ಸಿವಿಲ್ ಪ್ರಕರಣವೊಂದಕ್ಕೆ ಕ್ರಿಮಿನಲ್ ರೂಪ ನೀಡಿ, ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದ ರಾಜಸ್ಥಾನ ಹೈಕೋರ್ಟ್‌ನ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ‘ನಾವು ನಮ್ಮ ತಾಳ್ಮೆ ಕಳೆದುಕೊಳ್ಳುವುದಿಲ್ಲ’ ಎಂದಿರುವ ನ್ಯಾಯಾಲಯವು ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿದೆ.
ರಾಜಸ್ಥಾನ ಮೂಲದ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ನಾವು ಇಂದು ನಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಇಂದು ನಾವು ನಮ್ಮದೇ ನಿಯಂತ್ರಣದಲ್ಲಿದ್ದೇವೆ. ನಮ್ಮನ್ನು ನಿಯಂತ್ರಿಸುವ ಶಕ್ತಿ ನಮ್ಮಲ್ಲಿದೆ. ಇದಕ್ಕೆ ಔಷಧ ನಗು. ಈ ಪ್ರಕರಣದ ಫೈಲ್‌ಅನ್ನು ಓದಿದಾಗ, ನಾವು ನಗಲೇಬೇಕು” ಎಂದು ಹೇಳಿದ್ದಾರೆ.
ಕಳೆದ ವಾರ, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರು ತಮ್ಮ ತೀರ್ಪಿನಲ್ಲಿ ಮಾಡಿದ್ದ ಟೀಕೆಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲಾ ಅವರು ಖಂಡಿಸಿದ್ದರು. ಕುಮಾರ್ ಅವರು ಸಿವಿಲ್ ವಿವಾದದಲ್ಲಿ ಕ್ರಿಮಿನಲ್ ಕಾನೂನು ಕ್ರಮಗಳನ್ನು ಮಾನ್ಯ ಮಾಡಿರುವುದು ಸರಿಯಲ್ಲ ಎಂದಿದ್ದ ನ್ಯಾಯಮೂರ್ತಿಗಳು, “ಕುಮಾರ್ ಅವರು ಕೇವಲ ಸಿವಿಲ್ ವಿವಾದದಲ್ಲಿ ಕ್ರಿಮಿನಲ್ ಕಾನೂನು ಕ್ರಮವನ್ನು ಮುಂದುವರೆಸಲು ಅನುಮತಿಸಬಾರದಿತ್ತು. ಹೀಗಾಗಿ, ಅವರು ಕ್ರಿಮಿನಲ್ ಕೇಸ್‌ಗಳನ್ನು ವಿಚಾರಣೆ ನಡೆಸಬಾರದು” ಎಂದು ತಾಕೀತು ಮಾಡಿದ್ದರು.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರು ಸಿಜೆಐ ಬಿ.ಆರ್ ಗವಾಯಿ ಅವರಿಗೆ ಪತ್ರ ಬರೆದಿದ್ದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪರ್ದಿವಾಲಾ ಅವರ ಆದೇಶವು ನ್ಯಾಯಾಂಗ ಮೀರಿದ ಕ್ರಮವಾಗಿದೆ ಎಂದು ವಾದಿಸಿದ್ದರು. ಬಳಿಕ, ಕುಮಾರ್ ಅವರು ಕ್ರಿಮಿನಲ್ ಕೇಸ್‌ಗಳನ್ನು ವಿಚಾರಣೆ ನಡೆಸದಂತೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದುಕೊಂಡಿದೆ. ಆದಾಗ್ಯೂ, ಕುಮಾರ್ ಅವರು ಹಿರಿಯ ಸಹೋದ್ಯೋಗಿಯೊಂದಿಗೆ ಕುಳಿತು ‘ಕಾನೂನಿನ ಸೂಕ್ಷ್ಮತೆಗಳನ್ನು ಕಲಿತುಕೊಳ್ಳಬೇಕು’ ಎಂದು ಆದೇಶಿಸಿತ್ತು.
ಈ ವಿವಾದ ಇನ್ನೂ ಮುಗಿಯದೇ ಇರುವ ಸಮಯದಲ್ಲಿಯೇ, ರಾಜಸ್ಥಾನ ಹೈಕೋರ್ಟ್‌ನಿಂದ ಮತ್ತೊಂದು ದೋಷಪೂರಿತ ಪ್ರಕರಣ ನ್ಯಾಯಮೂರ್ತಿ ಪರ್ದಿವಾಲಾ ಅವರೇ ಇರುವ ಪೀಠದ ಮುಂದೆ ಬಂದಿದೆ. ಸಿವಿಲ್ ಕೇಸ್‌ಗೆ ಕ್ರಿಮಿನಲ್ ಪ್ರಕರಣದ ರೂಪಕೊಟ್ಟು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ದಂಪತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
ಈ ಪ್ರಕರಣವು ಪ್ಲೈವುಡ್ ಸರಕುಗಳ ಬಾಕಿ ಮೊತ್ತವನ್ನು ಪಾವತಿಸುವ ವಿಚಾರಕ್ಕೆ ಸಂಬಂಧಿಸಿದೆ. ದಂಪತಿಗಳ ವಿರುದ್ಧದ ದೂರಿನ ಪ್ರಕಾರ, ದಂಪತಿಗಳು 16 ಲಕ್ಷ ರೂ. ಮೌಲ್ಯದ ಪ್ಲೈವುಡ್ ಸರಕುಗಳನ್ನು ಖರೀದಿಸಿದ್ದರು. ಆದರೆ, ಅವರು 3.5 ಲಕ್ಷ ರೂಪಾಯಿಗಳನ್ನು ಪಾವತಿಸಿ, 12.5 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಆ ಬಾಕಿ ಮೊತ್ತವನ್ನು ಪಾವತಿಸಿದ ಕಾರಣಕ್ಕಾಗಿ, ದಂಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 420 (ವಂಚನೆ), 406 (ಕ್ರಿಮಿನಲ್ ವಿಶ್ವಾಸ ದ್ರೋಹ), ಮತ್ತು 120B (ಕ್ರಿಮಿನಲ್ ಒಡಂಬಡಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಲೇಖನ ಓದಿದ್ದೀರಾ?: ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್ ಒತ್ತಡ
ಈ ಪ್ರಕರಣವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆರೋಪವು ಕೇವಲ ವಂಚನೆಗೆ ಸಂಬಂಧಿಸಿದೆ. ವ್ಯಾಪಾರ ವ್ಯವಹಾರ ನಡೆದ ಬಳಿಕ, ಇಲ್ಲಿ ಕ್ರಿಮಿನಲ್ ವಿಶ್ವಾಸ ದ್ರೋಹದ ಆರೋಪ ಬರಲು ಸಾಧ್ಯವಿಲ್ಲ ಎಂದು ಹೇಳಿದೆ. ಹೈಕೋರ್ಟ್ ವಂಚನೆ ಪ್ರಕರಣವನ್ನು ವಿಚಾರಣೆ ನಡೆಸಬೇಕಿತ್ತು. ಆದರೆ, ಇದನ್ನು ಕ್ರಿಮಿನಲ್ ಪ್ರಕರಣವಾಗಿ ನೋಡುವ ಅಗತ್ಯವಿಲ್ಲ. ಸಾಮಾನ್ಯವಾಗಿ, ಜಾಮೀನು ನಿರಾಕರಿಸುವ ಹೈಕೋರ್ಟ್ ಆದೇಶಗಳನ್ನು ನಾವು ರದ್ದುಗೊಳಿಸುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಹೈಕೋರ್ಟ್ ಆದೇಶವು ರದ್ದುಗೊಳ್ಳಲು ಯೋಗ್ಯವೆಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ದಂಪತಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ.