ಫೆಬ್ರವರಿಯಲ್ಲಿ ಒಣ ಹವೆ ಮತ್ತು ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಇದು ಹೂಬಿಡುವ ಮತ್ತು ಧಾನ್ಯ ಚಿಗುರುವ ಹಂತವಾಗಿದ್ದು, ಗೋಧಿಯಂತಹ ಆಹಾರ ಧಾನ್ಯ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸೇಬು ಮೊದಲಾದ ಹಣ್ಣುಗಳ ಬೆಳೆಗೂ ಕೂಡಾ ಪ್ರಭಾವ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
2025ರ ಜನವರಿಯು ಮೂರನೇ ಅತ್ಯಂತ ಬೆಚ್ಚಗಿನ ತಿಂಗಳಾಗಿದ್ದು, 1901ರಿಂದ ನಾಲ್ಕನೇ ಬಾರಿಗೆ ಅತೀ ಕಡಿಮೆ ಮಳೆಯಾಗಿದೆ. ಫೆಬ್ರವರಿಯಲ್ಲಿ ಉತ್ತರ ಭಾರತದಲ್ಲಿ ಸರಾಸರಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಐಎಂಡಿ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಚಳಿಗಾಲದಲ್ಲೂ ಮಳೆ ಅಬ್ಬರ; ಕರ್ನಾಟಕದ 11 ಜಿಲ್ಲೆಗಳಲ್ಲಿ ಫೆ.2ರಿಂದ ಮಳೆ: ಹವಾಮಾನ ಇಲಾಖೆ
“2025ರ ಫೆಬ್ರವರಿಯಲ್ಲಿ ದೇಶಾದ್ಯಂತ ಮಾಸಿಕ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ” ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದರು.
2025ರ ಫೆಬ್ರವರಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಮಾಸಿಕ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಅದೇ ರೀತಿ, ದೇಶದ ಹೆಚ್ಚಿನ ಭಾಗಗಳಲ್ಲಿ ಮಾಸಿಕ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಾಗಿರುತ್ತದೆ ಎಂದು ತಿಳಿಸಿದರು.
ಜನವರಿಯಲ್ಲಿ ದೇಶದ ಸರಾಸರಿ ತಾಪಮಾನವು 18.98 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಈ ಹಿಂದೆ 1958, 1990 ರಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಇದು ಮೂರನೇ ಬಾರಿಗೆ ಜನವರಿಯಲ್ಲಿ ಅಧಿಕ ತಾಪಮಾನ ದಾಖಲಾಗಿರುವುದಾಗಿದೆ.
ಇದನ್ನು ಓದಿದ್ದೀರಾ? ಇಂದಿನಿಂದ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
“ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ತಾಪಮಾನವು ಆಹಾರ ಧಾನ್ಯಗಳು ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಗೋಧಿಯಂತಹ ಹೂಬಿಡುವ ಮತ್ತು ಧಾನ್ಯ ಬೆಳೆಯುವ ಹಂತದಲ್ಲಿರುವ ಬೆಲೆಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದು ಐಎಂಡಿ ಮಹಾನಿರ್ದೇಶಕ ತಿಳಿಸಿದ್ದಾರೆ.
ಸಾಸಿವೆ ಮತ್ತು ಕಡಲೆ ಮುಂತಾದ ಬೆಳೆಗಳಿಗೂ ತೊಂದರೆ ಉಂಟಾಗಬಹುದು. ಅಧಿಕ ತಾಪಮಾನದಿಂದಾಗಿ ಸೇಬು ಮತ್ತು ಇತರ ಸಮಶೀತೋಷ್ಣ ತೋಟಗಾರಿಕಾ ಬೆಳೆಗಳು ಮೊಗ್ಗಲ್ಲೇ ಉದುರಬಹುದು. ಅವಧಿಪೂರ್ವವಾಗಿ ಚಿಗುರು ಹುಟ್ಟಬಹುದು. ಇದರಿಂದಾಗಿ ಕಳಪೆ ಗುಣಮಟ್ಟದ ಹಣ್ಣು ಬೆಳೆಯಬಹುದು. ಕೆಟ್ಟ ಇಳುವರಿ ಲಭಿಸಬಹುದು ಎಂದು ಐಎಂಡಿ ಮಹಾನಿರ್ದೇಶಕರು ಹೇಳಿದ್ದಾರೆ.
