ಮತಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸುವಂತೆ ನಕಲಿ ಅರ್ಜಿ ಸಲ್ಲಿಸಿದವರು ಯಾರು, ಇಂತಹ ಕೃತ್ಯಗಳನ್ನು ಮಾಡುತ್ತಿರುವವರು ಯಾರು ಎಂಬುದು ಚುನಾವಣಾ ಆಯುಕ್ತರಿಗೆ ತಿಳಿದಿದೆ. ಆದರೆ, ಅವರು ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ನೀಡುತ್ತಿಲ್ಲ.... ಏಕೆ?
ದೇಶಾದ್ಯಂತ ಮತ ಕಳ್ಳತನದ ಆರೋಪ ಭಾರೀ ಸದ್ದು ಮಾಡುತ್ತಿದೆ. ಇಂದು (ಸೆ.18) ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿ, ‘ಮತ ಕಳ್ಳತನ’ದ ಬಗ್ಗೆ ದಾಖಲೆ ಸಮೇತ ವಿವರಿಸಿದ್ದಾರೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ‘ಪ್ರಜಾಪ್ರಭುತ್ವ ಕೊಲೆಗಾರರ ರಕ್ಷಕ’ ಎಂದು ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರವನ್ನು ಉದಾಹರಣೆಯಾಗಿ ಮುಂದಿಟ್ಟು, ದೇಶಾದ್ಯಂತ ನಡೆಯುತ್ತಿರುವ ‘ವೋಟ್ ಚೋರಿ’ ಕುರಿತ ಹಲವಾರು ಸತ್ಯಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪಗಳಿಗೆ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದೆ. ರಾಹುಲ್ ಆರೋಪಗಳನ್ನು ಅಲ್ಲಗಳೆದಿರುವ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ”ಆರೋಪಗಳು ಆಧಾರರಹಿತ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಯಾವುದೇ ಮತಗಳನ್ನು ಅಳಿಸಲು ಸಾಧ್ಯವಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಅಸಲಿಗೆ, ಚುನಾವಣಾ ಆಯುಕ್ತರ ಈ ಹೇಳಿಕೆಗೂ, ರಾಹುಲ್ ಗಾಂಧಿ ಅವರ ಆರೋಪಕ್ಕೂ ಸಂಬಂಧವೇ ಇಲ್ಲ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಮತದಾರರ ಹೆಸರನ್ನು ಅಳಿಸಿಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ. ಬದಲಾಗಿ, ತಮ್ಮ ಗುರಿಯಾಗಿದ್ದ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಳಿಸಿಹಾಕುವಂತೆ ಬೇರೊಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ರಾಹುಲ್ ಗಾಂಧಿ ಆರೋಪವಾಗಿತ್ತು.
ಇಲ್ಲಿ, ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪ ಸ್ಪಷ್ಟವಾಗಿದೆ. ”ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತಗಳನ್ನು ಅಳಿಸಿ ಹಾಕಲು ಯತ್ನಗಳು ನಡೆದಿವೆ. ಮತದಾರ ಪಟ್ಟಿಯಲ್ಲಿರುವ ಯಾರದ್ದೋ ಹೆಸರನ್ನು ಅಳಿಸಿ ಹಾಕುವಂತೆ ಇನ್ಯಾರದ್ದೋ ಹೆಸರಿನಲ್ಲಿ ಮತ್ಯಾರೋ ಅರ್ಜಿ ಸಲ್ಲಿಸಿದ್ದಾರೆ. ಇದೇ ರೀತಿ ಸಾವಿರಾರು ಮತದಾರರ ಹೆಸರುಗಳನ್ನು ಅಳಿಸಿ ಹಾಕುವ ಹುನ್ನಾರ ನಡೆದಿದೆ” ಎಂಬುದು ಅವರ ಆರೋಪ.
ಅಂದರೆ, ಮೊದಲನೇ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದುಹಾಕುವಂತೆ ಎರಡನೇ ವ್ಯಕ್ತಿಯ ಹೆಸರಿನಲ್ಲಿ ಮೂರನೇ ವ್ಯಕ್ತಿ ಅರ್ಜಿ ಸಲ್ಲಿಸುತ್ತಾರೆ. ಈ ಮೂರನೇ ವ್ಯಕ್ತಿ ಅರ್ಜಿ ಸಲ್ಲಿಸಿರುವುದು ಯಾರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿರುತ್ತದೆಯೋ ಆ 2ನೇ ವ್ಯಕ್ತಿಗಾಗಲೀ ಅಥವಾ ಮತದಾರ ಪಟ್ಟಿಯಿಂದ ಹೆಸರು ಕಳೆದುಕೊಳ್ಳುವ 1ನೇ ವ್ಯಕ್ತಿಗಾಗಲೀ ಗೊತ್ತೇ ಇರುವುದಿಲ್ಲ.
ಇಂತಹದ್ದೇ ಕೃತ್ಯ 2023ರಲ್ಲಿ, ಆಳಂದದಲ್ಲಿ ನಡೆದಿದೆ. ಅದೂ, ಆಳಂದದ ಒಂದು ಬೂತ್‌ನ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಸಹೋದರನ ಹೆಸರನ್ನೇ ಮತಪಟ್ಟಿಯಿಂದ ತೆಗೆದುಹಾಕಲು ಅರ್ಜಿ ಸಲ್ಲಿಸಿದ್ದರು. ಆ ಕಾರಣಕ್ಕಾಗಿಯೇ ಮತ ಕಳ್ಳತನ ಪ್ರಕರಣವು ಆಗಲೇ ಬೆಳಕಿಗೆ ಬಂದಿತ್ತು.
ಇದನ್ನೇ ರಾಹುಲ್ ಗಾಂಧಿ ಸ್ಪಷ್ಟವಾಗಿ ವಿವರಿಸಿದ್ದಾರೆ. ”ಆನ್‌ಲೈನ್ ಮೂಲಕ ಫಾರ್ಮ್ 7 ಅರ್ಜಿಯನ್ನು ಪಡೆದುಕೊಂಡು, ಯಾರದ್ದೋ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ, ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆದಿವೆ” ಎಂದು ರಾಹುಲ್ ವಿವರಿಸಿದ್ದಾರೆ.
ಈ ಸ್ಪಷ್ಟ ಆರೋಪಕ್ಕೆ ಉತ್ತರಿಸದ ಚುನಾವಣಾ ಆಯುಕ್ತರು ಆರೋಪವನ್ನು ತಿರುಚಿ, ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬುದಾಗಿ ಬಿಂಬಿಸುವ ವಿಫಲ ಯತ್ನ ಮಾಡಿದ್ದಾರೆ.
ಇನ್ನು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನಗಳು ನಡೆದಿವೆ ಎಂಬುದನ್ನು ಚುನಾವಣಾ ಆಯುಕ್ತರು ಒಪ್ಪಿಕೊಂಡಿದ್ದಾರೆ. ಆದರೂ, ಈ ಬಗ್ಗೆ ಚುನಾವಣಾ ಆಯೋಗವೇ ಎಫ್‌ಐಆರ್ ದಾಖಲಿಸಿದೆ ಎಂದು ಮತ್ತೊಂದು ಸುಳ್ಳನ್ನೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಆದರೆ, ಚುನಾವಣಾ ಆಯೋಗವೇ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲಿಲ್ಲ ಎಂಬುದು ವಾಸ್ತವ. 2023ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಆಳಂದದ ಹಾಲಿ ಶಾಸಕ, ಅಂದಿನ ಅಭ್ಯರ್ಥಿ ಬಿ.ಆರ್ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ನೀಡಿದ ದೂರಿನ ಆಧಾರದ ಮೇಲೆಯೇ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೇ, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂಬುದು ಕಟು ಸತ್ಯ.
ಆಳಂದದಲ್ಲಿ ಮತ ಕಳ್ಳತನವು ಬೆಳಕಿಗೆ ಬಂದದ್ದು, 2023ರ ಫೆಬ್ರವರಿಯಲ್ಲಿ. ಅಂದರೆ, ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ. ”ಕ್ಷೇತ್ರದ ಮತದಾರರ ಅರಿವಿಗೆ ಬಾರದೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ” ಎಂಬುದು ಬಿಎಲ್‌ಒ ಒಬ್ಬರ ಸಹೋದರ ಮತವನ್ನು ಅಳಿಸುವ ಅರ್ಜಿ ಬಂದಾಗ ಗೊತ್ತಾಯಿತು.
ಆ ಬಿಎಲ್‌ಒ ಸಹೋದರ ಬಿ.ಆರ್ ಪಾಟೀಲ್ ಅವರ ನಿಕಟವರ್ತಿಯಾಗಿದ್ದ ಕಾರಣ, ಮತ ಕಳ್ಳತನದ ವಿಚಾರ ಬಿ.ಆರ್ ಪಾಟೀಲ್ ಅವರಿಗೆ ಗೊತ್ತಾಯಿತು. ಬಳಿಕ, ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಅವರ ದೂರು ಆಧರಿಸಿ, ಪರಿಶೀಲನೆ ನಡೆಸುವಂತೆ ಕರ್ನಾಟಕ ಚುನಾವಣಾ ಆಯೋಗವು ಸ್ಥಳೀಯ ಚುನಾವಣಾ ಅಧಿಕಾರಿಗೆ (ಜಿಲ್ಲಾಧಿಕಾರಿ) ಸೂಚಿಸಿತು. ಸ್ಥಳೀಯ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬರೋಬ್ಬರಿ 5,994 ಮತಗಳನ್ನು ಅಳಿಸಿಹಾಕಲು ನಕಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಬೆಳಕಿಗೆ ಬಂದಿತು. ಬಳಿಕ, ಕಲಬುರಗಿ ಸಹಾಯಕ ಆಯುಕ್ತೆ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ಅನ್ನೂ ದಾಖಲಿಸಿದರು.
ಅಂತಿಮವಾಗಿ, ನಕಲಿ ಅರ್ಜಿಗಳಿಂದ ಮತದಾನದ ಹಕ್ಕು ಕಳೆದುಕೊಂಡಿದ್ದ 5,994 ಮತದಾರರ ಹೆಸರುಗಳನ್ನು ಮತಪಟ್ಟಿಯಲ್ಲಿ ಮರಳಿ ಸೇರಿಸಲಾಯಿತು. ಅವರೆಲ್ಲರೂ, 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿರಬಹುದು.
ಈ 5,994 ಮತದಾರರಲ್ಲಿ ಬಹುತೇಕರು ಕಾಂಗ್ರೆಸ್‌ಗೆ ಮತ ಚಲಾಯಿಸುವ ದಲಿತರು, ಬಡವರು, ಅಲ್ಪಸಂಖ್ಯಾತರು ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ. ಒಂದು ವೇಳೆ, ಈ ಸುಮಾರು 6 ಸಾವಿರ ಮಂದಿ ಮತಪಟ್ಟಿಯಿಂದ ಹೊರಗುಳಿದಿದ್ದರೆ, ಬಿ.ಆರ್ ಪಾಟೀಲ್ ಅವರು ಮತ್ತೆ ಸೋಲುತ್ತಿದ್ದ ಸಾಧ್ಯತೆಗಳೂ ಇದ್ದಿರಬಹುದು.
ಈ ಲೇಖನ ಓದಿದ್ದೀರಾ?: ‘ಆಳಂದ’ ಕ್ಷೇತ್ರದಲ್ಲಿ ಭಾರೀ ಮತ ಕಳ್ಳತನ; ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!
ಆದಾಗ್ಯೂ, ಈ ಮತ ಕಳ್ಳತನ ಪ್ರಕರಣವನ್ನು ಕರ್ನಾಟಕ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ಅರ್ಜಿ ಸಲ್ಲಿಸಿದ್ದ ಆರೋಪಿಗಳನ್ನು ಪತ್ತೆ ಮಾಡಲು ಅಗತ್ಯವಿರುವ ‘ಅರ್ಜಿ ಸಲ್ಲಿಸಿದವರ ಐಪಿ ಅಡ್ರೆಸ್’ಗಳನ್ನು ನೀಡುವಂತೆ ಕೇಳಿ 18 ತಿಂಗಳಲ್ಲಿ 18 ಬಾರಿ ಚುನಾವಣಾ ಆಯೋಗಕ್ಕೆ ಸಿಐಡಿ ಪತ್ರ ಬರೆದಿದೆ, ಪ್ರಶ್ನಿಸಿದೆ. ಆದರೆ, ಚುನಾವಣಾ ಆಯೋಗವು ಈವರೆಗೆ ಸಿಐಡಿ ಪತ್ರಕ್ಕೆ ಸ್ಪಂದಿಸಿಲ್ಲ. ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಸಿಐಡಿಗೆ ಒದಗಿಸಿಲ್ಲ.
ಈ ಕಾರಣಕ್ಕಾಗಿಯೇ, ಮತ ಕಳ್ಳತನದ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಯತ್ನಿಸಿದ ಕೊಲೆಗಾರರನ್ನು ಚುನಾವಣಾ ಆಯುಕ್ತರು ರಕ್ಷಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿರುವುದು.
”ಮತಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸುವಂತೆ ನಕಲಿ ಅರ್ಜಿ ಸಲ್ಲಿಸಿದವರು ಯಾರು? ಇಂತಹ ಕೃತ್ಯಗಳನ್ನು ಮಾಡುತ್ತಿರುವವರು ಯಾರು ಎಂಬುದು ಚುನಾವಣಾ ಆಯುಕ್ತರಿಗೆ ತಿಳಿದಿದೆ. ಆದರೆ, ಅವರು ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ನೀಡದೆ, ಆರೋಪಿಗಳನ್ನು ಮತ್ತು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.
ಈ ಆರೋಪಕ್ಕೆ ಜ್ಞಾನೇಂದ್ರ ಕುಮಾರ್ ಬಳಿ ಉತ್ತರವಿಲ್ಲ. ಅವರು ಆಳಂದದಲ್ಲಿ ಅರ್ಜಿ ಸಲ್ಲಿಸಿದವರ ಮಾಹಿತಿಯನ್ನು ಸಿಐಡಿಗೆ ಒದಗಿಸಲು ಸಿದ್ದವಿಲ್ಲ.