ಕಾಶ್ಮೀರಿಯೊಬ್ಬಳ ನಿತ್ಯ ನಿಜಾಯಿತಿಯ ಸತ್ಯ ಸ್ವಗತ 

Date:

ಇದು ಖುದ್ದು ಕಾಶ್ಮೀರದ ಒಡಲ ಮೇಲಾಗಿರುವ ದಾಳಿ. ಈ ಹಿಂಸೆಯ ಹಿಂದೆ ನಾವಿಲ್ಲ, ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಈ ಹಿಂದೆಯೂ ಇರಲಿಲ್ಲ. ಮುಂದೆಂದೂ ಇರುವುದಿಲ್ಲ.  

ಹಲವು ದುಗುಡ ದುಸ್ಸಾಧ್ಯದ ದಿನಮಾನಗಳಿಗೂ ಕಾಶ್ಮೀರ ಕಣಿವೆ ಅಸಹಾಯಕ ಸಾಕ್ಷಿಯಾಗಿದೆ. ಪರ್ವತಗಳ ಗಡಚಿಕ್ಕುವ ಮೌನ ಅಸಹನೀಯ ಎನಿಸುತ್ತದೆ. ಬಲು ಭಾರವಾಗಿ ಭಾಸವಾಗುತ್ತದೆ. ಗಾಢ ಶಾಂತಿಯ ನೈಸರ್ಗಿಕ ಚೆಲುವು ಕೂಡ ನಮ್ಮ ಕಣಿವೆಗಳ ಒಳಹೊಕ್ಕು ಬರುವ ಕತ್ತಲೆಯಿಂದ ನಮ್ಮನ್ನು ಕಾಪಾಡಲಾಗುತ್ತಿಲ್ಲ. ಮೊನ್ನೆಯ ಏಪ್ರಿಲ್ 22, 2025, ಕಾಶ್ಮೀರದ ಚರಿತ್ರೆಯಲ್ಲಿ ಅಂತಹದೇ ಒಂದು ಕತ್ತಲ ದಿನವಾಗಿ ದಾಖಲಾಯಿತು. ಪಹಲ್ಗಾಮಿನ ಹಸಿರು ಹುಲ್ಲುಗಾವಲುಗಳು ನೆತ್ತರಿನಿಂದ ಕೆಂಪಾದವು. ಪ್ರತಿಯೊಬ್ಬ ಕಾಶ್ಮೀರಿಯ ಹೃದಯವನ್ನು ಚೂರು ಚೂರಾಗಿಸಿದ ದಿನವಿದು. ಈ ನಿಷ್ಕಾರಣ ಹಿಂಸೆಯನ್ನು ಪದಗಳಲ್ಲಿ ಹಿಡಿಯಲಾಗದು. ಈ ಪತ್ರವನ್ನು ಬರೆಯುತ್ತಿರುವ ನನ್ನ ಗುಂಡಿಗೆಯನ್ನು ನೋವು ಹಿಂಡಿ ಹಿಪ್ಪೆಯಾಗಿಸಿದೆ. ಆತ್ಮವು ಅಳಲಿನ ಒಜ್ಜೆಯಲ್ಲಿ ಕುಸಿದು ಹೋಗಿದೆ.

ಅತಿಥಿಗಳಾಗಿ ನಮ್ಮ ಮನೆಗೆ ಬಂದಿದ್ದ ಅಮಾಯಕರನ್ನು ಇಂದು ನಿರ್ದಯವಾಗಿ ಗುಂಡಿಕ್ಕಿ ಕೊಲ್ಲಲಾಯಿತು. ನಮ್ಮ ಬೆಟ್ಟ ಕಣಿವೆಗಳಲ್ಲಿ ಬೀಸುವ ತಂಪು ತಾಜಾ ಗಾಳಿಯನ್ನು ಸೇವಿಸಲು, ದೇವದಾರು ಕಾಡುಗಳು ಮತ್ತು ನದಿಗಳಲ್ಲಿ ಶಾಂತಿಯನ್ನು ಆರಸಿ ಬಂದ ಪ್ರವಾಸಿಗರು, ಕಾಶ್ಮೀರದ ಪ್ರಸಿದ್ಧ ಅತಿಥಿ ಸತ್ಕಾರವನ್ನು ಅನುಭವಿಸಲಿಲ್ಲ, ಬದಲಿಗೆ ಯಾರೂ ನೋಡಬಾರದ ಭಯಾನಕ ಕ್ರೌರ್ಯಕ್ಕೆ ಬಲಿಯಾದರು. ನನ್ನ ಅಣು ಅಣುವೂ ಚೀರಿ ಹೇಳುತ್ತಿದೆ- ಇದು ಕಾಶ್ಮೀರಿ ಸಹೃದಯತೆ ಅಲ್ಲವೇ ಅಲ್ಲ.  

ಈ ಬರ್ಬರ ಹಲ್ಲೆ ಕೇವಲ ಅಮಾಯಕ ಜೀವಗಳ ಮೇಲೆ ಆಗಿದ್ದಲ್ಲ, ಇದು ಖುದ್ದು ಕಾಶ್ಮೀರದ ಒಡಲ ಮೇಲಾಗಿರುವ ದಾಳಿ. ಶತಮಾನಗಳಷ್ಟು ಪುರಾತನವಾದ ನಮ್ಮ ಸ್ನೇಹ- ಸ್ವಾಗತದ ಸಂಪ್ರದಾಯಗಳಿಗೆ ಎಸಗಿದ ಅಪಮಾನ. ಇದು ಈ ಮಣ್ಣಿನ ಮಕ್ಕಳಿಂದ ಆದ ದ್ರೋಹವಲ್ಲ, ಬದಲಿಗೆ ನಮ್ಮ ವರ್ಚಸ್ಸಿಗೆ ಮಸಿ ಬಳಿದು ವಿಕೃತಗೊಳಿಸಲು ಮತ್ತು ನಮ್ಮ ನೋವನ್ನು ತಮ್ಮ ದುಷ್ಟ ಉದ್ದೇಶಗಳಿಗೆ ಬಳಸಿಕೊಳ್ಳುವವರು ಎಸಗಿದ ಕ್ರೂರ ಕೃತ್ಯ. ನಾವು ಕಾಶ್ಮೀರಿಗಳು ಇದೀಗ ಅಪಾರ ದುಃಖಿತರಾಗಿದ್ದೇವೆ, ಕುಪಿತಗೊಂಡಿದ್ದೇವೆ.  

ಇದನ್ನು ಓದಿದ್ದೀರಾ?: ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ

ಇಂತಹ ಘಟನೆ ನಡೆದ ಪ್ರತಿ ಸಲವೂ, ಸಮಜಾಯಿಷಿ ನೀಡುವ ಭಾರವನ್ನು ನಮ್ಮ ಮೇಲೇ ಹೊರಿಸಲಾಗುತ್ತದೆ. ನಮ್ಮ ಪ್ರಾಣಪ್ರಿಯ ಅಸ್ಮಿತೆಯನ್ನು ಕಾಪಿಡಲು ಪ್ರಯತ್ನಿಸುತ್ತೇವೆ. ನಮ್ಮದಲ್ಲದ ಅಪಮಾನದ ಭಾರವನ್ನು ಹೊತ್ತು ನಡೆಯಬೇಕಾಗುತ್ತದೆ. ಮತ್ತೊಮ್ಮೆ ನಿಚ್ಚಳವಾಗಿ ಹೇಳುತ್ತೇನೆ: ಇಂದು ನಡೆದ ಕೃತ್ಯವನ್ನು ನಾವು ಸಮರ್ಥಿಸುವುದಿಲ್ಲ. ಈ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಹೇಡಿತನದ ಈ ಭಯಾನಕ ಹಿಂಸೆಯನ್ನು ನಾವು ಖಂಡಿಸುತ್ತೇವೆ. ಪ್ರವಾಸಿಗರತ್ತ ಗುಂಡು ಹಾರಿಸಿದ ಬಂದೂಕು ಹಿಡಿದ ಆ ಹಸ್ತಗಳು ಕಾಶ್ಮೀರಿ ಹಸ್ತಗಳಲ್ಲ, ಬದಲಿಗೆ ಈ ಬಂದೂಕಿನಿಂದ ಸಿಡಿದ ಗುಂಡುಗಳು ಕಾಶ್ಮೀರದ ತನುಮನವನ್ನು ಘಾಸಿಗೊಳಿಸಿವೆ.  

ಕಾಶ್ಮೀರದ ಜನರು ಈ ಕ್ಷಣದಲ್ಲಿ ಮೌನ ಹೊದ್ದು ಮಲಗಿಲ್ಲ. ದುಃಖತಪ್ತರಾಗಿದ್ದೇವೆ. ರೋಷತಪ್ತರಾಗಿದ್ದೇವೆ. ನಮ್ಮ ಮನೆಯೆಂದು ಕರೆಯುವ ಈ ತಾಣದಲ್ಲಿ ಇಂತಹ ಭಯಾನಕ ಕೃತ್ಯ ಜರುಗಿರುವುದಕ್ಕೆ ಲಜ್ಜಿತರಾಗಿದ್ದೇವೆ. ಈ ದುಷ್ಕೃತ್ಯದ ಮಸುಕು ಮಸೂರದ ಮೂಲಕ ನಮ್ಮನ್ನು ನೋಡಬೇಡಿ ಎಂದು ಜಗತ್ತನ್ನು ಪ್ರಾರ್ಥಿಸುತ್ತಿದ್ದೇವೆ, ಏಕೆಂದರೆ ನಮ್ಮ ಜನ ಇಂತಹವರಲ್ಲ, ಈ ಹಿಂಸೆ ಅವರ ಸತ್ಯವಲ್ಲ. ನಮ್ಮ ತಾಯಂದಿರು ಕೊಲೆಗಾರರನ್ನು ಹೆತ್ತು ಸಾಕುವುದಿಲ್ಲ. ನಮ್ಮ ತಂದೆಯರು ದ್ವೇಷವನ್ನು ಕಲಿಸುವುದಿಲ್ಲ. ನಮ್ಮ ಮಸೀದಿಗಳು ಹತ್ಯೆಯನ್ನು ಬೋಧಿಸುವುದಿಲ್ಲ. ಈ ಕಣಿವೆಯ ಧಮನಿಗಳಲ್ಲಿ ಹರಿಯುವ ನಂಬಿಕೆಯು, ನಾವು ಅರಿತು ಆಚರಿಸುವ ಇಸ್ಲಾಂ ಧರ್ಮವು ಕರುಣೆ, ಶಾಂತಿ ಹಾಗೂ ನ್ಯಾಯದ ಧರ್ಮ. ಅಮಾಯಕನ ಪ್ರಾಣ ತೆಗೆಯುವುದು ಇಡೀ ಮನುಕುಲದ ಉಸಿರು ತೆಗೆದಷ್ಟೇ ದುಷ್ಟ ಪಾತಕವೆಂದು ಪವಿತ್ರ ಖುರಾನ್ ಬೋಧಿಸುತ್ತದೆ.

ಪಹಲ್ಗಾಮ್ ವ್ಯಾಲಿ

ಸಂತ್ರಸ್ತರ ಕುಟುಂಬಗಳಿಗೆ ತಿಳಿಸಲು ಬಯಸುತ್ತೇನೆ: ನಿಮ್ಮ ನೋವು ನಿಮ್ಮದು ಮಾತ್ರವಲ್ಲ. ಅದು ನಮ್ಮದೂ ಹೌದು. ನಿಮ್ಮ ಕಣ್ಣೀರಿನೊಂದಿಗೆ ನಮ್ಮ ಕಣ್ಣೀರು ಬೆರೆತಿದೆ. ನಿಮ್ಮ ಮೇಲೆ ಎರಗಿದ ಈ ಭಯೋತ್ಪಾದಕತೆಯ ವಿಪತ್ತು ಇಲ್ಲವಾಗಲಿ ಎಂದು   ಬಯಸುತ್ತೇವೆ. ನೀವು ಕಾಶ್ಮೀರಕ್ಕೆ ನೆಮ್ಮದಿಯನ್ನು ಉಲ್ಲಾಸವನ್ನು ಅರಸಿ ಬಂದಿದ್ದಿರಿ. ನಿಮ್ಮನ್ನು ರಕ್ಷಿಸಲು ನಾವು ವಿಫಲರಾಗಿದ್ದೇವೆ. ಮತ್ತು ಅದಕ್ಕಾಗಿ, ನಾವು ಆಳವಾಗಿ, ಕ್ಷಮಿಸಲಾಗದಂತೆ ವಿಷಾದಿಸುತ್ತೇವೆ.

ಈ ಹತ್ಯೆಯ ಹಿಂಸೆಯ ಸೂತ್ರಧಾರಿಗಳೇ ಕಿವಿಗೊಟ್ಟು ಕೇಳಿಸಿಕೊಳ್ಳಿ— ನಿಮ್ಮ ಉದ್ದೇಶ ಏನೆಂದು ನಾನು ಅರಿಯೆ. ಆದರೆ ನೀವು ಮಾಡಿದ್ದೇನು ಎಂಬುದನ್ನು ಚೆನ್ನಾಗಿ ಬಲ್ಲೆ. ನೀವು ಕುಟುಂಬಗಳನ್ನು ಛಿದ್ರಗೊಳಿಸಿದ್ದೀರಿ. ಕರುಳ ಕುಡಿಗಳ ನೆರಳನ್ನು ಕಸಿದು ಅವುಗಳನ್ನು ತಬ್ಬಲಿಯಾಗಿಸಿದ್ದೀರಿ. ಈ ನೆಲದ ಎಲ್ಲೆಡೆಯ ಗುಂಡಿಗೆಗಳನ್ನು ಒಡೆದಿದ್ದೀರಿ. ತಲೆಮಾರುಗಳಿಂದ ಘನತೆ -ಸಭ್ಯತೆಯ ಕಾಪಾಡಿಕೊಂಡು ಬಂದ ಈ ಪರಿಶುದ್ಧ ಮನಸುಗಳ ಸೀಮೆಯನ್ನು ಮಲಿನಗೊಳಿಸಲು ಪ್ರಯತ್ನಿಸಿದ್ದೀರಿ. ಆದರೆ ಇದೋ ತಿಳಿದುಕೊಳ್ಳಿ: ನೀವು ಗೆಲ್ಲುವುದಿಲ್ಲ. ನಮ್ಮ ಕಥೆಯನ್ನು ಅಳಿಸಿ ಪುನಃ ಬರೆಯುವುದು ನಿಮ್ಮ ಕೈಲಿಲ್ಲ. ನಮ್ಮ ಕೊರಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.  

ಇದನ್ನು ಓದಿದ್ದೀರಾ?: ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್‌ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ

ಕಾಶ್ಮೀರ ನಿಮ್ಮ ಆಟದ ಮೈದಾನವಲ್ಲ. ಅದು ನಿಮ್ಮ ಯುದ್ಧಭೂಮಿಯೂ ಅಲ್ಲ. ಮತ್ತು ನಿಶ್ಚಿತವಾಗಿಯೂ ಅದು ನಿಮ್ಮ ಕೈಯಲ್ಲಿನ ಹತಾರು ಅಲ್ಲವೇ ಅಲ್ಲ. ನಾವು ಕಾಶ್ಮೀರಿಗಳು ಅತಿಥಿ ಸತ್ಕಾರದಲ್ಲಿ ನಿಜ ನಂಬಿಕೆ ಇಟ್ಟವರು—ಅತಿಥಿಗಳನ್ನು ದೇವರ ಅನುಗ್ರಹವೆಂದು ಗೌರವಿಸುವುದು ನಮ್ಮ ಆಳ ಸಾಂಸ್ಕೃತಿಕ ಸಂಪ್ರದಾಯ. ಹೊರಗಿನವರನ್ನು ಮನಸಾರೆ ಬರಮಾಡಿಕೊಳ್ಳುತ್ತೇವೆ, ಅಷ್ಟೇ ಅಲ್ಲ, ಅವರನ್ನು ಅಪ್ಪಿ ಆಲಿಂಗಿಸಿಕೊಳ್ಳುತ್ತೇವೆ. ನಮ್ಮ ಉಣಿಸು ತಿನಿಸುಗಳು, ನಮ್ಮ ಕಥೆಕಾವ್ಯಗಳು, ನಮ್ಮ ಮನೆಗಳು, ಅತ್ಯಂತ ಮುಖ್ಯವಾಗಿ ನಮ್ಮ ಗೌರವಾದರವನ್ನು ಅವರಿಗೆ ಅರ್ಪಿಸುತ್ತೇವೆ. ಇದೋ ಈ ಕಾರಣಕ್ಕಾಗಿಯೇ ಈ ಭಯಾನಕ ದಾಳಿ ನಮ್ಮನ್ನು ಇನ್ನಿಲ್ಲದಂತೆ ನೋಯಿಸಿದೆ. ಇದು ಬರಿಯ ಅಪರಾಧವಲ್ಲ, ನಾವು ನಂಬುವ ಪ್ರತಿಯೊಂದು ನೀತಿ ನಿಜಾಯಿತಿಯನ್ನು ಅಪವಿತ್ರಗೊಳಿಸುವ ಕೃತ್ಯ.
ಗಾಯಗೊಂಡವರೇ- ನಿಮ್ಮ ಗಾಯಗಳು ತ್ವರಿತವಾಗಿ ತುಂಬಲಿ, ನೀವು ಸಂಪೂರ್ಣ ಗುಣಮುಖರಾಗಲಿ ಎಂದು  ಪ್ರಾರ್ಥಿಸುತ್ತೇವೆ. ಒಡಲಲ್ಲಿ ಮಾತ್ರವಲ್ಲ, ಆತ್ಮದಲ್ಲೂ ನೀವು ಚೇತರಿಸಿಕೊಳ್ಳಿರಿ… ಮತ್ತೆ ಒಂದಲ್ಲ ಒಂದು ದಿನ ನೀವು ಈ ಪರ್ವತ ಕಣಿವೆಗಳಿಗೆ ಹಿಂತಿರುಗಿರಿ, ಬೇರೆಯದೇ ಆದ ಹೃದಯವಂತ ಕಾಶ್ಮೀರವನ್ನು ಕಾಣಿರಿ– ಆ ಕಾಶ್ಮೀರ ನಮ್ಮ ತನುಮನಗಳು ತಿಳಿದಿರುವ ಕಾಶ್ಮೀರ, ಎಲ್ಲರನ್ನೂ ಪ್ರೀತಿಸುವ ಕಾಶ್ಮೀರ, ಮನತೆರೆದು ಹಾಡುವ, ತೆರೆದ ಬಾಹುಗಳಿಂದ ಕರೆದು ಆಶ್ರಯ ನೀಡುವ ಕಾಶ್ಮೀರ.  

ಇನ್ನುಳಿದ ಪ್ರಪಂಚವೇ- ಈ ದುರಂತದ ಕುಂಚದಿಂದ ನಮ್ಮ ಚಿತ್ರವನ್ನು ಬಿಡಿಸದಿರಿ, ನಮ್ಮ ಮನಸಿನ ಆಳದ ಪರಿಶುದ್ಧ ಪ್ರೀತಿಯ ಒರತೆಯನ್ನು ನೋಡಿರಿ, ನಮ್ಮ ಎದೆಯ ಮಧುರ ಸ್ವರಗಳನ್ನು ಆಲಿಸಿರಿ. ಈ ಹಿಂಸೆಯ ಕೃತ್ಯ ಕುರಿತು ಕಲಬೆರಕೆ ಇಲ್ಲದ ನಮ್ಮ ಖಂಡನೆಯನ್ನು ಅರ್ಥಮಾಡಿಕೊಳ್ಳಿ. ನಮ್ಮ ನೋವನ್ನು ಅರಿಯಿರಿ. ಕಾಶ್ಮೀರದ ಜನರು ನಾವು ಈ ಅಪರಾಧದಲ್ಲಿ ಭಾಗಿಗಳಲ್ಲ– ಬದಲಿಗೆ ನಾವು ಕೂಡ ಈ ಹೇಯ ಕೃತ್ಯದ ಬಲಿಪಶುಗಳು.  

ನಮ್ಮ ಈ ನೆಲ ಇನ್ನಿಲ್ಲದಂತೆ ರಕ್ತಸಿಂಚಿತವಾಗಿದೆ. ಲೆಕ್ಕವಿಲ್ಲದಷ್ಟು ತಾಯಂದಿರ ಕಣ್ಣೀರಿನಿಂದ ತೋಯ್ದು ಹೋಗಿದೆ. ಸಾವಿರ ಸಾವಿರ ಕರುಳ ಕಂದಮ್ಮಗಳು ನೆಲದಾಳದಲ್ಲಿ ಮಡಿದು ಮಲಗಿವೆ. ಶಾಂತಿಯಲ್ಲದೆ ಇನ್ನೇನನ್ನೂ ನಾವು ಬಯಸುವುದಿಲ್ಲ. ಇದು ರಾಜಕೀಯ ಘೋಷಣೆಯಲ್ಲ, ಮಾನವೀಯ ಹಂಬಲದ ಪ್ರಾರ್ಥನೆ. ನಾವು ಬದುಕಿ ಬಾಳಲು, ಪ್ರೀತಿಸಲು, ಮತ್ತೆ ಚೇತರಿಸಿಕೊಂಡು ತಲೆಯೆತ್ತಲು ಒಂದು ಅವಕಾಶ ಬೇಕು. ಒಂದು ಅವಕಾಶದ ಈ ಕೋರಿಕೆ ಅಸಾಧುವೇ ನೀವೇ ಹೇಳಿ?

ಇದನ್ನು ಓದಿದ್ದೀರಾ?: ಮತ್ತೆ ಅಬ್ಬರಿಸಿದ ಭಯೋತ್ಪಾದನೆ- ಮೋಶಾರತ್ತ ದಿಟ್ಟಿ ನೆಟ್ಟ ದೇಶ 

ಇಂದು, ಪಹಲ್ಗಾಮಿನ ಗಿರಿಶಿಖರಗಳ ಹಿಂದೆ ಸೂರ್ಯನು ಅಸ್ತಮಿಸುವಾಗ, ಅವನು ಶೋಕದಲ್ಲಿ ಮುಳುಗಿರುವ ಕಣಿವೆಯ ಮೇಲೆ ಅಸ್ತಮಿಸುತ್ತಾನೆ. ನೊಂದರೂ ಕುಸಿಯದೆ ಎದ್ದು ನಿಲ್ಲುವ, ದುಃಖಿಸಿದರೂ ಉಸಿರು ಅಡಗದ ಜನತೆಯ ಮೇಲೂ ಅಸ್ತಮಿಸುತ್ತಾನೆ.  
ಆದ್ದರಿಂದ, ಮತ್ತೆ ಹೇಳುತ್ತೇನೆ: ಈ ಹಿಂಸೆಯ ಹಿಂದೆ ನಾವಿಲ್ಲ, ಇದಕ್ಕೆ ನಮ್ಮ ಒಪ್ಪಿಗೆಯಿಲ್ಲ. ಈ ಹಿಂದೆಯೂ ಇರಲಿಲ್ಲ. ಮುಂದೆಂದೂ ಇರುವುದಿಲ್ಲ.  

ಇಂತಿ
ದುಗುಡದಿಂದ ಭಾರವಾದ ಹೃದಯದೊಂದಿಗೆ, ಮತ್ತು ಸತ್ಯವನ್ನು ನುಡಿಯುವ ದೃಢನಿಶ್ಚಯದ ಒಬ್ಬ ಕಾಶ್ಮೀರಿ.

ಈದಿನ 1
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ರಸ್ತೆ ಬದಿ ಕೆಲಸ ಮಾಡುತ್ತಿದ್ದ 6 ಮಂದಿ ಪೌರ ಕಾರ್ಮಿಕರ ದುರ್ಮರಣ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಯ ಒಂದು ಭಾಗವನ್ನು ಸ್ವಚ್ಛಗೊಳಿಸುತ್ತಿದ್ದ...

ಪಾಕಿಸ್ತಾನದ ಪ್ರಜೆಗಳ 14 ರೀತಿಯ ವೀಸಾಗಳು ರದ್ದು: ಯಾರು, ಯಾವಾಗ ದೇಶದಿಂದ ಹೊರಹೋಗಬೇಕು?

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ...

ಗದಗ | ಮನರೇಗಾ ಯೋಜನೆಯಡಿ ಸ್ವಾವಲಂಬಿ ಬದುಕು; ಮುಂಡವಾಡದ ವೃದ್ಧ ದಂಪತಿಯ ಶ್ರಮಗಾಥೆ

ಇಳಿ ವಯಸ್ಸಿನ ವೃದ್ಧ ದಂಪತಿಗೆ ಮನರೇಗಾ ಯೋಜನೆಯು ಬದುಕಲು ಆಧಾರವಾಗಿದೆ. ಸಾಮೂಹಿಕ...

‘ಆದಿವಾಸಿ ಜಾತಿಯಲ್ಲ’ ಎಂದ ಜಾರ್ಖಂಡ್ ಹೈಕೋರ್ಟ್; ಜಾತಿ ನಿಂದನೆ ಮಾಡಿದ ಅಧಿಕಾರಿಯ ವಿರುದ್ಧದ ಎಫ್‌ಐಆರ್ ರದ್ದು

ಮಹಿಳೆಯನ್ನು 'ಹುಚ್ಚು ಆದಿವಾಸಿ' ಎಂದು ಕರೆದ ಆರೋಪವನ್ನು ಹೊತ್ತಿರುವ ಸರ್ಕಾರಿ ಅಧಿಕಾರಿಯ...