ಬಿಹಾರದ ಗಂಗಾ ನದಿಯ ನೀರು ಅಧಿಕ ಸ್ಥಳಗಳಲ್ಲಿ ಸ್ನಾನಕ್ಕೆ ಯೋಗ್ಯವಾಗಿಲ್ಲ, ನೀರಿನಲ್ಲಿ ಬ್ಯಾಕ್ಟೀರಿಯಾ ಅಧಿಕವಾಗಿದೆ ಎಂದು ಬಿಹಾರದ ಆರ್ಥಿಕ ಸಮೀಕ್ಷೆ 2024-25 ಹೇಳಿದೆ. ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಬಿಎಸ್‌ಪಿಸಿಬಿ) 34 ಸ್ಥಳಗಳಲ್ಲಿ ಗಂಗಾ ನೀರಿನ ಗುಣಮಟ್ಟವನ್ನು ಹದಿನೈದು ದಿನಗಳಿಗೊಮ್ಮೆ ಮೇಲ್ವಿಚಾರಣೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬಿಹಾರ ವಿಧಾನಸಭೆಯಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ, “ಗಂಗಾ ನದಿಯ ನೀರಿನ ಗುಣಮಟ್ಟವು ಕೆಟ್ಟದಾಗಿದೆ. ಅಧಿಕ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳಿವೆ. ಗಂಗಾ ಮತ್ತು ಉಪನದಿಗಳ ದಡದಲ್ಲಿರುವ ನಗರಗಳಿಂದ ಒಳಚರಂಡಿ/ಗೃಹ ತ್ಯಾಜ್ಯ ನೀರನ್ನು ನದಿಗೆ ಬಿಡುವುದರಿಂದ ಈ ಮಾಲಿನ್ಯ ಉಂಟಾಗಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ, ಬ್ಯಾಕ್ಟೀರಿಯಾಮಯ: ಮಾಲಿನ್ಯ ನಿಯಂತ್ರಣ ಮಂಡಳಿ
“ನೀರು ಜಲಚರಗಳು, ವನ್ಯಜೀವಿಗಳ ಪ್ರಸರಣ, ಮೀನುಗಾರಿಕೆ ಮತ್ತು ನೀರಾವರಿಗೆ ಸೂಕ್ತವಾಗಿದೆ. ಬಕ್ಸಾರ್, ಚಾಪ್ರಾ (ಸರನ್), ದಿಗ್ವಾರಾ, ಸೋನೆಪುರ್, ಮಾನೇರ್, ದಾನಾಪುರ್, ಪಾಟ್ನಾ, ಫತುಹಾ, ಭಕ್ತಿಯಾರ್‌ಪುರ, ಬರ್ಹ್, ಮೊಕಾಮಾ, ಬೇಗುಸರಾಯ್, ಖಗಾರಿಯಾ, ಲಖಿಸರೈ, ಮಣಿಹರಿ, ಮುಂಗೇರ್, ಜಮಾಲ್‌ಪುರ, ಸುಲ್ತಾನಗಂಜ್, ಭಾಗಲ್‌ಪುರ ಮತ್ತು ಕಹಲ್‌ಗಾಂವ್‌ನಲ್ಲಿ ಗಂಗಾ ನದಿ ಕಲುಷಿತವಾಗಿದೆ” ಎಂದು ವರದಿ ಹೇಳಿದೆ.
ಬಿಎಸ್‌ಪಿಸಿಬಿ ಅಧ್ಯಕ್ಷ ಡಿ ಕೆ ಶುಕ್ಲಾ, “ಗಂಗಾ ನದಿಯಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳಿವೆ. ಅದು ಕಳವಳಕಾರಿ ವಿಷಯವಾಗಿದೆ. ಫೀಕಲ್ ಕೋಲಿಫಾರ್ಮ್ (faecal coliform) ಬ್ಯಾಕ್ಟೀರಿಯಾಗಳು ಮಲದಲ್ಲಿ ಕಂಡುಬರುತ್ತವೆ. ಆದರೆ ಗಂಗಾ ನದಿಯಲ್ಲಿಯೂ ಕಂಡುಬಂದಿದೆ. ಇದರ ಮಟ್ಟ ಸ್ವಲ್ಪ ಅದಿಕವಾದರೂ ರೋಗ ಉಂಟು ಮಾಡುವ ಸಾಧ್ಯತೆಯಿದೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಗಂಗಾ ನದಿ ತೀರದಲ್ಲಿ ಮಲವಿಸರ್ಜನೆ ಆರೋಪ: ಯುಪಿ ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್
ಈ ಹಿಂದೆ ಮಹಾ ಕುಂಭಮೇಳ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನ ಹಲವು ಕಡೆಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಗಂಗಾ ನದಿಯಲ್ಲಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಅಧಿಕವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಿಳಿಸಿದೆ.
“ಪ್ರಯಾಗ್‌ರಾಜ್‌ನಲ್ಲಿ ಹಲವು ಸ್ಥಳಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಮಹಾ ಕುಂಭಮೇಳದ ಸಂದರ್ಭದಲ್ಲಿ, ಪವಿತ್ರ ಸ್ನಾನದ ಸಂದರ್ಭದಲ್ಲಿ ಹಲವು ಮಂದಿ ಪ್ರಯಾಗ್‌ರಾಜ್‌ನಲ್ಲಿ ಸ್ನಾನ ಮಾಡಿದ್ದಾರೆ. ಇದರಿಂದಾಗಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇನ್ನಷ್ಟು ಹೆಚ್ಚಾಗುತ್ತದೆ” ಎಂದು ವರದಿ ಹೇಳಿತ್ತು. ಆದಾಗ್ಯೂ ಕೋಟ್ಯಾಂತರ ಜನರು ಮಹಾ ಕುಂಭಮೇಳ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
