ರಾಮನ ಜನ್ಮಭೂಮಿಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆದ ನಂತರ ಭಾರತಕ್ಕೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯೊಂದನ್ನ ನೀಡಿದ್ದಾರೆ. ಆ ಮೂಲಕ ದೇಶದ ಇತಿಹಾಸಕ್ಕೆ, ಸ್ವಾತಂತ್ರ್ಯ ವೀರರಿಗೆ ಅಪಮಾನ ಮಾಡಿದ್ದಾರೆ.
ಆರ್‌ಎಸ್‌ಎಸ್ – ಬಿಜೆಪಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಹೊಂದಿವೆ ಎಂಬುದು ಗೊತ್ತೇ ಇರುವ ವಿಚಾರ. ಆದರೆ, ಈಗ ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಕಂಗನಾ ರಣಾವತ್‌ರಂತಹ ಎಳಸುಗಳು ಮೋದಿ ಅಧಿಕಾರಕ್ಕೆ ಬಂದ ನಂತರ, 2014ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಿದ್ದರೆ, ಆರ್‌ಎಸ್‌ಎಸ್ ಮುಖ್ಯಸ್ಥರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕವೇ ದೇಶ ಸ್ವತಂತ್ರವಾಯಿತು ಎಂದು ಹೇಳುತ್ತಿದ್ದಾರೆ. ಇದು ಅವಿವೇಕತನದ ಪರಮಾವಧಿ.
ಬಿಜೆಪಿ – ಆರ್‌ಎಸ್‌ಎಸ್ ನಾಯಕರು ಅಥವಾ ನೇತಾರರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿರಲಿಲ್ಲ. ಆರ್‌ಎಸ್‌ಎಸ್ – ಬಿಜೆಪಿಗರಿಗೆ ಸ್ವಾತಂತ್ರ್ಯ, ಹೋರಾಟದ ಮಹತ್ವವೂ ಕೂಡ ತಿಳಿದಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುತ್ತಾ, ಕೋಮುದ್ವೇಷ, ದ್ವೇಷ ರಾಜಕಾರಣ ಮಾಡುತ್ತಿರುವ ಸಂಘಪರಿವಾರಕ್ಕೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದ ಬಗ್ಗೆ ಅರಿವೂ ಇಲ್ಲ.
ಸದಾ ವಿವಾದಾತ್ಮಕ ಹೇಳಿಕೆಗಳನ್ನ ನೀಡುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕಳೆದ ಎರಡು ತಿಂಗಳ ಹಿಂದೆ ಪುಣೆಯಲ್ಲಿ ನಡೆದ ಸಹಜೀವನ ವ್ಯಾಖ್ಯಾನಮಾಲಾದಲ್ಲಿ, ʼʼಎಲ್ಲರನ್ನೂ ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನ ಜಗತ್ತಿಗೆ ತೋರಿಸಬೇಕಾಗಿದೆ” ಎಂದಿದ್ದರು. ಈ ಹೇಳಿಕೆ ನೀಡುವ ಮೂಲಕ ತಾವೊಬ್ಬ ಸಾಮರಸ್ಯವಾದಿ ಎಂಬಂತೆ ಪೋಸು ಕೊಟ್ಟಿದ್ದರು. ಈಗ, ಆ ಹೇಳಿಕೆ ನೀಡಿದ ಕೆಲವೇ ತಿಂಗಳುಗಳ ಬಳಿಕ ಮೋಹನ್ ಭಾಗವತ್ ಮತ್ತೆ ತಮ್ಮ ಹಳೇ ಚಾಳಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ವರದಿ ಓದಿದ್ದೀರಾ?: ಗೃಹ ಬಳಕೆ ವೆಚ್ಚ ಸಮೀಕ್ಷೆ; ಆಳುವ ವರ್ಗವು ಈ ತಪ್ಪು ಕಲ್ಪನೆಯಿಂದ ಎಂದು ಮುಕ್ತವಾಗುತ್ತದೆ?
ಇಂಧೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರಿಗೆ ʼರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿರುವ ಮೋಹನ್ ಭಾಗವತ್, ʼʼಹಲವಾರು ಶತಮಾನಗಳಿಂದ ಶತ್ರುಗಳ ದಾಳಿ ಎದುರಿಸಿದ ಭಾರತದ ನಿಜವಾದ ಸ್ವಾತಂತ್ರ್ಯವನ್ನು ರಾಮ ಪ್ರಾಣ ಪ್ರತಿಷ್ಠಾಪನೆಯ ದಿನ ಸಾಧಿಸಿದ್ದೇವೆ. ಆ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಬೇಕು” ಎಂದು ಹೇಳಿದ್ದಾರೆ.
“2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಹಲವಾರು ಶತಮಾನಗಳವರೆಗೆ ಶತ್ರುದಾಳಿ ಎದುರಿಸಿದ ಭಾರತಕ್ಕೆ ಮಂದಿರ ಉದ್ಘಾಟನೆ ನಂತರ ನಿಜವಾದ ಸ್ವಾತಂತ್ರ್ಯ ದೊರೆಯಿತು. ಆ ದಿನ ನಿಜಕ್ಕೂ ಭಾರತಕ್ಕೆ ದೊಡ್ಡ ಹೆಮ್ಮೆಯ ದಿನ. ಇದನ್ನ ಕಣ್ಣಾರೆ ಕಂಡ ನಾವೇ ಧನ್ಯ” ಎಂದು ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.
ಇಲ್ಲಿ, ಗಮನಾರ್ಹ ವಿಚಾರವೆಂದರೆ, ಆರ್‌ಎಸ್‌ಎಸ್ ಎನ್ನುವ ಬಲಪಂಥೀಯ ಸಂಘಟನೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಸಂಘಟನೆಯಲ್ಲ. ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟಗಾರರನ್ನು ಅನುಮಾನದಿಂದ ನೋಡಿದ ಸಂಘಟನೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ನೇತೃತ್ವವನ್ನು ವಹಿಸಿದ್ದ ಮಹಾತ್ಮ ಗಾಂಧೀಜಿ ಅವರನ್ನ ದೇಶದ್ರೋಹಿ ಎಂದು ಕರೆದ ಸಂಘಟನೆ ಇದು. ಅಲ್ಲದೇ, ಗಾಂಧಿಜೀ ಅವರು ಮುಸ್ಲಿಂ ಪರ, ಗಾಂಧೀಜಿ ಇರುವವರೆಗೂ ದೇಶ ಉದ್ಧಾರವಾಗಲ್ಲ ಎಂದು ಗಾಂಧೀಜಿ ಅವರ ಹತ್ಯೆಗೆ ಸಂಚು ರೂಪಿಸಿದ ಸಂಘಟನೆ ಇದು. ಕೊನೆಗೆ ಆರ್‌ಎಸ್‌ಎಸ್ ಕಾರ್ಯಕರ್ತ ನಾಥುರಾಮ್ ಗೋಡ್ಸೆ ಗಾಂಧೀಜಿ ಅವರನ್ನು ಕೊಲೆ ಮಾಡಿದಾಗ ಅದನ್ನ ಸಂಭ್ರಮಿಸಿದ ಸಂಘಟನೆ ಇದು. ಗಾಂಧೀಜಿ ಹಂತಕ ನಾಥೋರಾಮ್ ಗೋಡ್ಸೆಯನ್ನು ದೇವರಂತೆ ಪೂಜಿಸಿರುವ ಸಂಘಟನೆ ಇದೇ ಆರ್‌ಎಸ್‌ಎಸ್.
ದೇಶದ ಇತಿಹಾಸದ ಬಗ್ಗೆ ಮಾತನಾಡುವಾಗ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಸಂಘಟನೆ ಭಾಗಿಯಾಗಿರಲಿಲ್ಲ ಎಂಬುದನ್ನು ಜನರಿಂದ ಮರೆಮಾಚುವ ಮತ್ತು ಮರೆಸುವ ಪ್ರಯತ್ನದಲ್ಲಿದೆ ಆರ್‌ಎಸ್‌ಎಸ್. ಭಾಗವತ್ ಸೇರಿದಂತೆ ಆರ್‌ಎಸ್‌ಎಸ್, ಬಿಜೆಪಿಗರಿಗೆ ತಮ್ಮ ಸಂಘಟನೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂಬ ಗಿಲ್ಟ್ ಕಾಡುತ್ತಲೇ ಇದೆ. ನಿಜ ಹೇಳಬೇಕೆಂದರೆ, ಬಿಜೆಪಿ-ಆರ್‌ಎಸ್‌ಎಸ್‌ಗೆ ಸ್ವಾತಂತ್ರ್ಯ ಹೋರಾಟದ ಅರಿವೇ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದು 16ನೇ ಶತಮಾನದಲ್ಲಿ. ರಾಣಿ ಅಬ್ಬಕ್ಕ, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ರಾಜ-ರಾಣಿಯರು, ಮಂಗಲ್ ಪಾಂಡೆಯಂತಹ ಯೋಧರು, ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್‌ರಂತಹ ಕ್ರಾಂತಿಕಾರಿ ಹೋರಾಟಗಾರರು, ಬಿರ್ಸಾ ಮುಂಡಾರಂತಹ ಆದಿವಾಸಿ ಯೋಧರು ಹಾಗೂ ಗಾಂಧಿ, ನೆಹರು, ಪಟೇಲ್ʼರಂತಹ ಹೋರಾಟಗಾರರ ತ್ಯಾಗ, ಬಲಿದಾನ, ಸತ್ಯಾಗ್ರಹಗಳ ಸುದೀರ್ಘ ಹೋರಾಟದಿಂದಾಗಿ ಭಾರತ ಸ್ವಾತಂತ್ರ್ಯವನ್ನು ಕಾಣುವಂತಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಹೆಜ್ಜೆಯಲ್ಲೂ ಹಿರಿಯರ ನಿಸ್ವಾರ್ಥ ಹೋರಾಟವಿದೆ, ದೇಶ ಪ್ರೇಮವಿದೆ.
ಆದರೆ, ಈ ಹಿರಿಮೆಯ ಮಹತ್ವ ಆರ್‌ಎಸ್‌ಎಸ್-ಬಿಜೆಪಿಗೆ ಗೊತ್ತಿಲ್ಲ. ಬ್ರಿಟಿಷರ ಬಳಿ ಕ್ಷಮೆಯಾಚಿಸಿ, ಸ್ವಾತಂತ್ರ್ಯ ಹೋರಾಟದಲ್ಲಿಯೂ ಕೋಮುದ್ವೇಷ ಬಿತ್ತಲು, ಸ್ವಾತಂತ್ರ್ಯ ಹೋರಾಟವನ್ನು ಧಾರ್ಮಿಕವಾಗಿ ಇಬ್ಬಾಗ ಮಾಡಲು ಯತ್ನಿಸಿದ ಸಾವರ್ಕರ್, ಗೋಳ್ವಾಲ್ಕರ್‌ನನ್ನು ತಮ್ಮ ದೇವರು, ನಾಯಕ ಎಂದು ಆರಾಧಿಸುವ, ಪೂಜಿಸುವ ಆರ್‌ಎಸ್‌ಎಸ್ ಇಂದಿಗೂ ಸ್ವಾತಂತ್ರ್ಯ ವಿರೋಧಿಯಾಗಿಯೇ ಉಳಿದಿದೆ. ಭಾಗವತ್ ಅವರ ಹೇಳಿಕೆ ಸ್ವಾತಂತ್ರ್ಯ ಹೋರಾಟಕ್ಕೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಭಾರತದ ಸ್ವಾತಂತ್ರ್ಯಕ್ಕೆ ಮಾಡಿದ ಅವಮಾನ.
ಈ ವರದಿ ಓದಿದ್ದೀರಾ?: 70 ಗಂಟೆ, 90 ಗಂಟೆ ಕೆಲಸ: ಉದ್ಯೋಗಿಗಳ ರಕ್ತ ಹೀರುವುದು ಲಾಭಕೋರ ಬಂಡವಾಳಿಗರ ಸಂಚು
ತಮ್ಮೊಳಗಿನ ಗಿಲ್ಟ್ ಅನ್ನು ಮುಚ್ಚಿಕೊಳ್ಳಲು ಆರ್ಎಸ್ಎಸ್-ಬಿಜೆಪಿಗರು ನಾನಾ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತೆ ಮತ್ತೆ ಸಾರ್ವಜನಿಕರ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಎಲ್ಲದರಲ್ಲೂ ರಾಮನನ್ನು ಎಳೆದು ತರುತ್ತಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಅರಿವಿದ್ದೂ ಮೋಹನ್ ಭಾಗವತ್ ಅಯೋಧ್ಯೆ ರಾಮಮಂದಿರ ಸ್ಥಾಪನೆಯಿಂದ ತಮಗೆ ಸ್ವಾತಂತ್ರ್ಯ ಸಿಕ್ಕಿತೆಂದು ಹೇಳಿಕೊಂಡಿದ್ದಾರೆ. ಅವರು ಕೋಮುದ್ವೇಷ, ಹಿಂದುತ್ವವಾದ ಸಂಕೋಲೆಯಿಂದ ಸ್ವಾತಂತ್ರ್ಯಗೊಳ್ಳುವ ಅಗತ್ಯವಿದೆ.