ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ವಕ್ಫ್ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನೂತನ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ನೂತನ ಮುಖ್ಯ ನ್ಯಾಯಮೂರ್ತಿಗಳು ಮೇ 14ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಮೇ 15 ರಂದು ವಿಚಾರಣೆಗೆ ಬರಲಿದೆ.
ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡುವ ಮೊದಲು ಸುದೀರ್ಘವಾದ ವಿಚಾರಣೆಯ ಅಗತ್ಯವಿದೆ ಎಂದು ಹಾಲಿ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಸ್ಪಷ್ಟಪಡಿಸಿದರು. ಸಂಜೀವ್ ಖನ್ನಾ ಅವರು ಮೇ 13 ರಂದು ನಿವೃತ್ತರಾಗಲಿದ್ದಾರೆ.
ಆರಂಭದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರವು ವಿವಾದಿದ ಮಸೂದೆಯ ಎರಡು ಪ್ರಮುಖ ಅಂಶಗಳನ್ನು ಕೈಬಿಡುವುದಾಗಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿತ್ತು.
ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಧ್ಯಂತರ ಹಂತದಲ್ಲಿದ್ದರೂ ಸಹ ಯಾವುದೇ ತೀರ್ಪನ್ನು ತಾವು ಕಾಯ್ದಿರಿಸಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
“ನಾವು ಪ್ರತಿವಾದ ಮತ್ತು ಮರುಪ್ರತಿವಾದಗಳನ್ನು ಪರಿಶೀಲಿಸಿದ್ದೇವೆ. ನೋಂದಣಿಗೆ ಸಂಬಂಧಿಸಿದ ಕೆಲವು ವಿಚಾರಗಳು ಮತ್ತು ಅರ್ಜಿದಾರರು ಪ್ರಶ್ನಿಸಿರುವ ಕೆಲವು ಅಂಕಿಅಂಶಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಪರಿಹರಿಸಬೇಕಾಗಿದೆ” ಎಂದು ಸಿಜೆಐ ಖನ್ನಾ ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಕೂಡ ಪೀಠದಲ್ಲಿದ್ದಾರೆ.
“ಮಧ್ಯಂತರ ಹಂತದಲ್ಲಿದ್ದರೂ ಸಹ ನಾನು ಯಾವುದೇ ತೀರ್ಪು ಅಥವಾ ಆದೇಶವನ್ನು ಕಾಯ್ದಿರಿಸುವುದಿಲ್ಲ. ಈ ವಿಷಯವನ್ನು ಸೂಕ್ತ ದಿನದಲ್ಲಿ ವಿಚಾರಣೆಗೆ ತೆಗೆದುಕೊಳ್ಳಬೇಕು. ಇದು ನನ್ನ ಮುಂದೆ ಇರುವುದಿಲ್ಲ. ನಾವು ಅದನ್ನು ಗುರುವಾರ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಪೀಠದ ಮುಂದೆ ಇರಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತಿಳಿಸಿದರು.