ಕಳೆದ ಒಂದೂವರೆ ವರ್ಷದಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಶಾಂತಿ ನೆಲೆಸುತ್ತಿತ್ತು. ಗಲಭೆ, ಘರ್ಷಣೆಗಳು ಕಡಿಮೆಯಾಗಿದ್ದವು. ಆದರೆ, ಇದೀಗ, ಎರಡು ದಿನಗಳಿಂದ ಮತ್ತೆ ಹಿಂಸಾಚಾರ ನಡೆಯುತ್ತಿದ್ದು, ಇಬ್ಬರು ಮಹಿಳೆಯರನ್ನು ಹಿಂಸಾಚಾರಿಗಳು ಹತ್ಯೆಗೈದಿದ್ದಾರೆ.
ಜಿರಿಬಾಮ್ ಜಿಲ್ಲೆಯ ಝೈರೌನ್ ಗ್ರಾಮದಲ್ಲಿ ಓರ್ವ ಮಹಿಳೆಯನ್ನು ಶುಕ್ರವಾರ ಹತ್ಯೆ ಮಾಡಲಾಗಿತ್ತು. ದುಷ್ಕರ್ಮಿಗಳ ಗುಂಪು ಆಕೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದು ಸುಟ್ಟುಹಾಕಿದ್ದರು. ಇದೀಗ, ಶನಿವಾರ, ಬಿಷ್ಣುಪುರ್ ಜಿಲ್ಲೆಯ ಸೈಟನ್ ವಾಥಾ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಮೃತ ಮಹಿಳೆಯನ್ನು ಸಪಮ್ ಒಂಗ್ಬಿ ಸೋಫಿಯಾ ಎಂದು ಗುರುತಿಸಲಾಗಿದೆ. ಆಕೆ ಹೊಲಕ್ಕೆ ತೆರಳುವಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದಾಳಿ ನಡೆಸಿರುವ ಗುಂಪು ಸೊರೆಪಾ ಸಂಘಟನೆಗೆ ಸೇರಿದೆ ಎಂದು ಹೇಳಲಾಗಿದೆ. ಆ ಸಂಘಟನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಮೇ 3ರಂದು ಮಣಿಪುರದಲ್ಲಿ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಆರಂಭವಾಗಿತ್ತು. ಹಿಂಸಾಚಾರದಲ್ಲಿ ಈವರೆಗೆ ಸುಮಾರು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.