ದುರ್ಗಾ ದೇವಿ ಮೆರವಣಿಗೆ ವೇಳೆ ಉಂಟಾದ ಕೋಮು ಹಿಂಸಾಚಾರದಿಂದ 22 ವರ್ಷದ ಯುವಕ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ನಡೆದಿದೆ. ಘಟನೆಯಿಂದಾಗಿ ಬಹರಾಯಿಚ್‌ನಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರಕ್ಷುಬ್ಧ ಜನಸಮೂಹವು ಕಬ್ಬಿಣದ ಸಲಾಕೆಗಳನ್ನು ಹಿಡಿದು ವಾಹನಗಳ ಮೇಲೆ ದಾಳಿ ನಡೆಸಿದ್ದು, ಅಂಗಡಿಗಳಿಗೂ ಬೆಂಕಿ ಹಚ್ಚಿದೆ.
ಮಹಾರಾಜ್‌ಗಂಜ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಜನರ ವಾಸಿಸುವ ಮನ್ಸೂರ್ ಪ್ರದೇಶದಲ್ಲಿ ಹಿಂದು ಸಮುದಾಯವು ದುರ್ಗಾ ದೇವಿ ಮೆರವಣಿಗೆ ನಡೆಸಿದೆ. ಈ ವೇಳೆ, ಉದ್ದೇಶಪೂರ್ವಕವಾಗಿ ಡಿ.ಜೆ ಸೌಂಡ್ ಜಾಸ್ತಿ ಮಾಡಿ, ಗದ್ದಲ ಸೃಷ್ಟಿಸಿದೆ. ಇದನ್ನು ಮುಸ್ಲಿಂ ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ. ಆ ಕಾರಣಕ್ಕಾಗಿಯೇ ಎರಡೂ ಸಮುದಾಯದ ನಡುವೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಗಲಾಟೆ ವೇಳೆ, ಕಲ್ಲು ತೂರಾಟವೂ ನಡೆದಿದ್ದು, ದುರ್ಗಾ ದೇವಿ ಪ್ರತಿಮೆಗೂ ಹಾನಿಯಾಗಿದೆ. ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ರಾಮ್ ಗೋಪಾಲ್ ಮಿಶ್ರಾ ಎಂಬ ಯುವಕ ಸಾವನ್ನಪ್ಪಿದ್ದಾರೆ. ಯುವಕನ ಸಾವಿನ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೋಮು ಹಿಂಸಾಚಾರ ಭುಗಿಲೆದ್ದಿದೆ.
ಹಿಂಸಾಚಾರ ಪ್ರಕರಣದಲ್ಲಿ ಎರಡೂ ಸಮುದಾಯದ 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಹಾರ್ದಿ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಇಬ್ಬರನ್ನು ಯೋಗಿ ಸರ್ಕಾರ ಅಮಾನತುಗೊಳಿಸಿದೆ.