಲಿನಲ್ಲಿದ್ದಾಗ ಬರೆಯುವುದು ಎಂದಿಗೂ ಸುಲಭವಲ್ಲ. ಜೈಲಿನಲ್ಲಿ ಅಮಾನವೀಯ ಜೀವನ ಪರಿಸ್ಥಿತಿಗಳ ನಡುವೆ, ಬರವಣಿಗೆಯ ಸಾಮಗ್ರಿಗಳನ್ನು ಪಡೆಯುವುದು ಸಹ ಒಂದು ಸವಾಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಜೈಲಿನಲ್ಲಿರುವ ವ್ಯಕ್ತಿಗಳು ಪೆನ್ನುಗಳು, ನೋಟ್‌ಬುಕ್‌ಗಳು ಹಾಗೂ ಓದಲು ಪುಸ್ತಕಗಳನ್ನು ಪಡೆದುಕೊಳ್ಳಲು ಅನುಗಾಗಿ ನ್ಯಾಯಾಲಯಗಳ ಮೆಟ್ಟಿಲು ಏರಿಬೇಕಾಗುತ್ತದೆ. ನ್ಯಾಯಾಲಯ ಅನುಮತಿ ನೀಡಿದ ಹೊರತಾಗಿಯೂ, ಜೈಲು ಅಧಿಕಾರಿಗಳು ತೊಡಕುಗಳನ್ನು ಸೃಷ್ಟಿಸುತ್ತಾರೆ ಎಂಬ ಕುಖ್ಯಾತಿ ಪಡೆದಿದ್ದಾರೆ.
2006ರ ಜುಲೈ 11ರಂದು ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ತಪ್ಪಾಗಿ ಬಂಧಿಸಲ್ಪಟ್ಟು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅಬ್ದುಲ್ ವಾಹಿದ್ ಶೇಖ್ ಅವರು ಜೈಲಿನಲ್ಲಿದ್ದಾಗಲೇ ತನ್ನ ಜೀವನದ ಬಗ್ಗೆ ಬರೆಯಲು ಪ್ರಾರಂಭಿಸಿದ್ದರು. ಆದರೆ, ಅವರ ಪುಸ್ತಕದ ಮೊದಲ ಹಸ್ತಪ್ರತಿ ನಾಶವಾಯಿತು. ಅವರು ಶ್ರಮವಹಿಸಿ ಬರೆದ ನೂರಾರು ಪುಟಗಳನ್ನು ಪುನಃ ಬರೆಯಬೇಕಾಯಿತು. ಅಂತಿಮವಾಗಿ, ಶೇಖ್ ಅವರ ಪುಸ್ತಕ ‘ಬೆಗುನಾ ಖೈದಿ’ (ಮುಗ್ಧ ಕೈದಿ) ಪ್ರಕಟವಾಯಿತು.