2024ರ ಜುಲೈನಲ್ಲಿ, ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ಅನ್ನು ಟೀಂ ಇಂಡಿಯಾ ಗೆದ್ದಿತ್ತು. ಆಗ, ಟೀಂ ಇಂಡಿಯಾ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದರು. ಸಂವಾದ ವೇಳೆ, ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ‘ಅಹಂಕಾರ’ ಪದವನ್ನು ಉಲ್ಲೇಖಿಸಿದ್ದರು. ಆಟಗಳ ಬಗ್ಗೆ ಕೊಹ್ಲಿ ಆಡಿರುವ ಮಾತುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹೇಳಿದಂತೆ ಭಾಸವಾಗಿತ್ತು. ಆ ವಿಡಿಯೋ ಆಗ ವೈರಲ್ ಆಗಿತ್ತು. ಇದೀಗ, ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿರುವ ಸಮಯದಲ್ಲಿ ಆ ವಿಡಿಯೋ ಮತ್ತೆ ಮುನ್ನೆಲೆ ಬಂದಿದೆ.
ಬಾರ್ಬಡೋಸ್‌ನಲ್ಲಿ ಟಿ20 ವಿಶ್ವಕಪ್ ಗೆದ್ದ ಸಮಯದಲ್ಲಿ ಬೆರಿಲ್ ಚಂಡಮಾರುತ ಅಪ್ಪಳಿಸಿತ್ತು. ಪರಿಣಾಮ, ಟೀಂ ಇಂಡಿಯಾ ಭಾರತಕ್ಕೆ ಮರಳಲಾಗದೆ ಬಾರ್ಬಡೋಸ್‌ನಲ್ಲಿಯೇ ಸಿಲುಕಿಕೊಂಡಿತ್ತು. ಕೆಲ ದಿನಗಳ ಬಳಿ ಭಾರತ ತಂಡ ಬಾರ್ಬಡೋಸ್‌ನಿಂದ ದೆಹಲಿಗೆ ಬಂದಿಳಿದಿತ್ತು.
ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ ಶಾ ಜೊತೆ ಟೀಂ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಸಂವಾದ ನಡೆಸಿದ್ದರು. ಈ ಸಂವಾದದ ಪೂರ್ಣ ವಿಡಿಯೋವನ್ನು ಶುಕ್ರವಾರ ಸಂಜೆ ಯೂಟ್ಯೂಬ್‌ನಲ್ಲಿ ಖುದ್ದು ಪ್ರಧಾನಿ ಮೋದಿಯೇ ಬಿಡುಗಡೆಗೊಳಿಸಿದ್ದರು.
ಈ ಸಂವಾದದ ವೇಳೆ ಮಾತನಾಡಿದ್ದ ವಿರಾಟ್ ಕೊಹ್ಲಿ, “ನಾನು ಏನು ಮಾಡಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡುತ್ತೇನೆ ಎಂದು ನಮಗೆ ಅನಿಸಿದರೆ ನಮ್ಮ ಅಹಂಕಾರ ಹೆಚ್ಚಾಗುತ್ತದೆ. ಆಗ ಆಟ ನಮ್ಮ ಕೈತಪ್ಪಿ ಹೋಗುತ್ತದೆ. ಅಹಂಕಾರವನ್ನೇ ಬಿಡಬೇಕಾಗುತ್ತದೆ” ಎಂದು ಹೇಳಿದ್ದರು.
“ಆಟದ ಸ್ಥಿತಿ ಹಾಗೆಯೇ ಇತ್ತು. ನನಗೆ ನನ್ನ ಅಹಂಕಾರವನ್ನು ತೋರಿಸಲು ಅವಕಾಶವೇ ಇರಲಿಲ್ಲ. ತಂಡಕ್ಕಾಗಿ ನನ್ನ ಅಹಂಕಾರವನ್ನು ನಾನು ಬದಿಗೊತ್ತಬೇಕಾಗಿತ್ತು” ಎಂದು ತಿಳಿಸಿದ್ದರು.
"When your arrogance rises, the game slips away from you."
— Hate Detector 🔍 (@HateDetectors) July 5, 2024
– Cricketer #ViratKohli in front of #PMModi. pic.twitter.com/XYHHrkI1QS
ಸದ್ಯ ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, “ವಿರಾಟ್ ಕೊಹ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದರು.
“ಆ ಅಹಂಕಾರದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬರು (ನರೇಂದ್ರ ಮೋದಿ) 303 ಸ್ಥಾನದಿಂದ 240ಕ್ಕೆ ಇಳಿದಿದ್ದಾರೆ” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದರೆ, “ಇನ್ನೊಬ್ಬರನ್ನು ಪರೋಕ್ಷವಾಗಿ ರೋಸ್ಟ್ ಮಾಡುವ ಪ್ರತಿಭೆ ಕೊಹ್ಲಿಗೆ ಇದೆ ಎಂದು ನನಗೆ ತಿಳಿದಿರಲಿಲ್ಲ” ಎಂದು ಮತ್ತೋರ್ವ ನೆಟ್ಟಿಗರು ಹೇಳಿದ್ದರು.