“ಸುಪ್ರೀಮ್ ಎತ್ತಿ ಹಿಡಿದಿದ್ದ ಮಾಲೆಗಾಂವ್ ಸಾಕ್ಷ್ಯಾಧಾರಗಳು ಎಲ್ಲಿ ಮಾಯವಾದವು?” ಇದು ಮಾಲೆಗಾಂವ್ ಸ್ಫೋಟ ಪ್ರಕರಣದ ಆಪಾದಿತರ ಕುರಿತು ನ್ಯಾಯಾಲಯದಲ್ಲಿ ‘ಮೆದು’ ನಿಲುವು ತಳೆಯುವಂತೆ ಒತ್ತಡ ಹೇರಲಾಗಿತ್ತೆಂದು 2015ರಲ್ಲಿ ಆಪಾದಿಸಿದ್ದ ಅಂದಿನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಗುರುವಾರ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗೆ ಮಂಗಳೂರಿನಿಂದ ನೀಡಿರುವ ಪ್ರತಿಕ್ರಿಯೆಯಿದು.
‘ಹೀಗೆಯೇ ಆಗುತ್ತದೆಂದು ನನಗೆ ಗೊತ್ತಿತ್ತು. ನಿಜವಾದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ನೀಡದೆ ಹೋದರೆ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ? ನ್ಯಾಯಾಲಯಕ್ಕೆ ಅಂತಿಮವಾಗಿ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ ಹಂತದಲ್ಲಿ ನಾನು ಪ್ರಾಸಿಕ್ಯೂಟರ್ ಆಗಿರಲಿಲ್ಲ. 2017ರಿಂದ ಈ ಕೇಸಿನಲ್ಲಿ ನಾನು ಇಲ್ಲ. ಅಲ್ಲಿಯ ತನಕ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನಾನು ಒದಗಿಸಿದ್ದೆ. ಸುಪ್ರೀಮ್ ಕೋರ್ಟ್ ಕೂಡ ಈ ಈ ಸಾಕ್ಷ್ಯಾಧಾರಗಳನ್ನು ಎತ್ತಿ ಹಿಡಿದಿತ್ತು. ಕಡೆಗೆ ಅದೆಲ್ಲ ಎಲ್ಲಿ ಮಾಯವಾಗಿ ಹೋಯಿತು’ ಎಂದು ಸಾಲ್ಯಾನ್ ಪ್ರಶ್ನಿಸಿದ್ದಾರೆ.
“ಈ ತೀರ್ಪನ್ನು ದೀರ್ಘ ಕಾಲದಿಂದ ನಿರೀಕ್ಷಿಸಿದ್ದೆ. ಈಗಾಗಲೆ ದಾಖಲು ಮಾಡಲಾಗಿದ್ದ ಸಾಕ್ಷ್ಯಾಧಾರಕ್ಕಿಂತ ಭಿನ್ನವಾದದ್ದನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರೆ ಏನು ಬೇಕಾದರೂ ನಡೆಯಬಹುದು. ಮೊದಲು ಸಲ್ಲಿಸಿದ್ದ ಸಾಕ್ಷ್ಯಾಧಾರವನ್ನು ಸುಳ್ಳು ಎಂದಿತ್ತು ಎನ್.ಐ.ಎ. (ನ್ಯಾಶನಲ್ ಇನ್ವೆಸ್ಟಿಗೇಟಿಂಗ್ ಏಜೆನ್ಸಿ). ಪ್ರಕರಣದ ಮರು ತನಿಖೆಯನ್ನು ನಡೆಸಿತು. ಸಾಕ್ಷೀದಾರರ ಹೇಳಿಕೆಗಳನ್ನು ‘ರೀರೆಕಾರ್ಡ್’ ಮಾಡಲಾಯಿತು. ಹೊಸ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈಗ ಹೊರಬಿದ್ದಿರುವ ತೀರ್ಪು ಈ ಹೊಸ ಸಾಕ್ಷ್ಯಾಧಾರಗಳನ್ನು ಆಧರಿಸಿದೆ” ಎಂದು ರೋಹಿಣಿ ಹೇಳಿದ್ದಾರೆ.
“ಈ ತೀರ್ಪಿನಿಂದ ನನಗೆ ನಿರಾಶೆ ಕೂಡ ಆಗಿಲ್ಲ, ಯಾಕೆಂದರೆ ಇಂತಹುದೆಲ್ಲ ನನಗೆ ಮಾಮೂಲಾಗಿ ಹೋಗಿದೆ. ಇಂತಹುದು ನಡೆದಾಗ ಸಂವೇದನೆಗಳನ್ನು ಕಳೆದುಕೊಳ್ಳುತ್ತೇವೆ. ನಿಜ ಹೊರಬರುವುದು ಯಾರಿಗೂ ಬೇಕಿಲ್ಲ. ಬಹಳ ಶ್ರಮಪಟ್ಟು ಕೆಲಸ ಮಾಡುತ್ತೇವೆ. ಆದರೆ ಕೆಲವರಿಗೆ ಅದು ಹಿಡಿಸುವುದಿಲ್ಲ. ಅಂತಿಮವಾಗಿ ಈ ವೈಫಲ್ಯ ಯಾರದು? ನಮ್ಮದೇ ಜನರ ವೈಫಲ್ಯ. ಸರ್ಕಾರದ ವೈಫಲ್ಯ ಅಲ್ಲ, ಯಾಕೆಂದರೆ ಜನರೇ ಈ ಸರ್ಕಾರವನ್ನು ಆರಿಸಿದ್ದಾರೆ. ಚುನಾಯಿತ ಸರ್ಕಾರ ತನಗೆ ಬೇಕಾದಂತೆ ಆಡಳಿತ ಮಾಡುತ್ತದೆ. ಹೀಗಾಗಿ ಸರ್ಕಾರವನ್ನು ದೂಷಿಸಲು ಬರುವುದಿಲ್ಲ, ನಿಮ್ಮನ್ನು ನೀವೇ ದೂಷಿಸಿಕೊಳ್ಳಬೇಕು” ಎಂಬ ಅವರ ಪ್ರತಿಕ್ರಿಯೆ ಗಮನಾರ್ಹ.
ಕೇಂದ್ರದಲ್ಲಿ ಹೊಸ ಸರ್ಕಾರ (ಬಿಜೆಪಿ ನೇತೃತ್ವದ ಎನ್.ಡಿ.ಎ.) ಆರಿಸಿ ಬಂದ ನಂತರ ‘ಮೆದು ಧೋರಣೆ’ ತಳೆಯುವಂತೆ ಎನ್.ಐ.ಎ. ತಮ್ಮ ಮೇಲೆ ಒತ್ತಡ ಹೇರಿತ್ತು. ಎನ್.ಐ.ಎ.ಯ ಅಧಿಕಾರಿಯೊಬ್ಬರು ದೂರವಾಣಿ ಕರೆ ಮಾಡಿದ್ದರು. ಬಂದು ತಮ್ಮನ್ನು ಭೇಟಿ ಮಾಡುವಂತೆ ಸೂಚಿಸಿದ್ದರು ಎಂದು 2015ರ ಜೂನ್ ತಿಂಗಳಿನಲ್ಲಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಗೆ ನೀಡಿದ್ದ ಸಂದರ್ಶನದಲ್ಲಿ ರೋಹಿಣಿ ಸಾಲ್ಯಾನ್ ತಿಳಿಸಿದ್ದರು.
“ದೂರವಾಣಿಯಲ್ಲಿ ಮಾತಾಡಲು ಆ ಅಧಿಕಾರಿ ಬಯಸಲಿಲ್ಲ. ಹೀಗಾಗಿ ನನ್ನನ್ನು ಭೇಟಿಯಾಗಿದ್ದರು. ಮೆದು ಧೋರಣೆ ತಳೆಯುವಂತೆ ಸಂದೇಶವಿರುವುದಾಗಿ ತಿಳಿಸಿದರು ಎಂಬುದು ಸಾಲ್ಯಾನ್ ಆಪಾದನೆಯಾಗಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ನಾನು ನ್ಯಾಯಾಲಯದ ಮುಂದೆ ವಾದ ಮಂಡಿಸಕೂಡದು, ನನ್ನ ಬದಲು ಮತ್ತೊಬ್ಬ ವಕೀಲರು ಹಾಜರಾಗುವರು ಎಂಬುದಾಗಿ ‘ಉನ್ನತ ಹಂತಗಳಲ್ಲಿರುವವರ’ ಸೂಚನೆಯೆಂದು ನನಗೆ ತಿಳಿಸಲಾಗಿತ್ತು. ಆ ನಂತರ ಎನ್.ಐ.ಎ. ವಕೀಲರ ಯಾದಿಯಿಂದ ನನ್ನ ಹೆಸರನ್ನು ತೆಗೆದು ಹಾಕಲಾಯಿತು. ಆದರೆ ಗೃಹಸಚಿವಾಲಯ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ನನಗೆ ಗೊತ್ತಿದ್ದಂತೆ ಸಂಗತಿ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇತ್ತು. ನನ್ನ ಹೆಸರಿನ ಅಧಿಸೂಚನೆಯನ್ನು ರದ್ದು ಮಾಡಿರುವ ಸ್ಥಿತಿಗತಿ ಏನೆಂದು ನನಗೆ ಈಗಲೂ ಗೊತ್ತಿಲ್ಲ” ಎಂದು ರೋಹಿಣಿ ತಿಳಿಸಿದ್ದಾರೆ.