ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ರಾಜಭವನದ ಎದುರು ತಮ್ಮದೇ ಪ್ರತಿಮೆಯನ್ನು ತಾವೇ ಅನಾವರಣಗೊಳಿಸಿದ್ದಾರೆ. ಆನಂದ ಬೋಸ್ ಅವರು ರಾಜ್ಯಪಾಲರಾಗಿ ಎರಡು ವರ್ಷ ಪೂರೈಸಿದ್ದಕ್ಕಾಗಿ ರಾಜಭವನದ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ತಮ್ಮದೇ ಪ್ರತಿಮೆಯನ್ನು ತಾವೇ ಅನಾವರಣಗೊಳಿಸಿದ್ದಾರೆ. ರಾಜ್ಯಾಪಾಲ ಆನಂದ ಬೋಸ್ ಅವರ ನಡೆಯನ್ನು ಆಡಳಿತರಾಢ ಟಿಎಂಸಿ ಮತ್ತು ಇತರ ರಾಜಕೀಯ ಪಕ್ಷಗಳು ‘ನಾಚಿಕೆಗೇಡು’ ಎಂದು ಕರೆದಿವೆ.
ರಾಜ್ಯಪಾಲರು ಅಧಿಕಾರದಲ್ಲಿರುವಾಗಲೇ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದ ಬಗ್ಗೆ ವ್ಯಾಪಕ ಟೀಕೆ, ವ್ಯಂಗ್ಯ, ಟ್ರೋಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
“ನಮ್ಮ ರಾಜ್ಯಪಾಲರಾದ ಸಿ.ವಿ ಆನಂದ ಬೋಸ್ ಅವರು ತಮ್ಮದೇ ಆದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ, ಇದು ಕೇಳಿರದ ಸಂಗತಿಯಾಗಿದೆ. ಅವರು ಯಾವುದೋ ಪ್ರಚಾರಕ್ಕಾಗಿ ಇದನ್ನು ಮಾಡಿದ್ದಾರೆ. ಆದರೆ ವಿಷಯವೆಂದರೆ, ಮುಂದಿನ ಹೆಜ್ಜೆ ಏನು? ಅವರು ತಮ್ಮದೇ ಪ್ರತಿಮೆಗೆ ಹಾರ ಹಾಕುತ್ತಾರೆಯೇ? ಇದು ಮೆಗಾಲೊಮೇನಿಯಾಕ್‌ನ ಸಂಕೇತ” ಎಂದು ಟಿಎಂಸಿ ವಕ್ತಾರ ಜಯಪ್ರಕಾಶ್ ಮಜುಂದಾರ್ ಹೇಳಿದ್ದಾರೆ.
ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಅವರು ರಾಜ್ಯಾಪಾಲರ ಕ್ರಮವನ್ನು ‘ನಾಚಿಕೆಗೇಡು’ ಎಂದು ಕರೆದಿದ್ದಾರೆ. ಕಾಂಗ್ರೆಸ್ ವಕ್ತಾರ ಸೌಮ್ಯಾ ಐಚ್ ರಾಯ್, “ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಬಂಗಾಳದ ಸಂಸ್ಕೃತಿಯ ಮೇಲೆ ಸಣ್ಣತನದ ಆಟ ಆಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದೊಂದಿಗೆ ಸಂಯೋಜಿತವಾಗಿರುವ ಕಲಾವಿದ ಪಾರ್ಥ ಸಹಾ ಅವರು ಈ ಪ್ರತಿಮೆಯನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಹಾ ಅವರು ರಾಜ್ಯಪಾಲರನ್ನು ಖುದ್ದಾಗಿ ಭೇಟಿಯಾಗದೆ ಅವರ ಭಾವಚಿತ್ರವನ್ನು ಆಧರಿಸಿ ಫೈಬರ್ ಪ್ರತಿಮೆಯನ್ನು ರಚಿಸಿದ್ದಾರೆ.
ಈ ಪ್ರತಿಮೆಯನ್ನು ಗವರ್ನರ್ ಬೋಸ್ ಅವರೇ ಸ್ಥಾಪಿಸಿಲ್ಲ. ಆದರೆ, ಇದು ಕಲಾವಿದರು ಮತ್ತು ಭಾರತೀಯ ವಸ್ತುಸಂಗ್ರಹಾಲಯದಿಂದ ಉಡುಗೊರೆಯಾಗಿದೆ ಎಂದು ರಾಜ್ಯಪಾಲರ ಕಚೇರಿ ಸ್ಪಷ್ಟಪಡಿಸಿದೆ. ಹೀಗಿದ್ದರೂ, ಈ ಘಟನೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಜೀವಂತ ವ್ಯಕ್ತಿಯ ಪ್ರತಿಮೆ ಸ್ಥಾಪಿಸುವ ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ.
ಶನಿವಾರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ರಾಜ್ಯಪಾಲ ಬೋಸ್ ಅವರು ಬಂಗಾಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು “ಅತ್ಯಂತ ಕೆಟ್ಟದು” ಎಂದು ಬಣ್ಣಿಸಿದರು.
“ಈ ಪರಿಸ್ಥಿತಿಯು ರಾಜಕಾರಣಿಗಳಿಗೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ, ಬಂಗಾಳದ ಜನರು ಇದನ್ನು ಹೆಚ್ಚು ಕಾಲ ಸಹಿಸುವುದಿಲ್ಲ” ಎಂದ ಅವರು, ಬಂಗಾಳದ ರಾಜ್ಯಪಾಲರಾಗಿ ಎರಡು ವರ್ಷಗಳ ಅವಧಿಯನ್ನು “ಸಿಹಿ ಮತ್ತು ಹುಳಿ” ಎಂದು ಬಣ್ಣಿಸಿದರು.