ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಭಾರತದ ನಾಯಕರನ್ನು ಔಪಚಾರಿಕ ಆಹ್ವಾನಿಸಲಾಗಿದೆ ಎಂದು ಭಾರತದ ಮಾಧ್ಯಮಗಳು ಮಾಡಿರುವ ಸುದ್ದಿಯನ್ನು ನೋಡಿ ಅಮೆರಿಕದಲ್ಲಿ ನನ್ನ ಸ್ನೇಹಿತರು ನಗುತ್ತಿದ್ದಾರೆ. ಸಮಾರಂಭಕ್ಕೆ ಸೇವಕನನ್ನು (ಜೈಶಂಕರ್) ಆಹ್ವಾನಿಸಲಾಗಿದೆಯೇ ಹೊರತು ಪ್ರಧಾನಿಯವರನ್ನಲ್ಲ (ಮೋದಿ). ಇದು ದೊಡ್ಡ ಅವಮಾನವಲ್ಲವೇ ? ಆಹ್ವಾನ ಸ್ವೀಕರಿಸಿದ್ದಕ್ಕಾಗಿ ಸೇವಕನನ್ನು ವಜಾಗೊಳಿಸಿ’ ಎಂದು ಸ್ವಾಮಿ ಆರೋಪಿಸಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಇದೇ 20ರಂದು ಅಧಿಕಾರ ಸ್ವೀಕರಿಸಲಿದ್ದು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾರತದ ಪ್ರತಿನಿಧಿಯಾಗಿ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಇತ್ತೀಚಿಗೆ ಮೋದಿ ಅವರು ಸೇವಕನನ್ನು (ಜೈಶಂಕರ್) ಅಮೆರಿಕಕ್ಕೆ ಕಳುಹಿಸಿದ್ದರು. ಜತೆಗೆ, ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡುವಂತೆ ಹೇಳಿ ಬರುವಂತೆಯೂ ಜೈಶಂಕರ್‌ಗೆ ಸೂಚಿಸಲಾಗಿತ್ತು. ಅದರಂತೆಯೇ ಜೈಶಂಕರ್ ನಡೆದುಕೊಂಡಿದ್ದರು. ಇಲ್ಲದಿದ್ದರೆ ಅವರು (ಜೈಶಂಕರ್) ತಮ್ಮ ಹುದ್ದೆಯನ್ನು ಕಳೆದುಕೊಳ್ಳುತ್ತಿದ್ದರು’ ಎಂದು ಸ್ವಾಮಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಕೇಜ್ರಿವಾಲ್‌ಗೆ ಇರಲಿ ಎಚ್ಚರ
ಸದ್ಯ ಡೊನಾಲ್ಡ್ ಟ್ರಂಪ್ ಅವರು ಮೋದಿಯನ್ನು ಆಹ್ವಾನಿಸುವ ಮನಸ್ಥಿತಿಯಲ್ಲಿಲ್ಲ. 2023ರಲ್ಲಿ ಟ್ರಂಪ್ ಅವರ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಮೋದಿ ಘೋಷಿಸಿದ್ದರು. ಮೋದಿ ಅವರು ಆಹ್ವಾನವನ್ನು ತಿರಸ್ಕರಿಸುವ ಮೂಲಕ ಟ್ರಂಪ್‌ಗೆ ನೋವುಂಟು ಮಾಡಿದ್ದರು ಎಂದೂ ಸ್ವಾಮಿ ಹೇಳಿದ್ದಾರೆ.
ಜೈಶಂಕರ್ ಅವರು ಡಿಸೆಂಬರ್ 24ರಿಂದ 29ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ನೇಮಕ ಮಾಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಪ್ರಸಕ್ತ ಜಾಗತಿಕ ವಿಷಯಗಳ ಕುರಿತು ಈ ಇಬ್ಬರೂ ನಾಯಕರು ಚರ್ಚಿಸಿದ್ದರು. ಚುನಾಯಿತ ಅಧ್ಯಕ್ಷ ಟ್ರಂಪ್ ಅವರ ಮುಂದಿನ ಆಡಳಿತದ ಉನ್ನತಾಧಿಕಾರಿಯ ಜತೆಗೆ ಭಾರತದ ಸಚಿವರು ನಡೆಸಿದ ಮೊದಲ ಸಭೆ ಇದಾಗಿತ್ತು.
