ಬಿಪಿಎಸ್‌ಸಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಮರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತಿದ್ದ ಬಿಹಾರ ಲೋಕಸೇವಾ ಆಯೋಗದ ಪರೀಕ್ಷಾ ಆಂಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದಕ್ಕೆ ಬಿಹಾರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ, “ಬಿಹಾರದಲ್ಲಿ ಕಳೆದ ಮೂರು ದಿನದಲ್ಲಿ ಎರಡನೇ ಬಾರಿ ಹಲ್ಲೆ ನಡೆಸಲಾಗುತ್ತಿದೆ. ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ತಡೆಯುವುದು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಡಿವಾಣ ಹಾಕುವುದು ಸರ್ಕಾರದ ಕೆಲಸ. ಆದರೆ ಭ್ರಷ್ಟಾಚಾರ ತಡೆಯುವ ಬದಲು ಅದರ ವಿರುದ್ಧ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಚಳಿಯಲ್ಲೂ ವಿದ್ಯಾರ್ಥಿಗಳ ಮೇಲೆ ಜಲಪಿರಂಗಿ ಹಾಗೂ ಲಾಠಿ ಚಾರ್ಜ್ ಮಾಡುತ್ತಿರುವುದು ಅಮಾನವೀಯ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ವಿದ್ಯಾರ್ಥಿಗಳ ಮೇಲಿನ ಡಬಲ್ ದೌರ್ಜನ್ಯದ ಸಂಕೇತವಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಸರ್ಕಾರ ಪರೀಕ್ಷೆಗಳಲ್ಲಿ ನಡೆಸುತ್ತಿರುವ ಭ್ರಷ್ಟಾಚಾರದ ನಡೆಯನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಕಳೆದ ವಾರ ಕಿಡಿಕಾರಿದ್ದರು. ಪರೀಕ್ಷಾ ಅಕ್ರಮವನ್ನು ಏಕಲವ್ಯ ಹೆಬ್ಬೆರಳು ದಾನ ಮಾಡಿದ ಘಟನೆಗೆ ಹೋಲಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲಕ ಬಿಹಾರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ತುಂಡರಿಸುತ್ತಿದೆ ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಗೆ ಸಂಸದೀಯ ವ್ಯವಸ್ಥೆಯ ಇತಿಹಾಸ ತಿಳಿಸುವ ತುರ್ತು ಅಗತ್ಯವಿದೆ
ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಡಿಸೆಂಬರ್ 13 ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಜಲಪಿರಂಗಿ ಹಾಗೂ ಲಾಠಿ ಚಾರ್ಜ್ ನಡೆಸಿದ್ದರು.
ಪೊಲೀಸರ ದಬ್ಬಾಳಿಕೆಯನ್ನು ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್ ಕೂಡ ಖಂಡಿಸಿದ್ದಾರೆ. “ಪೊಲೀಸರು ಬಿಪಿಎಸ್‌ಸಿ ಆಕಾಂಕ್ಷಿಗಳ ಮೇಲೆ ಹಲ್ಲೆ ನಡೆಸಿರುವುದು ತುಂಬ ಆಘಾತಕಾರಿ ಸಂಗತಿ. ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ನೋಡಿದರೆ ನೋವುಂಟಾಗುತ್ತದೆ. ನಾನು ಯುವಕನಾಗಿದ್ದು, ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ಬಿಹಾರದ ಘಟನೆಯನ್ನು ಎಎಪಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.