ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಹಾಗೂ ಕಿಶೋರಿ ಲಾಲ್ ಶರ್ಮಾ ಪರವಾಗಿ ವ್ಯಾಪಕ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಸಹೋದರನ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಹೋದರಿಯಾಗಿ, ನನ್ನ ಸಹೋದರ ಸಂತೋಷವಾಗಿರಲೆಂದು ಬಯಸುತ್ತೇನೆ. ಆತ ಮದುವೆಯಾಗಿ, ತಂದೆಯಾಗಿ ಮಕ್ಕಳನ್ನು ಹೊಂದಿ ಸಂತಸವಾಗಿರಲೆಂದು ಬಯಸುತ್ತೇನೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಹುಲ್ ಅವರು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾದರೆ ನಿಮಗೆ ಸಂತೋಷವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಇಲ್ಲಿಯವರೆಗೂ ವಿಪಕ್ಷಗಳ ಒಕ್ಕೂಟ ಇಂಡಿಯಾ ಬಿಜೆಪಿಯ ಪ್ರಧಾನಿ ಮೋದಿ ವಿರುದ್ಧವಾಗಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೊಷಿಸಿಲ್ಲ. ಲೋಕಸಭಾ ಚುನಾವಣೆಯ ನಂತರ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಈ ಮೊದಲು ಅಮೇಥಿ ಅಥವಾ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ ಅಂತಿಮವಾಗಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಹಾಗೂ ರಾಹುಲ್ ಪ್ರತಿನಿಧಿಸಿದ್ದ ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕಿಳಿದಿದ್ದಾರೆ. ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಯ್‌ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಿಯಾಂಕಾ ಗಾಂಧಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಸೋನಿಯಾ ಗಾಂಧಿ ಕೂಡ ಇಂದು ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ.
ದೇಶದ ಒಟ್ಟು 49 ಕ್ಷೇತ್ರಗಳನ್ನು ಒಳಗೊಂಡು ಇವೆರೆಡು ಕ್ಷೇತ್ರಗಳಲ್ಲಿ ಮೇ.20 ರಂದು ಐದನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.
