ಭಾರತದಲ್ಲಿ ಮೊದಲಿಗೆ ಜಾತಿಗಣತಿ ನಡೆದದ್ದು ಯಾವಾಗ? ಅಂಬೇಡ್ಕರ್ ಏನು ಹೇಳಿದ್ದರು?

Date:

Advertisements
ಭಾರತದ ಜನಸಂಖ್ಯೆ ವಿಚಾರದಲ್ಲಿ ಯಾವುದಾದರೂ ಉಪಯುಕ್ತ ಚಿಂತನೆ ನಡೆಯಬೇಕಾದರೆ ಜಾತಿ ಪದ್ಧತಿಯ ಮಹತ್ವವನ್ನು ಮರೆತು ಚಿಂತಿಸುವುದನ್ನು ಊಹಿಸುವುದು ಕಷ್ಟ. ಇಂದಿಗೂ ಭಾರತದ ಸಾಮಾಜಿಕ ವ್ಯವಸ್ಥೆಯ ತಳಹದಿ ಜಾತಿಯೇ ಆಗಿದೆ

“ಜಾತಿಗಣತಿ ಸಮಾಜವನ್ನು ಹೊಡೆಯುತ್ತದೆ, ವಿಭಜಿಸುತ್ತದೆ, ಜಾತಿಗಣತಿ ಮಾಡಿ, ಅದರ ಆಧಾರದ ಮೇಲೆ ಸಂಪತ್ತು ಮರುಹಂಚಿಕೆ ಮಾಡಬೇಕು ಎನ್ನುತ್ತಿರುವವರು ಅರ್ಬನ್ ನಕ್ಸಲರು, ಮಹಿಳೆಯರು ಡಬ್ಬಿಗಳಲ್ಲಿ ಕೂಡಿಟ್ಟ ಚಿನ್ನವನ್ನು ಹಂಚಿಕೆ ಮಾಡಬೇಕೆಂದು ಕೇಳುತ್ತಿದ್ದಾರೆ. ಜಾತಿಗಣತಿ ಹಿಂದು ಸಮಾಜಕ್ಕೆ ಕುತ್ತು ತರುತ್ತದೆ” ಎಂದೆಲ್ಲ ಅಬ್ಬರಿಸಿ-ಬೊಬ್ಬಿರಿದಿದ್ದ ಬಿಜೆಪಿಗರು, ಈಗ ತಮ್ಮ ವರಸೆ ಬದಲಿಸಿದ್ದಾರೆ. ತಮ್ಮ ವಿರೋಧಿಗಳನ್ನು ‘ಅರ್ಬನ್ ನಕ್ಸಲರು’ ಎಂದು ಕರೆಯುವ, ಜಾತಿಗಣತಿ ಅರ್ಬನ್ ನಕ್ಸಲರ ಬೇಡಿಕೆ ಎನ್ನುತ್ತಿದ್ದ ಪ್ರಧಾನಿ ಮೋದಿ, ಇದೀಗ ಮುಂದಿನ ಜನಗಣತಿಯಲ್ಲಿ ಜಾತಿಗಣತಿಯನ್ನೂ ನಡೆಸಲು ಒಪ್ಪಿಗೆ ನೀಡಿದ್ದಾರೆ. ಅವರ ಕೇಂದ್ರ ಸಚಿವ ಸಂಪುಟವು ಜಾತಿಗಣತಿ ನಡೆಸಲು ನಿರ್ಧರಿಸಿದೆ.

ಭಾರತದಲ್ಲಿ ಜಾತಿಗಣತಿ ನಡೆಸಬೇಕು, ಅದರ ವರದಿಯ ಆಧಾರದ ಮೇಲೆ ಮೀಸಲಾತಿಯ ಮಿತಿಯನ್ನು ವಿಸ್ತರಿಸಬೇಕು ಎಂಬುದು ಸಮಾಜವಾದಿಗಳ ಹತ್ತಾರು ವರ್ಷಗಳ ಬೇಡಿಕೆಯಾಗಿತ್ತು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಾತಿಗಣತಿ ವಿಷಯವನ್ನು ಕಾಂಗ್ರೆಸ್‌ ಕೈಗೆತ್ತಿಕೊಂಡಿತ್ತು. ತಮ್ಮ ಪ್ರಣಾಳಿಕೆಯಲ್ಲಿಯೂ ಆದ್ಯತೆಯ ಭರವಸೆಗಳಲ್ಲಿ ಜಾತಿಗಣತಿಯನ್ನು ಸೇರಿಸಿತ್ತು. ಜಾತಿಗಣತಿ ನಡೆಸಲೇಬೇಕೆಂದು ಕಾಂಗ್ರೆಸ್‌ ನಾಯಕ, ಹಾಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

ದೇಶದ ಉದ್ದಗಲಕ್ಕೂ ಜಾತಿಗಣತಿಯನ್ನು ಬಿಜೆಪಿ ವಿರೋಧಿಸಿತ್ತು. ಹಿಂದು ಸಮಾಜ ಛಿದ್ರವಾಗುತ್ತದೆ ಎಂದು ಪ್ರತಿಪಾದಿಸಿತ್ತು. ಆದರೆ, ಈಗ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಜಾತಿಗಣತಿ ನಡೆಸಲು ಅನುಮೋದನೆ ನೀಡಿದೆ. ಈ ಬೆನ್ನಲ್ಲೇ, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಬಿಜೆಪಿ ನಾಯಕರು ಜಾತಿಗಣತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಅಭಿವೃದ್ಧಿ ಸಾಧಿಸಲು ಜಾತಿಗಣತಿ ನೆರವಾಗುತ್ತದೆ ಎನ್ನುತ್ತಿದ್ದಾರೆ.

Advertisements

ಅಂದಹಾಗೆ, ಜಾತಿಗಣತಿ ಬೇಡಿಕೆ ಇಂದು-ನೆನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಜಾತಿಗಣತಿಗಳು ನಡೆದಿವೆ. ಜಾತಿಗಣತಿಗೆ ಆಗಲೂ ಈಗಿನಂತೆಯೇ ವಿರೋಧಗಳೂ ವ್ಯಕ್ತವಾಗಿದ್ದವು. ಸ್ವಾತಂತ್ರ್ಯಾ ನಂತರದಲ್ಲಿಯೂ ಜಾತಿಗಣತಿ ನಡೆಸಬೇಕೆಂಬ ಬೇಡಿಕೆಗಳು ನಿರಂತರವಾಗಿ ಸರ್ಕಾರದ ಮುಂದಿದ್ದವು. ಆದರೆ, ಸ್ವಾತಂತ್ರ್ಯಾ ನಂತರದಲ್ಲಿ ಜಾತಿಗಣತಿ ನಡೆದಿಲ್ಲ ಎಂಬುದು ಗಮನಾರ್ಹ. ಅದಕ್ಕೆ, ಕಾಂಗ್ರೆಸ್‌ ಆಗಾಗ್ಗೆ ಟೀಕೆಗೆ ಗುರಿಯಾಗುವುದೂ ವಾಸ್ತವ.

ಸ್ವಾತಂತ್ರ್ಯಾ ಪೂರ್ವದಲ್ಲಿ ಜಾತಿ ಜನಗಣತಿ

ಭಾರತದಲ್ಲಿ ಮೊದಲ ಬಾರಿಗೆ ಜನಗಣತಿ ನಡೆದದ್ದು, 1881ರಲ್ಲಿ, ಬ್ರಿಟಿಷ್ ಆಳ್ವಿಕೆಯಲ್ಲಿ. ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ಭಾರತೀಯರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿತ್ತು. ಜನಸಂಖ್ಯೆಗೆ ತಕ್ಕಂತೆ ತಮ್ಮ ಆಡಳಿತ ವರಸೆಯನ್ನು ಬದಲಿಸಿಕೊಳ್ಳುವ ಮತ್ತು ಹೇರುವ ಹಾಗೂ ತೆರಿಗೆ ವ್ಯವಸ್ಥೆಯನ್ನು ನವೀಕರಿಸುವ ಉದ್ದೇಶ ಅವರದ್ದಾಗಿತ್ತು. ಹಾಗಾಗಿಯೇ, 1881ರಲ್ಲಿ ಜನಗಣತಿ ನಡೆಸಿದರು. ಮಾತ್ರವಲ್ಲದೆ, ಪ್ರತಿ 10 ವ‍ರ್ಷಗಳಿಗೊಮ್ಮೆ ಜನಗಣತಿ ನಡೆಸಲು ನಿರ್ಧರಿಸಿದರು.

ಆನಂತರದಲ್ಲಿ, ಜನಗಣತಿ ಜೊತೆಗೆ ಜಾತಿಗಣತಿಯನ್ನೂ ಸೇರಿಸಿದರು. ಅದರಲ್ಲಿ, ಮುಖ್ಯವಾಗಿ, ಹಿಂದು ಸಮುದಾಯದಲ್ಲಿ ಅಸ್ಪೃಶ್ಯರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು 1891ರಲ್ಲಿ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ಬ್ರಿಟಿಷರು ನಡೆಸಿದರು.

ಆದರೆ, ಜಾತಿಗಣತಿ ನಡೆಸುವುದನ್ನು ಸವರ್ಣೀಯ ಹಿಂದುಗಳು ವಿರೋಧಿಸಿದರು. ‘ಹಿಂದು ಸಮಾಜವನ್ನು ಒಡೆಯಲಾಗುತ್ತಿದೆ. ಹಿಂದುಗಳಿಂದ ಅಸ್ಪೃಶ್ಯರನ್ನು ಬೇರ್ಪಡಿಸಿ ಹಿಂದು ಸಮುದಾಯದ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸವರ್ಣೀಯರ ಆಕ್ಷೇಪ, ವಿರೋಧಗಳಿಗೆ ಬ್ರಿಟಿಷರು ಜಗ್ಗಲಿಲ್ಲ. ಜಾತಿಗಣತಿ ನಡೆಸಿದರು. ಜನಸಂಖ್ಯೆಯನ್ನು ಜಾತಿ, ಬುಡಕಟ್ಟು ಮತ್ತು ವಿವಿಧ ಶ್ರೇಣಿಗಳ ಆಧಾರದಲ್ಲಿ ವರ್ಗೀಕರಿಸಿದರು. ಇದಕ್ಕೆ 1901ರ ಜಾತಿ ಜನಗಣತಿಯು ನೆರವಾಯಿತು.

1911ರಲ್ಲಿ ನಡೆದ ಜನಗಣತಿಯು ಜಾತಿಗಣತಿಗೆ ಸ್ಪಷ್ಟ ರೂಪ ಕೊಟ್ಟಿತು. ಆ ಜನಗಣತಿಯಲ್ಲಿ ಜಾತಿಗಣತಿಗಾಗಿ 10 ಪ್ರಮುಖ ಅಂಶಗಳನ್ನು ಹಾಕಿಕೊಂಡು ಗಣತಿ ಮಾಡಲಾಯಿತು.

  1. ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು
  2. ಬ್ರಾಹ್ಮಣರು ಮತ್ತು ಹಿಂದು ಗುರುಗಳಿಂದ ಮಂತ್ರದೀಕ್ಷೆಯನ್ನು ಪಡೆಯದವರು
  3. ವೇದ ಪ್ರಮಾಣವನ್ನು ಒಪ್ಪದವರು
  4. ಹಿಂದು ಧರ್ಮದ ಹಿರಿಯ ದೇವತೆಗಳನ್ನು ಪೂಜಿಸದವರು
  5. ಬ್ರಾಹ್ಮಣ ಪುರೋಹಿತರನ್ನು ಒಪ್ಪದವರು
  6. ಸಂಪ್ರದಾಯದ ಬ್ರಾಹ್ಮಣರು ಸೇರಿಸಬಯಸದವರು
  7. ಸಾಧಾರಣ ಹಿಂದು ದೇವಾಲಯದ ಒಳಗೆ ಪ್ರವೇಶ ಪಡೆಯದವರು
  8. ಊರಿನಿಂದ ಹೊರದೂಡಲ್ಪಟ್ಟವರು
  9. ಸತ್ತವರನ್ನು ಹೂಳುವವರು
  10. ಗೋವನ್ನು ಆರಾಧಿಸದವರು ಮತ್ತು ಗೋಮಾಂಸವನ್ನು ತಿನ್ನುವವರು.

ಈ ಮಾನದಂಡಗಳ ಆಧಾರದ ಮೇಲೆ ಹಿಂದು ಸಮುದಾಯದೊಳಗೆ ಶೋಷಣೆಗೆ ಒಳಗಾದ, ಅಂಚಿಗೆ ತಳ್ಳಲ್ಪಟ್ಟ ಅಸ್ಪೃಶ್ಯರು ಮತ್ತು ಇತರ ಸಮುದಾಯಗಳನ್ನು ಬ್ರಿಟಿಷರು ಗುರುತಿಸಿದರು.

1911ಯಲ್ಲಿ ನಡೆದ ಜನಗಣತಿಯು ಅಸ್ಪೃಶ್ಯರ ಸಂಖ್ಯೆ ಎಷ್ಟಿದೆ ಎಂದು ಪಟ್ಟಿ ಮಾಡಿತ್ತೋ, ಅದನ್ನು 1921ರ ಜನಗಣತಿಯೂ ದೃಢಪಡಿಸಿತು. ಜೊತೆಗೆ, 1921ರಲ್ಲಿನ ಜನಗಣತಿಯು ಭಾರತದಲ್ಲಿ ಜನಸಂಖ್ಯೆ ಕುಗ್ಗಿದೆ ಎಂಬುದನ್ನು ಸೂಚಿಸಿತು. ಹೀಗಾಗಿ, ಆ ವರ್ಷವನ್ನು ‘ಜನಸಂಖ್ಯಾ ಸಡಿಲಿಕೆಯ ವರ್ಷ’ (Year of Great Divide) ಎಂದು ಕರೆಯಲಾಗುತ್ತದೆ.

ಆ ನಂತರದ 1931ರ ಜನಗಣತಿಯಲ್ಲಿ, “ಅಸ್ಪೃಶ್ಯ ವರ್ಗದವರಲ್ಲಿ ಅರಿವು ಮತ್ತು ಸಂಘಟನೆ ಬೆಳೆದಿದೆ. ಶಾಸನ ಸಭೆಗಳಲ್ಲಿ ಅಧಿಕಾರಯುತವಾದ ಪ್ರಾತಿನಿಧ್ಯ ನೀಡಬೇಕಿರುವುದರಿಂದ, ದಲಿತರ ಸಂಖ್ಯೆ ಎಷ್ಟು ಎಂಬುದನ್ನು ತಿಳಿಯಲು ಯತ್ನಿಸುವುದು ಸೂಕ್ತವಾಗಿದೆ” ಎಂದು ಜನಗಣತಿಯ ನಿರ್ದೇಶಕರು ಹೇಳಿದ್ದಾರೆ. ಆದಾಗ್ಯೂ, ಮಹಾಯುದ್ಧಗಳ ಕಾರಣದಿಂದಾಗಿ 1941ರಲ್ಲಿ ನಡೆಯಬೇಕಿದ್ದ ಜಾತಿ ಜನಗಣತಿ ಪೂರ್ಣಗೊಳ್ಳಲಿಲ್ಲ. ಅರ್ಧಕ್ಕೆ ಮೊಟಕಗೊಂಡಿತು.

ಈ ವರದಿ ಓದಿದ್ದೀರಾ?: ಭಾರತದಲ್ಲಿ ಮಳೆ ಮುನ್ಸೂಚನೆ ತಪ್ಪಾಗುವುದು ಏಕೆ? ಇತಿಹಾಸ ಹೇಳುವುದೇನು?

ಆ ಸಂದರ್ಭದಲ್ಲಿ ಜಾತಿಗಣತಿ ಕುರಿತಾದ ಚರ್ಚೆಗಳು ನಡೆದಿದ್ದವು. ಪ್ರಸ್ತುತ ಬಿಜೆಪಿ ಮತ್ತು ಸಂಘಪರಿವಾರವು ಸ್ವಾತಂತ್ರ್ಯಾ ಪೂರ್ವದಲ್ಲಿ ಡಾ. ಬಿ.ಆರ್ ಅಂಬೇಡ್ಕರ್‌ ಅವರು ಜಾತಿಗಣತಿಯನ್ನು ವಿರೋಧಿಸಿದ್ದರು ಎಂಬ ಸುಳ್ಳು ವಾದವನ್ನು ಹರಿಬಿಡುತ್ತಿದ್ದಾರೆ. ಅದನ್ನೇ ಹಲವರು ನಂಬಿಸಿದ್ದಾರೆ.

ಆದರೆ, ಅಂಬೇಡ್ಕರರು ಜಾತಿಗಣತಿ ನಡೆಯಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದರು. ಸ್ವಾತಂತ್ರ್ಯಕ್ಕೂ ಮುನ್ನ ಜಾತಿಗಣತಿಯನ್ನು ವಿರೋಧಿಸುತ್ತಿದ್ದವರ ಕುರಿತು ಬರೆದಿದ್ದ ಅಂಬೇಡ್ಕರ್, “ಜನಗಣತಿಯನ್ನು ಜಾತಿ ಆಧಾರದಲ್ಲಿ ನಡೆಸಲು ಸವರ್ಣೀಯ ಹಿಂದುಗಳು ಯಾವಾಗಲೂ ವಿರೋಧಿಸುತ್ತಾರೆ. ಜಾತಿ ಮತ್ತು ಬುಡಕಟ್ಟುಗಳ ವಿಭಜನೆ ಸ್ವರೂಪ ನಿಧಾನವಾಗಿ ಬದಲಾಗುತ್ತಿರುವುದರಿಂದ, ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯಿಂದ ಈ ಸಂಖ್ಯೆಯನ್ನು ನಿರ್ಣಯಿಸಬಾರದೆಂದು 1901ರಲ್ಲಿ ನಡೆದ ಜನಗಣತಿಯಲ್ಲಿ ಒಂದು ಸಲಹೆ ಬಂದಿತ್ತು. ಆದರೆ, ಅಂತಹ ಆಕ್ಷೇಪ/ಸಲಹೆಗಳು ಜನಗಣತಿಯ ನಿರ್ದೇಶಕರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ” ಎಂದಿದ್ದಾರೆ.

“ಜನಗಣತಿಯ ನಿರ್ದೇಶಕರ ದೃಷ್ಟಿಯಲ್ಲಿ ಜಾತಿ ಆಧಾರದ ಮೇಲೆ ಜನಗಣತಿ ಮಾಡುವುದು ಅತಿ ಮುಖ್ಯ ಅವಶ್ಯಕವೆನಿಸಿತು. ಅದಕ್ಕೆ ಪೋಷಕವಾಗಿ ಜನಗಣತಿಯ ನಿರ್ದೇಶಕರು ಮಂಡಿಸಿದ ವಾದವೆಂದರೆ- ‘ಭಾರತದ ಜನಸಂಖ್ಯೆ ವಿಚಾರದಲ್ಲಿ ಯಾವುದಾದರೂ ಉಪಯುಕ್ತವಾದ ಚಿಂತನೆ ನಡೆಯಬೇಕಾದರೆ ಅಲ್ಲಿ ಜಾತಿ ಪದ್ಧತಿಯ ಮಹತ್ವವನ್ನು ಮರೆತು ಚಿಂತಿಸುವುದನ್ನು ನಾವು ಊಹಿಸುವುದು ಕಷ್ಟ. ಇಂದಿಗೂ ಭಾರತದ ಸಾಮಾಜಿಕ ವ್ಯವಸ್ಥೆಯ ತಳಹದಿ ಜಾತಿಯೇ. ಆದ್ದರಿಂದ ಭಾರತದ ಸಾಮಾಜಿಕ ಪರಿವರ್ತನೆಯನ್ನು ಗುರುತಿಸಲು ಜಾತಿಯ ಗಣನೆಯು ಅತ್ಯವಶ್ಯಕ’ ಎಂಬುದಾಗಿತ್ತು” ಎಂದು ಅಂಬೇಡ್ಕರ್ ಹೇಳಿದ್ದಾರೆ. ಜಾತಿಗಣತಿ ಬಗ್ಗೆ ಅಂಬೇಡ್ಕರ್ ಬರೆದಿದ್ದನ್ನು ‘ಅಂಬೇಡ್ಕರ್ ಭಾಷಣಗಳು ಮತ್ತು ಬರಹಗಳು – ಸಂಪುಟ 4’ರಲ್ಲಿ ಕಾಣಬಹುದು.

ಸ್ವಾತಂತ್ರ್ಯಾ ನಂತರದಲ್ಲಿ ಜಾತಿ ಜನಗಣತಿ

ಸ್ವಾತಂತ್ರ್ಯಾ ನಂತರದಲ್ಲಿ 1951ರಲ್ಲಿಯೇ ಮೊದಲ ಜಾತಿ ಜನಗಣತಿ ನಡೆಯಿತು. ಆಗಷ್ಟೇ ದೇಶ ವಿಭಜನೆಯಾಗಿತ್ತು. ಹೀಗಾಗಿ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರನ್ನು ಗುರುತಿಸಿ ಅಂಕಿಅಂಶ ಪಡೆಯುವುದು ಆ ಗಣತಿಯ ಉದ್ದೇಶವಾಗಿದ್ದರಿಂದ ಜಾತಿಗಣತಿಗೆ ಹೆಚ್ಚು ಮಹತ್ವ ದೊರೆಯಲಿಲ್ಲ. ಆದಾಗ್ಯೂ, ದೇಶದ ಒಟ್ಟು ಜನಸಂಖ್ಯೆಯಲ್ಲಿ 84% ಜನರು ಅಶಿಕ್ಷಿತರಾಗಿದ್ದಾರೆ ಎಂಬುದನ್ನು ಗಣತಿ ಒತ್ತಿ ಹೇಳಿತು.

ಆ ನಂತರದಲ್ಲಿ, ಜಾತಿಗಣತಿ ನಡೆಯಲೇ ಇಲ್ಲ. 1961ರಲ್ಲಿ ಜನಗಣತಿಯಲ್ಲಿ ಭಾಷಾ ಆಧಾರಿತ ಮಾಹಿತಿಯನ್ನು ಸೇರ್ಪಡೆ ಮಾಡಲಾಯಿತು. ಆದರೆ, ಜಾತಿ ಆಧಾರಿತ ಗಣತಿಯನ್ನು ಕೈಬಿಡಲಾಯಿತು. ಅಂದು ಗಣತಿಯಿಂದ ಹೊರಹಾಕಲ್ಪಟ್ಟ ಜಾತಿ ಆಧಾರಿತ ಗಣತಿಯು ಈವರೆಗೆ ಜನಗಣತಿಯಲ್ಲಿ ಸ್ಥಾನಪಡೆದಿಲ್ಲ.

ಈ ವರದಿ ಓದಿದ್ದೀರಾ?: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?

1971ರಲ್ಲಿ ಜನಗಣತಿಯಲ್ಲಿ ಕುಟುಂಬ ಯೋಜನೆಗಳ ಪ್ರಭಾವ, ಪ್ರಯೋಜನಗಳನ್ನು ಅಳೆಯುವುದು ಪ್ರಧಾನವಾಯಿತು. 1981ರಲ್ಲಿ ನಗರೀಕರಣ ಮತ್ತು ಗೃಹವಾಸ ಮಾಹಿತಿಗೆ ಒತ್ತುಕೊಡಲಾಯಿತು. 1991ರಲ್ಲಿ ಮತದಾರರ ಸಂಖ್ಯೆಯನ್ನು ಅಳೆಯುವುದು ಜನಗಣತಿಯ ಆದ್ಯತೆಯಾಯಿತು. 2001ರಲ್ಲಿ ಆಧುನಿಕ ಮಾಹಿತಿ ಸಂಗ್ರಹಣಾ ತಂತ್ರಜ್ಞಾನದ ಬಳಕೆ ಮೇಲೆ ಕೇಂದ್ರೀಕರಿಸಲಾಯಿತು. 2011ರ ಜನಗಣತಿಯಲ್ಲಿ ಜಾತಿಯು ಗಣತಿಯ ಭಾಗವಾದರೂ, ಹೆಚ್ಚು ಮಹತ್ವ ಪಡೆಯಲಿಲ್ಲ. ಅದು ಜಾತಿಗಣತಿಯ ಉದ್ದೇಶವೂ ಆಗಿರಲಿಲ್ಲ. ಹೀಗಾಗಿ, ಜಾತಿ ಗುರುತಿಗಾಗಿ ಅಷ್ಟೇ ಜಾತಿಯನ್ನು ಜನಗಣತಿ ಒಳಗೊಂಡಿತ್ತು.

ಇನ್ನು, 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕರೋನ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಸದ್ಯ, ಕರೋನ ಕಾಣೆಯಾಗಿದೆ. ಹಲವಾರು ಚುನಾವಣೆಗಳು ನಡೆದಿವೆ. ಸರ್ಕಾರ, ಬೃಹತ್ ಮಹಾ ಕುಂಭಮೇಳವನ್ನೂ ನಡೆಸಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿ, ದೇಶದ ಮೂಲೆ-ಮೂಲೆಯ ಜನರು ರಾಮಮಂದಿರ ಭೇಟಿ ಕೊಡಲು ರೈಲ್ವೇ ವ್ಯವಸ್ಥೆಯನ್ನು ಒದಗಿಸಿದೆ. ಆದರೆ, ಜನಗಣತಿಯನ್ನು ಮಾತ್ರ ನಡೆಸಿಲ್ಲ.

ಬಹುಶಃ, 2026ರಲ್ಲಿ ಜನಗಣತಿ ನಡೆಯುವ ಸಾಧ್ಯತೆಗಳಿವೆ. ಈ ಜನಗಣತಿಯಲ್ಲಿ ಜಾತಿಗಣತಿಯನ್ನೂ ಸೇರಿಸುವುದಾಗಿ ಮೋದಿ ಸರ್ಕಾರ ಹೇಳಿಕೊಂಡಿದೆ. ಆದರೆ, ಸದ್ಯ, ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾತಿಗಣತಿ ನಡೆಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂಬ ಅಭಿಪ್ರಾಯಗಳಿವೆ. ಮುಂದಿನ ಜನಗಣತಿ ನಡೆಯುವ ವೇಳೆಗೆ ಬಿಹಾರ ಚುನಾವಣೆ ಮುಗಿದುಹೋಗಿರುತ್ತದೆ. ಹಾಗಾಗಿ ಜನಗಣತಿಯಲ್ಲಿ ಜಾತಿಗಣತಿಯನ್ನು ಒಳಗೊಳ್ಳಲಾಗುತ್ತದೆಯೋ-ಇಲ್ಲವೋ ಎಂಬ ಅನುಮಾನಗಳೂ ಇವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X