ಲೋಕಸಭಾ ವಿಪಕ್ಷ ನಾಯಕರೊಬ್ಬರು ಸಂಸತ್ ಚುನಾವಣೆಯಲ್ಲಿ ‘ಮತ ಕಳವು’ (ವೋಟ್ ಚೋರಿ) ನಡೆದಿದೆ ಎಂದು ಆರೋಪಿಸಿ, ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು. ಅವರು ವಿವರಿಸಿದ ಹಲವಾರು ವಿಚಾರಗಳು ಭಾರತ ನಾಗರಿಕರಿಗೆ ನಿಸ್ಸಂದೇಶವಾಗಿ ತಿಳಿಯಬಹುದಿತ್ತು. ಯಾವಾಗ? ಅವರು ಹೇಳಿದ್ದನ್ನು ಮಾಧ್ಯಮಗಳು ಯಾವುದೇ ಫಿಲ್ಟರ್, ತಿದ್ದುಪಡಿ ಅಥವಾ ತಿರುಚುವಿಕೆ ಇಲ್ಲದೆ, ಪ್ರಸಾರ ಮಾಡಿದ್ದರೆ, ಅದು ಸಾಧ್ಯವಾಗುತ್ತಿತ್ತು. ಆದರೆ, ವಾಸ್ತವದಲ್ಲಿ ಹಾಗೆ ಆಗಲಿಲ್ಲ!
ಆಗಸ್ಟ್ 7ರಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗದಿಂದ (ECI) ಪಡೆದ ದತ್ತಾಂಶ ಮತ್ತು ಕಾಂಗ್ರೆಸ್ ನಡೆಸಿದ ಅಧ್ಯಯನವನ್ನು ಹೋಲಿಕೆ ಮಾಡಿ, ‘ಮತ ಕಳವು’ ಬಗ್ಗೆ ವಿವರವಾಗಿ ಮಾಹಿತಿ ಮಂಡಿಸಿದರು. ಈ ದತ್ತಾಂಶವು ಮತದಾರರ ನೋಂದಣಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬುದನ್ನು ಬಯಲು ಮಾಡಿದೆ ಎಂದು ರಾಹುಲ್ ಹೇಳಿದರು. ಇದನ್ನು ‘ಮತ ಕಳವು’ (ವೋಟ್ ಚೋರಿ) ಎಂದು ಕರೆದರು.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ಭಾಗದಲ್ಲಿ ಕಾಂಗ್ರೆಸ್ ನಡೆಸಿದ ಸಂಶೋಧನೆಯು, ಒಂದೇ ಹೆಸರಿನ ಹಲವಾರು ಮತದಾರರು ಇರುವುದು, ತಪ್ಪಾದ ವಿಳಾಸಗಳು ಅಥವಾ ಒಂದು ಚಿಕ್ಕ ರೂಮ್‌ನ ವಿಳಾಸದಲ್ಲಿ 68 ಮತದಾರರು ಇರುವುದು ಸೇರಿದಂತೆ ಹಲವಾರು ವಿವರಗಳನ್ನು ಬಯಲು ಮಾಡಿದೆ.
ಈ ಸಂಗತಿಗಳು ಹೊರಬಂದ ಬಳಿಕ, ವಿರೋಧ ಪಕ್ಷಗಳು ಭಾರೀ ಪ್ರತಿಭಟನೆಗಳನ್ನು ನಡೆಸಿವೆ. ಕಾಂಗ್ರೆಸ್ ನಾಯಕರು ಮತ್ತು ಮುಖಂಡರು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿ, ಆಯೋಗವು ಆಡಳಿತಾರೂಢ ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿಗಾಗಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಆರೋಪಕ್ಕೆ ಮಾಧ್ಯಮಗಳ ಪ್ರತಿಕ್ರಿಯೆ
ನಿರಂತರ ಚುನಾವಣಾ ಸದ್ದು-ಗದ್ದಲದಲ್ಲಿರುವ ಭಾರತದಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬ ಆತಂಕ ಹೆಚ್ಚುತ್ತಿದೆ. ಬಿಹಾರದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR), ಚುನಾವಣಾ ಬಾಂಡ್ ಅಕ್ರಮ, ಇವಿಎಂಗಳ ಪಾರದರ್ಶಕತೆ—ವಿಶ್ವಾಸಾರ್ಹತೆ, ವಿವಿಧ ಕ್ಷೇತ್ರಗಳಲ್ಲಿ ಕಾಣೆಯಾದ ಅಥವಾ ಅಳಿಸಲ್ಪಟ್ಟ ಮತದಾರರ ವರದಿಗಳು, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ರಾಜಕೀಯ ಪಕ್ಷಪಾತದ ಶಂಕೆ ಹಾಗೂ ಆಡಳಿತಾರೂಢ ಬಿಜೆಪಿಯ ‘ಒಂದು ರಾಷ್ಟ್ರ- ಒಂದು ಚುನಾವಣೆ’ ಕರೆ – ಇವೆಲ್ಲವೂ ಚುನಾವಣಾ ವ್ಯವಸ್ಥೆ ಕುರಿತು ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿವೆ.
ಈ ಸನ್ನಿವೇಶದಲ್ಲಿ, ರಾಹುಲ್ ಗಾಂಧಿ ಅವರು ‘ಮತ ಕಳವು’ ಬಗ್ಗೆ ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆಯೇ? ಪರಿಶೀಲಿಸಲಾಗಿದೆಯೇ? ಮಾಧ್ಯಮಗಳು ರಾಹುಲ್ ಪ್ರತಿಕಾಗೋಷ್ಠಿಯನ್ನು ಹೇಗೆ ವರದಿ ಮಾಡಿದವು? ವಿರೋಧ ಪಕ್ಷದ ನಾಯಕ ಎತ್ತಿದ ವಿಚಾರಗಳಿಗೆ ಮಾಧ್ಯಮಗಳು ಎಷ್ಟು ವಿಶ್ವಾಸಾರ್ಹತೆ ನೀಡಿದವು? ಹಾಗೆ ನೋಡದರೆ, ಸರ್ಕಾರದಿಂದ ಸೂಚನೆಗಳನ್ನು ಪಡೆದು, ಗಂಭೀರ ಸಂವಾದಗಳನ್ನು ಮಾಧ್ಯಮಗಳು ದುರ್ಬಲಗೊಳಿಸಿದವೇ? ಎಂಬ ಅನುಮಾನ ಹುಟ್ಟಿದೆ.
ಸಹಜವಾಗಿ, ಪತ್ರಿಕಾಗೋಷ್ಠಿಯನ್ನು ಕಾಂಗ್ರೆಸ್ ಮತ್ತು ಇತರ ಯೂಟ್ಯೂಬ್ ಚಾನಲ್‌ಗಳಲ್ಲಿ ನೇರಪ್ರಸಾರ ಮಾಡಲಾಯಿತು. ಬಹು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಪ್ರಸಾರವಾಯಿತು. ಇದು, ಸುದ್ದಿ ತಡೆಯುವಿಕೆ ಅಥವಾ ಸೀಮಿತ ವರದಿಯ ಸಾಧ್ಯತೆಯನ್ನು ತಪ್ಪಿಸಿತು. ಆದರೆ, ಸಾಮಾಜಿಕ ಮಾಧ್ಯಮದಲ್ಲಿನ ಪ್ರಸಾರವು ಮುಖ್ಯವಾಹಿನಿ ಮಾಧ್ಯಮಗಳ ಸ್ಪಷ್ಟ ಪಕ್ಷಪಾತಿ ಧೋರಣೆಯನ್ನು ಕಡಿಮೆ ಮಾಡುತ್ತದೆಯೇ?
ಸುದ್ದಿಚಕ್ರದಲ್ಲಿ ಮೊದಲ ಕೆಲವು ಗಂಟೆಗಳಲ್ಲಿ, ಮಾಧ್ಯಮಗಳು ರಾಹುಲ್ ಆರೋಪಗಳ ಬಗ್ಗೆ ಸುದ್ದಿ ಪ್ರಸಾರ ಮಾಡಿದವು. ಆದರೆ, ಕೆಲವೇ ಸಮಯದಲ್ಲಿ, ಸಂಪೂರ್ಣ ಸುದ್ದಿಗಳಿಗೆ ತಡೆಬಿದ್ದಿತು. ಕೆಲವು ಮಾಧ್ಯಮ ಸಂಸ್ಥೆಗಳು ರಾಹುಲ್ ಆರೋಪಗಳನ್ನು ಗಮನಾರ್ಹವಾಗಿ ಕಡೆಗಣಿಸಿ, ಸಾಧಾರಣ ಸುದ್ದಿಗಳನ್ನು ಮಾಡಿದವು. ಇತರ ಮಾಧ್ಯಮಗಳು ರಾಹುಲ್ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದವು.
ತನ್ನ ಸಾಮಾನ್ಯ ಗದರಿಕೆಯ ಶೈಲಿಯಲ್ಲಿ ಕಿರುಚಾಡುವ, ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ತಮ್ಮ ‘ಟ್ರೂತ್‌ಚೋರಿ’ ಕಾರ್ಯಕ್ರಮದಲ್ಲಿ, “ರಾಹುಲ್ ಗಾಂಧಿ ದೇಶದಲ್ಲಿ ‘ಅಶಾಂತಿ’ ಹರಡುತ್ತಿದ್ದಾರೆ. ಭಾರತದ ನಾಗರಿಕರಿಗೆ ಧಕ್ಕೆ ತರುವ ಅಪಾಯಕಾರಿ ಮಾರ್ಗದಲ್ಲಿ ಸಾಗುತ್ತಿದ್ದಾರೆ” ಎಂದು ಆರೋಪಿಸಿದರು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜಕೀಯ ಪಕ್ಷದ ವಕ್ತಾರರು, ಕಾಣೆಯಾದ ಮತಗಳ ಬಗ್ಗೆ ಆರೋಪ ಎತ್ತಿದ್ದರೂ, ರಾಹುಲ್ ಗಾಂಧಿ ಅವರನ್ನು ಬೆಂಬಲಿಸದಂತೆ ನೋಡಿಕೊಳ್ಳಲಾಯಿತು.
ಪ್ರಮುಖ ಹಿಂದಿ ಭಾಷೆಯ ಪತ್ರಿಕೆಗಳಲ್ಲಿ ಒಂದಾದ, ಭಾರತದಲ್ಲಿ ಅತಿ ಹೆಚ್ಚು ಪ್ರಸಾರವಾಗುವ ‘ದೈನಿಕ್ ಜಾಗರಣ್’ ಪತ್ರಿಕೆಯು ರಾಹುಲ್ ಸುದ್ದಿಗೋಷ್ಠಿಯನ್ನು ನವದೆಹಲಿ ಆವೃತ್ತಿಯಲ್ಲಿ ವರದಿ ಮಾಡುವ ಬದಲು, ‘ಲಕ್ನೋ ಆವೃತ್ತಿ’ಯಲ್ಲಿ ಎರಡನೇ ಪ್ರಮುಖ ಸುದ್ದಿಯಾಗಿ ಪ್ರಕಟಿಸಿತು. ಅಮರ್ ಉಜಾಲಾ ಇದನ್ನು ಪ್ರಕಟಿಸಲೇ ಇಲ್ಲ. ಆದಾಗ್ಯೂ, ‘ದೈನಿಕ್ ಭಾಸ್ಕರ್’ ಪತ್ರಿಕೆಯು ಇದನ್ನು ಮುಖ್ಯ ಸುದ್ದಿಯಾಗಿ ವರದಿ ಮಾಡಿತು.
ದೇಶದ ವಿವಿಧ ಪ್ರಮುಖ ಇಂಗ್ಲಿಷ್ ಭಾಷೆಯ ಪತ್ರಿಕೆಗಳ ಮುಖಪುಟಗಳಲ್ಲಿ ಪತ್ರಿಕಾಗೋಷ್ಠಿಯ ವರದಿಯು ಕಾಣಿಸಿಕೊಂಡರೂ, ರಾಹುಲ್ ವಿವರಿಸಿದ ವಿಷಯಗಳ ಗಂಭೀರತೆಯನ್ನು ಕಡಿಮೆಗೊಳಿಸಿದ್ದವು.
ರಾಹುಲ್ ಸುದ್ದಿಗೋಷ್ಠಿಯನ್ನು ದಿ ಹಿಂದು ಮುಖ್ಯ ಸುದ್ದಿಯಾಗಿ ಪ್ರಕಟಿಸಿದರೆ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎರಡನೇ ಮುಖ್ಯ ಸುದ್ದಿಯಾಗಿ ತೆಗೆದುಕೊಂಡಿತು. ಟೈಮ್ಸ್ ಆಫ್ ಇಂಡಿಯಾ ಮತ್ತು ಹಿಂದುಸ್ತಾನ್ ಟೈಮ್ಸ್ ಇದನ್ನು ಮುಖಪುಟದಲ್ಲಿ ಪ್ರದರ್ಶಿಸಲು ಯೋಗ್ಯವೆಂದು ಭಾವಿಸಿದರೂ, ಪುಟದ ಮಧ್ಯಭಾಗದಲ್ಲಿ ಅಥವಾ ಕೆಳಗಿನ ಭಾಗದಲ್ಲಿ ಸಣ್ಣದಾಗಿಯಷ್ಟೇ ಮುದ್ರಿಸಿದವು. ದಿ ಇಂಡಿಯನ್ ಎಕ್ಸ್‌ಪ್ರೆಸ್ ಇದನ್ನು ಒಂದು ಮೂಲೆಗೆ ದೂಡಿತು. ಇನ್ನು ದಿ ಟೆಲಿಗ್ರಾಫ್ ಮುಖಪುಟದ ಬದಲು ಒಳಪುಟದಲ್ಲಿ ಪ್ರಕಟಿಸಿತು.
ಕನ್ನಡದ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ, ವಾರ್ತಾಭಾರತಿ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳು ರಾಹುಲ್ ಸುದ್ದಿಗೋಷ್ಠಿಯನ್ನು ಮುಖ್ಯಸುದ್ದಿಯಾಗಿ ಪ್ರಕಟಿಸದವು. ವಿಜಯವಾಣಿ 2ನೇ ಸುದ್ದಿಯಾಗಿ ಪ್ರಟಿಸಿತು. ಆದರೆ, ವಿಜಯ ಕರ್ನಾಟಕ ಪತ್ರಿಕೆಯು ರಾಹುಲ್ ಬಹಿರಂಗ ಪಡಿಸಿದ ಅಂಶಗಳಿಗೆ ಭಿನ್ನವಾಗಿ, ಚುನಾವಣಾ ಆಯೋಗ ಮತ್ತು ಬಿಜೆಪಿಯ ಪ್ರತಿಕ್ರಿಯೆಗೆ ಆದ್ಯತೆ ನೀಡಿತು. ಅದನ್ನೂ ಒಳಪುಟಗಳಲ್ಲಿ ಪ್ರಕಟಿಸಿತು.
ಆಸಕ್ತಿದಾಯಕವಾಗಿ, ಶೀರ್ಷಿಕೆಗಳು ಮತ್ತು ವರದಿಗಳ ಪಠ್ಯದಲ್ಲಿ ರಾಹುಲ್ ಆರೋಪವು ಗಮನ ಸೆಳೆಯದ ರೀತಿಯಲ್ಲಿ ನಿಭಾಯಿಸಲು ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿಗಳ ಹೇಳಿಕೆಗಳಿಗೆ ಆದ್ಯತೆ ನೀಡಲಾಯಿತು. ಈ ಅಧಿಕಾರಿಗಳು ‘ಮತ ಕಳವು’ ದಾಖಲೆಗಳನ್ನು ಪ್ರಮಾಣಪತ್ರದೊಂದಿಗೆ ಒದಗಿಸುವಂತೆ ಕೇಳಿದ್ದರು.
ಮತ್ತೊಂದು ರಾಜಕೀಯ ಷಡ್ಯಂತ್ರವೇ?
ರಾಹುಲ್ ಗಾಂಧಿ ಮಾಡುತ್ತಿರುವ ಚುನಾವಣಾ ಅಕ್ರಮದ ಆರೋಪಗಳು ಜವಾಬ್ದಾರಿಯಿಲ್ಲದ ರಾಜಕೀಯ ಕೆಸರೆರಚಾಟ ಅಥವಾ ಚುನಾವಣೆಯಿಂದ ಸೋತ ಭ್ರಮನಿರಸನರು ಮಾಡುವ ಕೆಲಸವೆಂಬ ನಿರ್ಲಕ್ಷ್ಯದ ನಿರ್ಧಾರವನ್ನೂ ಹಲವರು ನೀಡಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್, ಆಗಸ್ಟ್ 11ರಂದು ತನ್ನ ಗೊಂದಲಮಯ ಸಂಪಾದಕೀಯದಲ್ಲಿ, ರಾಹುಲ್ ಅವರ ಹೋರಾಟವನ್ನು ಸ್ವಯಂ-ಸೇವಾ ಮತ್ತು ಸಂಕೀರ್ಣವಾದದ್ದು ಎಂದು ಬಣ್ಣಿಸಿತು.
“ರಾಹುಲ್ ಗಾಂಧಿ ಅವರ ಆರೋಪಗಳಾದ ‘ಬಿಜೆಪಿಯೊಂದಿಗೆ ಸೇರಿ ಚುನಾವಣಾ ಆಯೋಗವು ಕರ್ನಾಟಕ ಚುನಾವಣೆಯಲ್ಲಿ ಮತಗಳನ್ನು ಕದ್ದಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಪರಿಷ್ಕರಣೆಯ ಅಗತ್ಯವಿದೆ. ಆ ಪ್ರಕ್ರಿಯೆಗಳು ಬಿಜೆಪಿಗೆ ನಿಸ್ಸಂಶಯವಾಗಿ ಲಾಭ ಮಾಡಿಕೊಡುತ್ತಿವೆ’ ಎಂಬುದಕ್ಕೆ ಪುರಾವೆ ಇಲ್ಲ. ಇದು ವಿರೋಧ ಪಕ್ಷದ ರಾಜಕೀಯ ಷಡ್ಯಂತ್ರ ಸಿದ್ಧಾಂತದ ಭಾಗವಾಗಿದೆ” ಎಂದು ಆ ಸಂಪಾದಕೀಯ ಹೇಳಿತು. ಅಲ್ಲದೆ, ರಾಹುಲ್ ಆರೋಪಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸವಾಲನ್ನು ಎದುರಿಸಲು ‘ಸಂಸ್ಥಾತ್ಮಕ ಧ್ವನಿಯನ್ನು ಮರಳಿ ಪಡೆಯಬೇಕು’ ಎಂದೂ ಸೂಚಿಸಿತು.
ಕೆಲವು ಸುದ್ದಿವಾಹಿನಿಗಳು, ರಾಹುಲ್ ಅವರ ಆರೋಪಗಳನ್ನು ಪರಿಶೀಲಿಸಲು ಪ್ರಯತ್ನಿಸಿದವು. ‘ಟೈಮ್ಸ್ ನೌ’ ವಾಹಿನಿಯು ಮೂರು ಮತದಾರರೊಂದಿಗೆ ಸಂದರ್ಶನ ನಡೆಸಿತು. ಅವರಲ್ಲಿ ಇಬ್ಬರು, ‘ಕೆಲವು ತಪ್ಪುಗಳಿದ್ದವು. ಅವುಗಳನ್ನು ಸರಿಪಡಿಸಲಾಗಿದೆ’ ಎಂದು ಒಪ್ಪಿಕೊಂಡರು. NDTV ಬಿಜೆಪಿ ಸಂಸದ ಮತ್ತು ಮಾಜಿ ಸಚಿವ ಅನುರಾಗ್ ಠಾಕೂರ್ ಹೇಳಿಕೆಗಳಿಗೆ ಹೆಚ್ಚು ಒತ್ತುಕೊಟ್ಟಿದೆ. ಈ ಇಬ್ಬರೂ, “ರಾಹುಲ್ ಗಾಂಧಿ ಚುನಾವಣಾ ಆಯೋಗದಂತಹ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಅಪಮಾನಿಸಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದರು. ’10 ಆರೋಪಗಳು ಮತ್ತು ಸತ್ಯಗಳು’ (10 ಕ್ಲೈಮ್ಸ್ ಅಂಡ್ ಫ್ಯಾಕ್ಟ್ಸ್’ ಎಂಬ ಕಾರ್ಯಕ್ರಮ ನಡೆಸಿದ ಎನ್‌ಡಿಟಿವಿ, ರಾಹುಲ್ ಗಾಂಧಿ ಆರೋಪಗಳು ಕೇವಲ ರಾಜಕೀಯ ಕೆಸರೆರಚಾಟದ ಭಾಗವೆಂದು ಜಡ್ಜ್‌ಮೆಂಟ್ ನೀಡಿತು.
ಈ ಲೇಖನ ಓದಿದ್ದೀರಾ?: 1947 – ಅಂದು ಭಾರತವು ಸ್ವಾತಂತ್ರ್ಯ ಗಳಿಸಿತು; ಇಂದು ಜಾತ್ಯತೀತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ!
CNN-ನ್ಯೂಸ್ 18ನಲ್ಲಿ ಪಲ್ಲವಿ ಘೋಷ್ ಅವರು ಪತ್ರಿಕಾಗೋಷ್ಠಿಯನ್ನು ವಿಶ್ಲೇಷಿಸುತ್ತಾ, ರಾಹುಲ್ ನೀಡಿದ ದತ್ತಾಂಶವನ್ನು ‘ಪ್ರಭಾವಶಾಲಿ’ ಎಂದು ಕರೆದರು. ಆದರೆ, “#ವೋಟ್‌ಚೋರಿ ಆರೋಪದೊಂದಿಗೆ ರಾಹುಲ್ ತಮ್ಮ ಗುರಿ ಸಾಧಿಸಿದರೆ? ಅಥವಾ ಇದು ಅವರ ‘ಚೌಕಿದಾರ್ ಚೋರ್ ಹೈ’ ಎಂಬ ವ್ಯಾಖ್ಯಾನದ ಪುನರಾವರ್ತನೆಯೇ?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಪಕ್ಷವು ತಾನು ಯಾವುದೇ ಕೊರತೆಯಿಂದ ಸೋತಿಲ್ಲ. ಬದಲಾಗಿ, ಚುನಾವಣೆಯಲ್ಲಿ ಮತ ಕದ್ದಿರುವುದರಿಂದ ಸೋತಿದ್ದೇವೆ ಎಂದು ಮತದಾರರ ಮನಸ್ಸಿನಲ್ಲಿ ಸಂದೇಹದ ಬೀಜವನ್ನು ಬಿತ್ತಲು ಪ್ರಯತ್ನಿಸುತ್ತದೆ. ಆದರೆ, ರಾಹುಲ್ ಗಾಂಧಿಯವರು ಯಶಸ್ವಿಯಾಗಿ ಗುರಿಯನ್ನು ತಲುಪಿದರೆ ಚುನಾವಣೆಗಳನ್ನು ಗೆಲ್ಲುತ್ತಾರೆಯೇ” ಎಂದು ಘೋಷ್ ಪ್ರಶ್ನಿಸಿದರು. ಆದರೆ, ಅವರು ರಾಹುಲ್ ಗಾಂಧಿ ಬಯಲುಗೊಳಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿ, ಮತದಾರರ ಮತಗಳನ್ನು ಕದ್ದು ಚುನಾವಣೆಗಳನ್ನು ಬಿಜೆಪಿ ಗೆದ್ದಿತೇ ಎಂಬುದರ ಬಗ್ಗೆ ಚರ್ಚಿಸಲಿಲ್ಲ.
ಮತದಾರರು ಏಕೆ ಮುಖ್ಯ?
ಅಂತಿಮವಾಗಿ, ಮಾಧ್ಯಮಗಳು ನಡೆಸಿದ ಸುದ್ದಿ, ವರದಿ, ಚರ್ಚೆಗಳು ಯಾವುದಕ್ಕಾಗಿ? ಕೆಲವು ಗಂಭೀರ ಸುದ್ದಿ ಮಾಧ್ಯಮಗಳು, ಸ್ವತಂತ್ರ ಸುದ್ದಿ ಪೋರ್ಟಲ್‌ಗಳು ಹಾಗೂ ಅವುಗಳ ಯೂಟ್ಯೂಬ್ ಚಾನೆಲ್‌ಗಳು ರಾಹುಲ್ ನೀಡಿದ ದತ್ತಾಂಶಗಳಿಗೆ ಒತ್ತುಕೊಟ್ಟು ವಿಶ್ಲೇಷಣೆ ನಡೆಸಿದವು. ಚುನಾವಣಾ ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದವು. ಮುಖ್ಯವಾಹಿನಿಯ ಮಾಧ್ಯಮಗಳು ಮಾಡದೆ ಕೆಲಸವನ್ನು ಮಾಡಿ, ಆ ಕೊರತೆಯನ್ನು ತುಂಬಿದವು.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಮಹದೇವಪುರದಲ್ಲಿ ನಕಲಿ ಮತದಾರರ ಬಗ್ಗೆ ರಾಹುಲ್ ಮಾಡಿದ ಆರೋಪಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ ರೀತಿ ‘ಅಸಮಂಜಸ’ ಮತ್ತು ‘ದುರದೃಷ್ಟಕರ’ ಎಂದು ಕರೆದರು. ಇದು ಆಯೋಗವು ಭಾರತೀಯ ಜನರ ವಿಶ್ವಾಸವನ್ನು ಕಳೆದುಕೊಳ್ಳಲು ಮತ್ತು ವಿಶ್ವಾಸಾರ್ಹತೆಗೆ ಹಾನಿ ಮಾಡಿಕೊಳ್ಳಬಹುದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ NGO ಒಂದು ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದ ಬಗ್ಗೆ ‘ದಿ ನ್ಯೂಸ್ ಮಿನಿಟ್’ ಈಗಾಗಲೇ ತನಿಖೆ ಮಾಡಿತ್ತು.
ದಿ ಹಿಂದು ಪತ್ರಕರ್ತೆ ಪೂನಂ ಅಗರ್‌ವಾಲ್ ಅವರು, ರಾಹುಲ್ ಆರೋಪಗಳಲ್ಲಿ ಚುನಾವಣಾ ಆಯೋಗ ಮತ್ತು ಅದರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸುತ್ತಾ, ದತ್ತಾಂಶಗಳು ಮೂಲತಃ ಮತದಾರರ ನಷ್ಟದ ಬಗ್ಗೆ ಮತ್ತು ಅದೃಶ್ಯಗೊಂಡ ಅಸಂಖ್ಯಾತ ಮಾನವರ ಬಗ್ಗೆ ಇವೆ ಎಂಬುದನ್ನು ಒತ್ತಿಹೇಳಿದರು.
ವಿರೋಧ ಪಕ್ಷವು ಮುಂಬರುವ ದಿನಗಳಲ್ಲಿ ತನ್ನ ಪ್ರತಿಭಟನೆಗಳನ್ನು ಮುಂದುವರೆಸಬಹುದು. ಆ ಸಂದರ್ಭದಲ್ಲಿ ಮಾಧ್ಯಮದ ಪಾತ್ರವೂ ಗಮನದಲ್ಲಿರುತ್ತದೆ. ಚುನಾವಣಾ ಪ್ರಕ್ರಿಯೆಗಳನ್ನು ಪ್ರಶ್ನಿಸುವುದು ಪ್ರಜಾತಾಂತ್ರಿಕತೆಗೆ ಅತ್ಯಗತ್ಯ. ಇಂತಹ ಯಾವುದೇ ಪ್ರಯತ್ನವನ್ನು ನಿರ್ಲಕ್ಷಿಸುವ ಅಥವಾ ಅಪಹಾಸ್ಯ ಮಾಡುವ ಮಾಧ್ಯಮವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕೃತ್ಯದಲ್ಲಿ ಅಪರಾಧಿಯಾಗುತ್ತದೆ.
ಕೃಪೆ: ದಿ ಕ್ವಿಂಟ್