ವಯನಾಡ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಈವರೆಗೆ ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯ ತ್ವರತವಾಗಿ ನಡೆಯುತ್ತಿದೆ. ರಕ್ಷಣಾ ಕಾರ್ಯಕ್ಕಾಗಿ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ‘190 ಅಡಿ ಉದ್ದದ ಬೈಲಿ ಸೇತುವೆ’ಯನ್ನು 24 ಗಂಟೆಗಳಲ್ಲಿ ನಿರ್ಮಾಣ ಮಾಡಿದೆ. ಈ ಸೇತುವೆಯು ಭೂಕುಸಿತಕ್ಕೆ ತುತ್ತಾದ ವಯನಾಡ್ನ ಮುಂಡಕ್ಕೈ ಮತ್ತು ಚೂರಮಲಾ ನಡುವೆ ಸಂಪರ್ಕ ಒದಗಿಸುತ್ತದೆ.
ಸೇತುವೆ ನಿರ್ಮಾಣ ಕಾಮಗಾರಿ ಬುಧವಾರ ರಾತ್ರಿ 9.30ಕ್ಕೆ ಆರಂಭಗೊಂಡಿತ್ತು. ಗುರುವಾರ ಸಂಜೆ 5.30ರ ವೇಳಗೆ ಸಂಪೂರ್ಣ ಕಾಮಗಾರಿ ಮುದಿದಿದೆ. 24 ಟನ್ ಭಾರ ಹೊರುವ ಸಾಮರ್ಥ್ಯವನ್ನು ಸೇತುವೆ ಹೊಂದಿದೆ.
ಸೇತುವೆಯು ಜನರು ಮತ್ತು ವಸ್ತುಗಳನ್ನು ಸುಲಭವಾಗಿ ಸಾಗಿಸಲು ಹೆಚ್ಚು ಸಹಾಯ ಮಾಡುತ್ತದೆ ಎಂದು ಮೇಜರ್ ಜನರಲ್ ಮ್ಯಾಥ್ಯೂ ಹೇಳಿದ್ದಾರೆ.
“ಭೂಕುಸಿತಕ್ಕೆ ತುತ್ತಾದ ಎಲ್ಲ ಪ್ರದೇಶಗಳಲ್ಲಿಯೂ ಹುಡುಕಾಟ ನಡೆಸುತ್ತಿದ್ದೇವೆ. ಹೆಚ್ಚು ಸಂತ್ರಸ್ತರನ್ನು ರಕ್ಷಿಸುವ ಭರವಸೆ ಇದೆ. ಕೆಲವರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಸಹಾಯಕ್ಕಾಗಿ ಸಂಪರ್ಕಿಸಲು ಸಾಧ್ಯವಾಗದ ಜನರು ಪೀಡಿತ ಪ್ರದೇಶದಲ್ಲಿಯೇ ಇದ್ದಾರೆ. ಅವರನ್ನು ರಕ್ಷಿಸಲಾಗುತ್ತಿದೆ. ದುರದೃಷ್ಟವಶಾತ್ ವೃತಪಟ್ಟವರ ಮೃತದೇಹಗಳನ್ನು ಕೂಡ ಹುಡುಕುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

“ನಾವು ರಾಡಾರ್ ಉಪಕರಣಗಳನ್ನು ಬಳಸಲು ಯೋಚಿಸುತ್ತಿದ್ದೇವೆ. ನಮ್ಮಲ್ಲಿ ಈಗಾಗಲೇ ಸ್ನಿಫರ್ ಡಾಗ್ಗಳು ಆಳವಾಗಿ ಹೂತಿರುವ ದೇಹಗಳನ್ನು ಹುಡುಕುವ ಕೆಲಸ ಮಾಡುತ್ತಿವೆ” ಎಂದು ಮ್ಯಾಥ್ಯೂ ತಿಳಿಸಿದ್ದಾರೆ.
ಸೇತುವೆ ನಿರ್ಮಾಣಕ್ಕೆ ಸಾಮಗ್ರಿಗಳನ್ನು ದೆಹಲಿ ಮತ್ತು ಬೆಂಗಳೂರಿನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ತರಿಸಿಕೊಂಡು, ಅಲ್ಲಿಂದ 17 ಟ್ರಕ್ಗಳ ಮೂಲಕ ವಯನಾಡಿಗೆ ತರಲಾಯಿತು ಎಂದು ಅವರು ವಿವರಿಸಿದ್ದಾರೆ.
Senege nanna abhinandanegalu